ಬೆಳಗಾವಿಯಲ್ಲಿ ಗಣೇಶನಿಗೆ ಅದ್ಧೂರಿ ವಿದಾಯ!

ಮಂಗಳಮೂರ್ತಿ ಮೋರಯಾ ಘೋಷಣೆಗಳ ನಡುವೆ ಸಂಭ್ರಮದ ಮೆರವಣಿಗೆ

ಬೆಳಗಾವಿ:
ನಗರದ ಪ್ರತಿಯೊಂದು ಬೀದಿ-ತಿರುವಿನಲ್ಲೂ “ಗಣಪತಿ ಬಪ್ಪಾ ಮೋರಯಾ… ಮಂಗಳಮೂರ್ತಿ ಮೋರಯಾ!” ಎಂಬ ಘೋಷಣೆಗಳು ಮೊಳಗಿದವು. ಶನಿವಾರ ಅನಂತ ಚತುರ್ದಶಿಯಂದು ನಡೆದ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಬೆಳಗಾವಿ ಸಂಪೂರ್ಣ ಭಕ್ತಿರಸ-ಸಂಗೀತ-ನೃತ್ಯದ ಸಂಭ್ರಮದಲ್ಲಿ ತೇಲಿತು.

ಭಾದ್ರಪದ ಚೌತಿಯಂದು ಪ್ರತಿಷ್ಠಾಪಿಸಲಾದ ಸುತ್ತ 400ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳು ವೈಭವದ ಮೆರವಣಿಗೆಯೊಂದಿಗೆ ಕಪಿಲೇಶ್ವರ ಹೊಂಡದಲ್ಲಿ ವಿಸರ್ಜನೆಯಾದವು.

ಅದ್ದೂರಿ ಚಾಲನೆ

ಕಿರ್ಲೋಸ್ಕರ್ ರಸ್ತೆಯ ಕಾವೇರಿ ಕೋಲ್‌ಗಿಂಕ್ ಬಳಿ ನಡೆದ ಪ್ರಮುಖ ಕಾರ್ಯಕ್ರಮದಲ್ಲಿ ಮೇಯರ್ ಮಂಗೇಶ ಪವಾರ, ಉಪಮೇಯರ್ ವಾಣಿ ಜೋಶಿ, ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಗಣ್ಯರು ಪೂಜೆ ನೆರವೇರಿಸಿದರು.

ಡಿಸಿಪಿ ಎನ್.ವಿ. ಭರಮನಿ ಸ್ವತಃ ಟ್ರ್ಯಾಕ್ಟರ್ ಹತ್ತಿ ಗಣೇಶ ಮೂರ್ತಿಯನ್ನೇ ಸಾಗಿಸುವ ಮೂಲಕ ಗಮನ ಸೆಳೆದರು. ಶಾಸಕರಾದ ಆಸೀಫ್ ಸೇ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಆಯುಕ್ತ ಭೂಷಣ್ ಬೋರಸೆ, ಪಾಲಿಕೆ ಆಯುಕ್ತೆ ಶುಭಾ ಹಾಗೂ ಮಾಜಿ ಶಾಸಕ ಅನಿಲ್ ಬೆನಕೆ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕುಣಿದು ಕುಪ್ಪಳಿಸಿದ ಜನಸಾಗರ

ಗಣೇಶ ಮೆರವಣಿಗೆಗೆ ಯುವಕರಿಂದ ಹಿಡಿದು ಮಹಿಳೆಯರು, ಮಕ್ಕಳವರೆಗೂ ಹೆಜ್ಜೆ ಹಾಕಿ ತಾಳಕ್ಕನುಗುಣವಾಗಿ ಕುಣಿದು ಕುಪ್ಪಳಿಸಿದರು. ಜಾನಪದ ಕಲಾ ತಂಡಗಳು, ಝಾಂಜ್ ಮೇಳ, ವಾದ್ಯವೃಂದಗಳು ಮೆರವಣಿಗೆಯ ರಂಗು ಹೆಚ್ಚಿಸಿದವು.
ಗಣೇಶ ವಿಸರ್ಜನೆ ನೋಡಲು ಸಾವಿರಾರು ಮಂದಿ ನೆರೆದಿದ್ದು, ಮನೆಗಳ ಮೇಲ್ಚಾವಣಿ, ಅಂಗಡಿ ಕಟ್ಟಡಗಳ ಮೇಲ್ಭಾಗ, ರಸ್ತೆ ಬದಿಯ ಪ್ರತಿಯೊಂದು ಜಾಗ ಜನರಿಂದ ಕಿಕ್ಕಿರಿದು ಕಣ್ಣೆರಡು ಸಾಲದಂತಿತ್ತು.

ಬಾನಂಗಳದಲ್ಲಿ ಪಟಾಕಿ ಚಿತ್ತಾರ

ಪಟಾಕಿಗಳ ಸದ್ದು ಮತ್ತು ಬಾನಂಗಳದಲ್ಲಿ ಹೊಳೆಯುತ್ತಿದ್ದ ಬಣ್ಣಬಣ್ಣದ ಚಿತ್ತಾರ ಮೆರವಣಿಗೆಯ ಆಕರ್ಷಣೆಯನ್ನೇ ದ್ವಿಗುಣಗೊಳಿಸಿತು. ವಿದ್ಯುತ್ ಅಲಂಕಾರಗಳಿಂದ ಮೆರೆಯುತ್ತಿದ್ದ ಗಣೇಶ ಮೂರ್ತಿಗಳು ಪ್ರೇಕ್ಷಕರ ಮನಸೆಳೆಯುವಂತಿತ್ತು.

ಬಂದೋಬಸ್ತ್ ಕಚ್ಚಾ ಕಟ್ಟಿ

ವಿಸರ್ಜನಾ ಮೆರವಣಿಗೆಯ ಭದ್ರತೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಮುನ್ನೆಚ್ಚರಿಕೆಯಾಗಿ ನಗರದಾದ್ಯಂತ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿತ್ತು. ಯಾವುದೇ ಗಲಭೆ, ಅಡೆತಡೆ ನಡೆಯದಂತೆ ಸ್ಥಳೀಯ ಸಂಘಟನೆಗಳು, ಗಣೇಶೋತ್ಸವ ಸಮಿತಿಗಳು ಪೊಲೀಸರೊಂದಿಗೆ ಕೈಜೋಡಿಸಿದವು.

ಭಕ್ತರಿಗೆ ಪಾನಕ-ನೀರು

ಮೆರವಣಿಗೆಯಲ್ಲಿ ಕುಣಿದು ದಣಿದ ಭಕ್ತರಿಗೆ ಪಾನಕ, ಕುಡಿಯುವ ನೀರಿನ ವ್ಯವಸ್ಥೆ ಸ್ಥಳೀಯ ಗಣೇಶ ಮಂಡಳಗಳು ಹಾಗೂ ಮಹಾನಗರ ಪಾಲಿಕೆ ಒದಗಿಸಿತು.

Leave a Reply

Your email address will not be published. Required fields are marked *

error: Content is protected !!