Headlines

‘ಹುಕ್ಕೇರಿಯಲ್ಲಿನ ಗಲಾಟೆಗೆ ಕತ್ತಿ‌ ಕುಟುಂಬವೇ ಕಾರಣ’

ಹುಕ್ಕೇರಿಯಲ್ಲಿನ ಗಲಾಟೆ, ಗೊಂದಲಕ್ಕೆ ಕತ್ತಿ ಕುಟುಂಬವೇ ಕಾರಣ- ಸಚಿವ ಸತೀಶ ಜಾರಕಿಹೊಳಿ

ಹುಕ್ಕೇರಿ
ಬಿಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆಯಲ್ಲಿ ಹುಕ್ಕೇರಿ ತಾಲೂಕಿನಲ್ಲಿ ಪಿಕೆಪಿಎಸ್‌ ಸಭೆಗಳಲ್ಲಿ ಗಲಾಟೆ ನಡೆಯುತ್ತಿರುವುದಕ್ಕೆ ಕತ್ತಿ ಕುಟುಂಬವೇ ಕಾರಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಆರೋಪಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 93 ಸ್ಥಾನಗಳ ಪೈಕಿ ಮೂರ್ನಾಲ್ಕು ಕಡೆಗಳಲ್ಲಿ ಮಾತ್ರ ಗಲಾಟೆಯಾಗಿವೆ. ಅದು ಸ್ಥಳೀಯ ಸಮಸ್ಯೆಯದ್ದು. ಅದು ಅವರ ವೈಯಕ್ತಿಕ ಜಗಳ. ಬೇರೆ ಕಡೆಗೆ ಸಭೆಗಳು ಸುಸೂತ್ರವಾಗಿ ನಡೆದಿವೆ ಎಂದರು.


ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಶಾಸಕ ನಿಖಿಲ ಕತ್ತಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ಕಾನೂನು ಸುವ್ಯವಸ್ಥೆಗೆ ಅವರೇ ಧಕ್ಕೆ ಉಂಟು ಮಾಡುತ್ತಿದ್ದಾರೆ. ಅ‍ವರ ಜೊತೆಗೆ ಎಷ್ಟು ವಾಹಗಳನ್ನು ತಂದಿದ್ದರು? ಮಾಜಿ ಸಂಸದ ರಮೇಶ ಕತ್ತಿ ಮದಿಹಳ್ಳಿಗೆ ಬಂದ ವೇಳೆ ಎಷ್ಟು ವಾಹನಗಳನ್ನು ತಂದಿದ್ದರು? ಈ ಕುರಿತು ನೀವೇ ಅವರನ್ನು ಪ್ರಶ್ನಿಸಬೇಕು ಎಂದರು.
ತಮಗೆ 50-60 ಜನರ ಬೆಂಬಲ ವಿದೆ ಎಂದು ರಮೇಶ ಕತ್ತಿ ಚುನಾವಣೆಗೆ ಮುನ್ನವೇ ಹೇಳಿಕೆ ಕೊಟ್ಟಿದ್ದಾರೆ. ಅದು ಡಿಸಿಸಿ ಬ್ಯಾಂಕ್‌ ಚುನಾವಣೆ ಫಲಿತಾಂಶ ಬಂದಾಗ ಗೊತ್ತಾಗುತ್ತದೆ. ಈಗ ತಮಗೆ ಹೆಚ್ಚಿನ ಬೆಂಬಲ ಇದೆ ಎಂಬುದು ಹೇಗೆ ಗೊತ್ತಾಗುತ್ತದೆ ಎಂದು ಪ್ರಶ್ನಿಸಿದರು.

ಹುಕ್ಕೇರಿ ತಾಲೂಕಿನಲ್ಲಿ ದೊಂಬಿ, ಗಲಾಟೆ ಆಗುತ್ತಿರುವುದು, ಪಿಕೆಪಿಎಸ್‌ ಸಭೆಗಳನ್ನು ಮುಂದೂಡಲು ಕತ್ತಿ ಕುಟುಂಬವೇ ಕಾರಣ. ಅವರಿಗೆ ಅಧಿಕಾರ ಇಲ್ಲ. ಹೇಳುವಂತಹ ಅಭಿವೃದ್ಧಿ ಕಾರ್ಯಗಳು ಇಲ್ಲ. ಅಭಿವೃದ್ಧಿ ಶೂನ್ಯವಾಗಿದೆ. ಜನ ಪ್ರಶ್ನಿಸುತ್ತಾರೆಂಬ ಭಯದಿಂದ ಈಗ ಕತ್ತಿ ಕುಟುಂಬದವರು ಜಾತಿ, ಹೊರಗಿನವರು ಎನ್ನುತ್ತಿದ್ದಾರೆ. ಜನರೇ ಅವರನ್ನು ಈಗ ಪ್ರಶ್ನೆ ಮಾಡುವ ಕಾಲ ಬಂದಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!