Headlines

BDCC ಚುನಾವಣೆ – ಮೂಡಲಗಿ-ಗೋಕಾಕ ಅಭ್ಯರ್ಥಿಗಳ ಅಂತಿಮ ನಿರ್ಧಾರ ಸೆಪ್ಟೆಂಬರ್ ಅಂತ್ಯಕ್ಕೆ

ಮೂಡಲಗಿ-ಗೋಕಾಕ ಅಭ್ಯರ್ಥಿಗಳ ಅಂತಿಮ ನಿರ್ಧಾರ ಸೆಪ್ಟೆಂಬರ್ ಅಂತ್ಯಕ್ಕೆ

ಶಾಸಕ, ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ

ಗೋಕಾಕ:
“ನಾನು ಹಾಗೂ ಗೋಕಾಕ ಶಾಸಕ ರಮೇಶ್ ಜಾರಕಿಹೊಳಿ ಸೇರಿಕೊಂಡು ಸೆಪ್ಟೆಂಬರ್ ಅಂತ್ಯದೊಳಗೆ ಮೂಡಲಗಿ ಮತ್ತು ಗೋಕಾಕ ತಾಲೂಕಿನ ಅಭ್ಯರ್ಥಿಗಳ ಅಂತಿಮ ಆಯ್ಕೆ ಮಾಡುತ್ತೇವೆ,” ಎಂದು ಅರಭಾವಿ ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬುಧವಾರ ಘೋಷಿಸಿದರು.

ನಗರದ ಹೊರವಲಯದಲ್ಲಿರುವ ಗೋಕಾಕ ಸಪ್ಲಾಯರ್ಸ್ ಭವನದಲ್ಲಿ ಮೂಡಲಗಿ ಹಾಗೂ ಗೋಕಾಕ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು, ಸದಸ್ಯರನ್ನುದ್ದೇಶಿಸಿ ಮಾತನಾಡಿದ ಅವರು –
“ಸಂಘಗಳಿಗೆ ಇಷ್ಟವಾಗುವ, ಕ್ರಿಯಾಶೀಲ ಹಾಗೂ ರೈತರ ಹಿತಕಾಂಕ್ಷಿಗಳಾದ ವ್ಯಕ್ತಿಗಳನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡುವ ತೀರ್ಮಾನಕ್ಕೆ ಬಂದಿದ್ದೇವೆ,” ಎಂದು ಹೇಳಿದರು.

ಅವಿರೋಧದ ಕಡೆ ನಮ್ಮ ಗುರಿ

ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಎಲ್ಲ ಸ್ಥಾನಗಳಿಗೂ ಮತದಾನವಿಲ್ಲ. ಹೊಂದಾಣಿಕೆ ಸಾಧ್ಯವಾಗಿರುವ ಕಡೆಗಳಲ್ಲಿ ಅವಿರೋಧ ಆಯ್ಕೆ ಮಾಡಲಾಗುವುದು. ಅಗತ್ಯವಿದ್ದಲ್ಲಿ ಮಾತ್ರ ಚುನಾವಣಾ ಸ್ಪರ್ಧೆ ನಡೆಯಲಿದೆ.
“ಒಟ್ಟು 16 ಸ್ಥಾನಗಳಲ್ಲಿ ಕನಿಷ್ಠ 12 ಸ್ಥಾನಗಳಲ್ಲಿ ನಮ್ಮ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಲಿದ್ದಾರೆಂಬ ವಿಶ್ವಾಸವಿದೆ. ಈಗಾಗಲೇ ನಮ್ಮ ತಂಡ ಬ್ಯಾಂಕಿನ ಅಧಿಕಾರ ಹಿಡಿದಂತಾಗಿದೆ,” ಎಂದು ಜಾರಕಿಹೊಳಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ರೈತರ ಮನೆ ಬಾಗಿಲಿಗೆ ಬಿಡಿಸಿಸಿ ಬ್ಯಾಂಕ್ ಸೇವೆ”

“ಮುಂದಿನ ದಿನಗಳಲ್ಲಿ ಬ್ಯಾಂಕ್ ರೈತರ ಮನೆ ಬಾಗಿಲಿಗೆ ತಲುಪಬೇಕು. ಶೂನ್ಯ ಬಡ್ಡಿದರ ಸಾಲ ಸೇರಿದಂತೆ ರೈತರ ಆರ್ಥಿಕ ನೆಮ್ಮದಿಗೆ ಬೇಕಾದ ಸೌಲಭ್ಯಗಳು ದೊರಕಲಿ ಎಂಬುದು ನಮ್ಮ ಸಂಕಲ್ಪ,” ಎಂದರು.
“ಇದರಲ್ಲಿ ನಮ್ಮ ಸ್ವಾರ್ಥವಿಲ್ಲ, ರೈತರ ಹಿತಾಸಕ್ತಿಯೇ ಏಕೈಕ ಗುರಿ,” ಎಂದು ಸ್ಪಷ್ಟಪಡಿಸಿದರು.

ನಾಯಕರ ಬೆಂಬಲ

“ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ, ಕೆಎಲ್ಇ ಅಧ್ಯಕ್ಷ ಡಾ. ಪ್ರಭಾಕರ ಕೋರೆ, ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ – ಎಲ್ಲರನ್ನೂ ಜೊತೆಯಾಗಿ ಮಾಡಿಕೊಂಡು ಈ ಚುನಾವಣೆಗೆ ನಾವು ಕಣಕ್ಕಿಳಿದಿದ್ದೇವೆ. ಸಂಪೂರ್ಣ ಬಹುಮತದಿಂದ ಬ್ಯಾಂಕಿನ ಆಡಳಿತ ನಮ್ಮ ಕೈಗೆ ಬರುವುದರಲ್ಲಿ ಸಂದೇಹವಿಲ್ಲ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಜಿ. ಢವಳೇಶ್ವರ, ನಿರ್ದೇಶಕ ನೀಲಕಂಠ ಕಪ್ಪಲಗುದ್ದಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಸಗೌಡ ಪಾಟೀಲ, ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಜಿ.ಪಂ. ಮಾಜಿ ಸದಸ್ಯರು ತುಕಾರಾಮ ಕಾಗಲ್, ಮಡ್ಡೆಪ್ಪ ತೋಳಿನವರ, ವಿಠ್ಠಲ ಸವದತ್ತಿ, ಶಂಕರ ಬಿಲಕುಂದಿ, ವಿಠ್ಠಲ ಪಾಟೀಲ, ಪ್ರಭಾ ಶುಗರ್ಸ್ ನಿರ್ದೇಶಕ ಶಿದ್ಲಿಂಗ ಕಂಬಳಿ ಸೇರಿದಂತೆ ಹಲವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!