ಇದ್ದೂ ಇಲ್ಲದಂತಾದ ಬೆಳಗಾವಿ ಪಾಲಿಕೆ!”
ಗಣೇಶೋತ್ಸವ ಸಿದ್ಧತೆಯಲ್ಲಿ ಶೇ.90% ಕೆಲಸ ಪಾಲಿಕೆಯದು… ಆದರೆ ಕ್ರೆಡಿಟ್? ಬೇರೆಯವರ ಖಾತೆ!
ಮೇಯರ್–ನಗರಸೇವಕರನ್ನು ಪಕ್ಕಕ್ಕಿಟ್ಟು ಅಧಿಕಾರಿಗಳ ಸಭೆ; ಪಾಲಿಕೆಯ ಅಸ್ತಿತ್ವವೇ ಪ್ರಶ್ನಾರ್ಹ
“ಬೆಳಗಾವಿ ಪಾಲಿಕೆ: ಆಟಕ್ಕುಂಟು, ಲೆಕ್ಕಕ್ಕಿಲ್ಲ!
ಸ್ವಚ್ಛತೆ–ಬೆಳಕು–ಸೌಂದರ್ಯೀಕರಣದಲ್ಲಿ ಪಾಲಿಕೆಯ ಶ್ರಮ, ನಿರ್ಧಾರಗಳಲ್ಲಿ ಮಾತ್ರ ಕಾಣದ ಹೆಸರು
ಬೆಳಗಾವಿ
ಒಮ್ಮೆ ಗಣೇಶೋತ್ಸವ ಮಹಾಮಂಡಳಗಳ ಸಭೆ ಎಂದರೆ — ಮಹಾನಗರ ಪಾಲಿಕೆಯ ಮೇಯರ್ ಅಧ್ಯಕ್ಷತೆ, ಆಯುಕ್ತರ ಉಪಸ್ಥಿತಿ, ಪೊಲೀಸ್ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳ ಸಜ್ಜನಿಕೆಯ ಸಂವಾದ. ಅದು ಕಡ್ಡಾಯ ಸಂಪ್ರದಾಯವಾಗಿತ್ತು. ಆದರೆ ಈ ಬಾರಿ ಆ ನೋಟವೇ ಮಾಯವಾಗಿದೆ.
ಮಹತ್ವದ ಸಭೆಗಳು ನಡೆದದ್ದು ಜಿಲ್ಲಾಡಳಿತ ಮತ್ತು ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಮಾತ್ರ. ಮೇಯರ್? ಉಪಮೇಯರ್? ಆಯುಕ್ತ? – ಯಾರಿಗೂ ಆಹ್ವಾನವೇ ಇಲ್ಲ. ಸ್ಥಳೀಯ ಮಟ್ಟದಲ್ಲಿ ನಡೆದ ಸಭೆಗಳಿಗೂ ನಗರಸೇವಕರನ್ನು ಕರೆಯದಿರುವುದು ಮತ್ತೊಂದು ಆಶ್ಚರ್ಯದ ಸಂಗತಿ.
*ಪಾಲಿಕೆಯ ಶ್ರಮ – ಇತರರ ಹೆಸರು*
ಗಣೇಶೋತ್ಸವದ ಹೊಣೆಗಾರಿಕೆಯಲ್ಲಿ ಪಾಲಿಕೆಯ ಪಾಲು ಅಸಾಧಾರಣ. ನಗರದ ಶೇ.90 ರಷ್ಟು ಸಿದ್ಧತೆ – ಸ್ವಚ್ಛತೆ, ಹೊಂಡ ತಯಾರಿ, ಬೆಳಕು, ಅಲಂಕಾರ – ಎಲ್ಲವೂ ಪಾಲಿಕೆಯ ಮೇಲಿದೆ. ಬಂದೋಬಸ್ತು ಮಾತ್ರ ಪೊಲೀಸರದ್ದು. ಹೀಗಿರುವಾಗಲೇ ಪಾಲಿಕೆಯನ್ನು ಸಂಪೂರ್ಣವಾಗಿ ಪಕ್ಕಕ್ಕಿಟ್ಟು ಸಭೆ ನಡೆಸಿರುವುದು ಗಂಭೀರ ಪ್ರಶ್ನೆಗೆ ಕಾರಣವಾಗಿದೆ.
ಇದು ಕೇವಲ ನಿರ್ಲಕ್ಷ್ಯವೋ? ಅಥವಾ ಉದ್ದೇಶಪೂರ್ವಕವಾಗಿ ಪಾಲಿಕೆಯ ಪ್ರಭಾವ ಕುಗ್ಗಿಸುವ ಹೆಜ್ಜೆಯೋ? ಎಂಬ ಅನುಮಾನ ಗಟ್ಟಿಯಾಗುತ್ತಿದೆ.
*ಮೌನವೇ ಪಾಲಿಕೆಯ ಶತ್ರು*
ಈ ಪರಿಸ್ಥಿತಿಯಲ್ಲೂ ಮೇಯರ್, ಆಡಳಿತಪಕ್ಷದ ನಾಯಕರು, ನಗರಸೇವಕರು ಮೌನವಾಗಿರುವುದು ಅಪಾಯದ ಸೂಚನೆ. ಮೌನ ಮುಂದುವರಿದರೆ ಜನರಲ್ಲಿ “ಪಾಲಿಕೆ ಇದ್ದೂ ಇಲ್ಲದಂತೆಯೇ” ಅನ್ನುವ ಭಾವನೆ ಗಟ್ಟಿ ಆಗುವುದು ಅನಿವಾರ್ಯ.
*ಗೌರವ ಉಳಿಸುವ ಹೊಣೆಗಾರಿಕೆ*
ಬೆಳಗಾವಿ ಮಹಾನಗರ ಪಾಲಿಕೆಯ ಗೌರವ ಉಳಿಸಿಕೊಳ್ಳಲು ಮೇಯರ್ ಹಾಗೂ ನಗರಸೇವಕರು ಈಗಲೇ ಧ್ವನಿ ಎತ್ತಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಗಡಿನಾಡಿನ ಮಹಾನಗರ ಪಾಲಿಕೆ ಕೇವಲ ಹೆಸರಿಗಷ್ಟೇ ಉಳಿದುಬಿಡುವ ಅಪಾಯ ಎದುರಾಗಿದೆ

