ಬೆಂಗಳೂರು–ಮುಂಬೈ ನಡುವೆ ಮತ್ತೊಂದು ಸೂಪರ್ ಫಾಸ್ಟ್ ರೈಲು ಶೀಘ್ರದಲ್ಲೇ
— ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಘೋಷಣೆ
ನವದೆಹಲಿ,
ಕರ್ನಾಟಕದ ಜನರ ದೀರ್ಘಕಾಲದ ಬೇಡಿಕೆಯಾದ ಬೆಂಗಳೂರು–ಮುಂಬೈ ನಡುವೆ ಮತ್ತೊಂದು ನೇರ ಸೂಪರ್ ಫಾಸ್ಟ್ ರೈಲು ಸೇವೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಘೋಷಿಸಿದ್ದಾರೆ.
ಈ ರೈಲು ತುಮಕೂರು, ದಾವಣಗೆರೆ, ಹಾವೇರಿ, ಹುಬ್ಬಳ್ಳಿ-ಧಾರವಾಡ, ಬೆಳಗಾವಿ ಮಾರ್ಗವಾಗಿ ಚಲಿಸಲಿದ್ದು, ರಾಜ್ಯದ ಮಧ್ಯಭಾಗದ ಜನರಿಗೆ ನೇರವಾಗಿ ವಾಣಿಜ್ಯ ನಗರಿ ಮುಂಬೈ ಸಂಪರ್ಕ ಕಲ್ಪಿಸುವಂತಾಗಿದೆ.
ಜೋಶಿ ಅವರು ನವದೆಹಲಿಯಲ್ಲಿ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಭೇಟಿ ಮಾಡಿ, ಈ ರೈಲು ಸೇವೆಯ ಕುರಿತು ಚರ್ಚಿಸಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಹೊಸ ರೈಲು ವೇಳಾಪಟ್ಟಿ ತಯಾರಿಸಲು ಸೂಚನೆ ನೀಡಿರುವುದಾಗಿ ತಿಳಿಸಿದ್ದಾರೆ.

“ಈ ಮಾರ್ಗದ ರೈಲು ಕರ್ನಾಟಕದ ಅಭಿವೃದ್ಧಿಗೆ ಬಲ ನೀಡುವುದರೊಂದಿಗೆ, ಮುಂಬೈ–ಬೆಂಗಳೂರು ಇಂಡಸ್ಟ್ರೀಯಲ್ ಕಾರಿಡಾರ್‌ಗೆ ಪೂರಕವಾಗಿ ಉದ್ಯಮಿಕ ಬೆಳವಣಿಗೆಯನ್ನು ವೇಗಗೊಳಿಸುತ್ತದೆ,”
ಎಂದು ಪ್ರಹ್ಲಾದ ಜೋಶಿ ತಿಳಿಸಿದ್ದಾರೆ.ಅವರು ರೈಲು ಸೇವೆಯ ವಿಸ್ತರಣೆಗಾಗಿ ಹಾವೇರಿ–ಗದಗ ಸಂಸದ ಬಸವರಾಜ ಬೊಮ್ಮಾಯಿ, ಬೆಳಗಾವಿ ಸಂಸದ ಜಗದೀಶ್ ಶೆಟ್ಟರ್, ಬೆಂಗಳೂರು ಸಂಸದ ತೇಜಸ್ವಿ ಸೂರ್ಯ ಮುಂತಾದವರು ನಿರಂತರ ಅನುಸರಣೆ ಮಾಡುತ್ತಿದ್ದುದನ್ನು ಉಲ್ಲೇಖಿಸಿದರು.
ಮೋದಿ ಸರ್ಕಾರದ ಕ್ರಿಯಾಶೀಲತೆ : ಜೋಶಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರಾಜ್ಯ ರೈಲ್ವೆ ಸಚಿವ ವಿ. ಸೋಮಣ್ಣ ಅವರ ಕಾರ್ಯತತ್ಪರ ನಾಯಕತ್ವವನ್ನು ಮೆಚ್ಚಿದರು.
ಬೆಂಗಳೂರು, ಹುಬ್ಬಳ್ಳಿ ಮತ್ತು ಮುಂಬೈ ರೈಲು ನಿಲ್ದಾಣಗಳಲ್ಲಿ ಲೇನ್ ಸಾಮರ್ಥ್ಯ ಹೆಚ್ಚಿಸುವ ಮೂಲಕ ಹೆಚ್ಚಿನ ಸೂಪರ್ ಫಾಸ್ಟ್ ರೈಲುಗಳು ಸಾಧ್ಯವಾಗಿರುವುದಾಗಿ ಅವರು ಹೇಳಿದರು.
ಜನರಿಗೆ ಸೌಲಭ್ಯ:
ಈ ಹೊಸ ರೈಲು ಚಾಲನೆಯಾದರೆ ಕರ್ನಾಟಕದ ವಿವಿಧ ಜಿಲ್ಲೆಗಳ ಜನರಿಗೆ ಮುಂಬೈ ಪ್ರಯಾಣ ಸುಲಭವಾಗಲಿದೆ.
ಮುಂದಿನ ದಿನಗಳಲ್ಲಿ ಈ ನಗರಗಳ ನಡುವಿನ ರೈಲು ಪ್ರಯಾಣ ಹೆಚ್ಚಾಗಲಿದ್ದು, ಲಕ್ಷಾಂತರ ಪ್ರಯಾಣಿಕರಿಗೆ ಪ್ರಯೋಜನ ನೀಡಲಿದೆ ಎಂದು ಸಚಿವರು ಭರವಸೆ ವ್ಯಕ್ತಪಡಿಸಿದರು.