Headlines

DCC ಚುನಾವಣೆ- ಜಾರಕಿಹೊಳಿ ಬಣದ ಭರ್ಜರಿ ವಿಶ್ವಾಸ!

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ 13 ಅಭ್ಯರ್ಥಿಗಳ ಗೆಲುವು ಖಚಿತ – ಬೆಮುಲ್ ಅಧ್ಯಕ್ಷ, ಶಾಸಕ ಬಾಲಚಂದ್ರ ಜಾರಕಿಹೊಳಿ ಘೋಷಣೆ

*ಜಾರಕಿಹೊಳಿ ಕುಟುಂಬದ ಎರಡನೇ ಪೀಳಿಗೆಯ ರಾಜಕೀಯ ಎಂಟ್ರಿ: ರಾಹುಲ್ ಮತ್ತು ಅಮರನಾಥ್ ವೇದಿಕೆ ಪ್ರವೇಶ!*

ಬೆಳಗಾವಿ:
“ನಮ್ಮ ಬಣದ ಎಲ್ಲ 13 ಅಭ್ಯರ್ಥಿಗಳೂ ಗೆಲ್ಲಲಿದ್ದಾರೆ – ಯಾವುದೇ ಅನುಮಾನವೇ ಇಲ್ಲ!” ಎಂದು ಅರಭಾವಿ ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಡಿಸಿಸಿ ಬ್ಯಾಂಕ್ ಚುನಾವಣೆಯ ತಯಾರಿಯ ನಡುವೆ ಶನಿವಾರ ಬ್ಯಾಂಕಿನ ಸಭಾಂಗಣದಲ್ಲಿ ಆರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.

ಮೂಡಲಗಿ, ಗೋಕಾಕ, ರಾಮದುರ್ಗ, ಹುಕ್ಕೇರಿ ಹಾಗೂ ಬೆಳಗಾವಿ ವಿಭಾಗಗಳಿಂದ ನಾಮಪತ್ರ ಸಲ್ಲಿಕೆಯ ಕೆಲಸ ಪೂರ್ಣಗೊಂಡಿದೆ ಎಂದು ತಿಳಿಸಿದ ಅವರು, ದೇವರು ಹಾಗೂ ಮತದಾರರ ಆಶೀರ್ವಾದದೊಂದಿಗೆ ಬ್ಯಾಂಕಿನ ಮುಂದಿನ ಐದು ವರ್ಷಗಳ ಆಡಳಿತ ನಮ್ಮ ಕೈಯಲ್ಲಿ ಇರಲಿದೆ ಎಂದರು.

“ನಮ್ಮ 13 ಅಭ್ಯರ್ಥಿಗಳ ಪ್ಯಾನೆಲ್ ಸಂಪೂರ್ಣ ಶಕ್ತಿ ಪಡೆದುಕೊಂಡಿದೆ. ಕೆಲವು ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆಗೆ ಪ್ರಯತ್ನಿಸುತ್ತಿದ್ದೇವೆ. ಅದು ಸಾಧ್ಯವಾಗದಿದ್ದರೆ ಚುನಾವಣೆಗೆ ಸಿದ್ಧರಾಗಿದ್ದೇವೆ,” ಎಂದರು ಜಾರಕಿಹೊಳಿ.

*ವಿರೋಧಿಗಳ ಮೇಲೆ ಕಿಡಿ*
ವಿರೋಧಿಗಳು ಗೆಲ್ಲುವ ಭಯದಿಂದ ಅವಿರೋಧ ಆಯ್ಕೆಗಳನ್ನು ಅಡ್ಡಿಪಡಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು,
“ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕಿ ಆಮಿಷ ನೀಡುವ ಪ್ರಯತ್ನ ನಡೆಯುತ್ತಿದೆ. ಆದರೆ ಜನದೇಶ ನಮ್ಮ ಜೊತೆಯಲ್ಲಿದೆ,” ಎಂದರು.
ಅಥಣಿ, ಕಾಗವಾಡ ಮತ್ತು ಚಿಕ್ಕೋಡಿಯಲ್ಲಿ ಅಭ್ಯರ್ಥಿಗಳನ್ನು ನಿಲ್ಲಿಸುವ ಉದ್ದೇಶ ಇಲ್ಲವೆಂದು ಪುನಃ ಸ್ಪಷ್ಟಪಡಿಸಿದ ಅವರು, “ನಿಪ್ಪಾಣಿಯಿಂದ ಉತ್ತಮ ಪಾಟೀಲ ಸ್ಪರ್ಧೆ ಮಾಡಬಾರದೆಂದು ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದೇವೆ. ಆದರೂ ಅವರು ಸ್ಪರ್ಧೆ ಮಾಡಿದ್ದಾರೆ. ನಾವು ಜೊಲ್ಲೆಯವರ ಗೆಲುವಿಗೆ ಶ್ರಮಿಸುತ್ತೇವೆ,” ಎಂದರು.
ಸಂಘರ್ಷದ ಕಿತ್ತೂರು, ಅಸಮಾಧಾನದ ಕಾಗವಾಡ.

ಕಿತ್ತೂರಿನಲ್ಲಿ ವಿಕ್ರಮ ಇನಾಂದಾರ ಬಣದ ಅಭ್ಯರ್ಥಿಯಾಗಿದ್ದು, ಅಲ್ಲಿ ಸತೀಶ್ ಜಾರಕಿಹೊಳಿ ಹಾಗೂ ಶಾಸಕ ಬಾಬಾಸಾಹೇಬ ಪಾಟೀಲ ನಡುವೆ ನಡೆದ ಮಾತುಕತೆಗಳ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲವೆಂದು ಹೇಳಿದರು.
ಅವರ ಸಹೋದರರನ್ನು ಎದುರಾಳಿಯಾಗಿ ನಿಲ್ಲಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, “ನಮ್ಮನ್ನು ಕೇಳದೆ ಅಭ್ಯರ್ಥಿಗಳನ್ನು ನಿಲ್ಲಿಸುವುದು ಸರಿಯಲ್ಲ,” ಎಂದು ಟೀಕಿಸಿದರು.
*ಎರಡನೇ ಪೀಳಿಗೆಯ ರಾಜಕೀಯಕ್ಕೆ ಸಮರ್ಥನೆ*
“ಇದು ಕುಟುಂಬ ರಾಜಕೀಯ ಅಲ್ಲ, ಜನಸೇವೆಯ ಪರಂಪರೆ,” ಎಂದು ಬಾಲಚಂದ್ರ ಜಾರಕಿಹೊಳಿ ಪ್ರತಿಕ್ರಿಯಿಸಿದರು.
“ರಾಹುಲ್ ಮತ್ತು ಅಮರನಾಥರನ್ನು ಸ್ಪರ್ಧೆಗೆ ಕಣಕ್ಕಿಳಿಸುವುದು ತಿಂಗಳುಗಳಿಂದ ನಡೆದ ಚರ್ಚೆಯ ಫಲ. ನಮ್ಮ ಮಕ್ಕಳು ಜನಸೇವೆಗೆ ಮುಂದಾಗುತ್ತಿರುವುದು ಜನರ ಆಶೀರ್ವಾದದ ಸೂಚನೆ. ನಮ್ಮ ಬಣದ ರಥ ಮುಂದುವರಿಯಲೇ ಬೇಕು,” ಎಂದರು.

ನಮ್ಮನ್ನು ನಂಬಿಕೊಂಡು ಬದುಕುತ್ತಿರುವ ಜನರನ್ನು ನಾವು ಕೈಬಿಡುವುದಿಲ್ಲ. ಇಂದು, ನಾಳೆ, ಎಂದೆಂದಿಗೂ ನಮ್ಮ ಸೇವೆ ಜನರಿಗಾಗಿ ಮುಡಿಪಾಗಿದೆ


ಲಿಂಗಾಯತ ಸಮಾಜದ ಪಾತ್ರ ಪ್ರಾಮುಖ್ಯ

“ನಮ್ಮ ಮಕ್ಕಳು ಬ್ಯಾಂಕಿನ ಆಡಳಿತ ಮಂಡಳಿಗೆ ಬಂದರೂ ಲಿಂಗಾಯತ ಸಮಾಜದವರನ್ನೇ ಅಧ್ಯಕ್ಷರನ್ನಾಗಿ ಮಾಡುತ್ತೇವೆ. ಮುರಗೋಡ ಮಹಾಂತ ಅಜ್ಜನವರ ಆಶೀರ್ವಾದದಿಂದ ಬೆಳೆದ ಈ ಬ್ಯಾಂಕಿನ ಪ್ರಗತಿಯಲ್ಲಿ ಅವರ ಪಾತ್ರ ಅಪ್ರತಿಮ,” ಎಂದು ಜಾರಕಿಹೊಳಿ ಹೇಳಿದರು.

ನಾಮಪತ್ರ ದಿನದ ಶೋಭೆ
ಬ್ಯಾಂಕ್ ಆವರಣದಲ್ಲಿ ಸಾವಿರಾರು ಬೆಂಬಲಿಗರು ಜಮಾಯಿಸಿ, ಜಾರಕಿಹೊಳಿ ಸಹೋದರರ ಪೋಸ್ಟರ್‌ಗಳಿಂದ ಪ್ರದೇಶವೇ ಜಾತ್ರೆ ಎನ್ನುವಂತೆ ಭಾಸವಾಗಿತ್ತು. ಸರ್ಕ್ಯೂಟ್ ಹೌಸ್‌ನಿಂದ ಬ್ಯಾಂಕಿನವರೆಗೆ ಪಾದಯಾತ್ರೆ ನಡೆಸಿದ ಅಭ್ಯರ್ಥಿಗಳು ಶಕ್ತಿಯ ಪ್ರದರ್ಶನ ನೀಡಿದರು.

ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ವಿಶ್ವಾಸ ವೈದ್ಯ, ವಿಪ ಸದಸ್ಯ ಚನ್ನರಾಜ ಹಟ್ಟಿಹೊಳಿ, ಅರವಿಂದ ಪಾಟೀಲ, ಅಪ್ಪಾಸಾಹೇಬ ಕುಲಗೋಡೆ, ಅಮರನಾಥ್ ಮತ್ತು ರಾಹುಲ್ ಜಾರಕಿಹೊಳಿ ಸೇರಿದಂತೆ ಅನೇಕರು ಹಾಜರಿದ್ದರು.

13 ಜನ‌ ಗೆಲ್ತಾರೆ

ಪ್ರತಿಷ್ಠಿತ ಬೆಳಗಾವಿ ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ನಮ್ಮ 13 ಅಭ್ಯರ್ಥಿಗಳೂ ಗೆಲ್ಲಲಿದ್ದಾರೆ. ಗೆಲುವಿಗೆ ಬೇಕಾದ ತಂತ್ರಗಳನ್ನೆಲ್ಲ ಹೆಣೆಯಲಾಗಿದೆ. ಯಾವುದೇ ಅನುಮಾನವಿಲ್ಲ – ಬ್ಯಾಂಕಿನ ಅಧಿಕಾರವನ್ನು ನಾವೇ ಹಿಡಿಯಲಿದ್ದೇವೆ.”

ಬಾಲಚಂದ್ರ ಜಾರಕಿಹೊಳಿ, ಶಾಸಕ ಮತ್ತು ಬೆಮುಲ್ ಅಧ್ಯಕ್ಷ

Leave a Reply

Your email address will not be published. Required fields are marked *

error: Content is protected !!