ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ : ಜಾರಕಿಹೊಳಿ ಬಣದ ಸಂಪೂರ್ಣ ಹಿಡಿತ! ಜೊಲ್ಲೆ, ದೊಡ್ಡಗೌಡ್ರ, ಕುಲಗೋಡೆ ಸ್ಪರ್ಧೆಯ ಹಾಟ್‌ಸೀಟ್‌ನಲ್ಲಿ ಸಚಿವ ಸತೀಶ್ ಜಾರಕಿಹೊಳಿ ‘ಅಂಪೈರ್’ ಪಾತ್ರದಲ್ಲಿ ಇಂದು ರಾತ್ರಿ ಅಂತಿಮ ಪಟ್ಟಿಗೆ ಮೊಹರು ಬಿದ್ದೇ ಬಿದ್ದು!
ಬೆಳಗಾವಿ: ಜಿಲ್ಲೆಯ ಸಹಕಾರ ವಲಯದ ಶಕ್ತಿ ಪರೀಕ್ಷೆಯಾಗಿ ಮಾರ್ಪಟ್ಟಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಡಿಸಿಸಿ) ಅಧ್ಯಕ್ಷ–ಉಪಾಧ್ಯಕ್ಷರ ಚುನಾವಣೆ ನಾಳೆ (ಸೋಮವಾರ) ಜರುಗಲಿದ್ದು, ಜಾರಕಿಹೊಳಿ ಬಣ ಈಗಾಗಲೇ ಪೂರ್ತಿಯಾಗಿ ಹಿಡಿತ ಸಾಧಿಸಿದೆ ಎಂಬ ಸ್ಪಷ್ಟ ಚಿತ್ರಣ ಸಿಕ್ಕಿದೆ.
ಶನಿವಾರ ರಾತ್ರಿ ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಶಾಸಕ ಹಾಗೂ ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಬಣದ ನಿರ್ದೇಶಕರೊಂದಿಗೆ ತಂತ್ರ ಸಭೆ ನಡೆಸಿದರು. ಸಭೆಯಲ್ಲಿ ಮಾತನಾಡಿದ ಅವರು,
“ನಮ್ಮ ಬಣದವರೇ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನವನ್ನು ಗೆಲ್ಲಲಿದ್ದಾರೆ. ಮುಂದಿನ ಐದು ವರ್ಷಗಳು ಬ್ಯಾಂಕಿನ ಆಡಳಿತ ನಮ್ಮ ಕೈಯಲ್ಲಿರಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇತ್ತೀಚೆಗೆ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಜಾರಕಿಹೊಳಿ ಬಣದ 11 ಮಂದಿ ನಿರ್ದೇಶಕರು ಜಯಗಳಿಸಿದ್ದು, ಸ್ಪಷ್ಟ ಬಹುಮತ ಅವರ ಪಾಲಾಗಿದೆ. ಇದರೊಂದಿಗೆ, ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ನಡೆಯಲಿರುವ ಅಂತಿಮ ಚರ್ಚೆಯ ನಂತರ ಅಧ್ಯಕ್ಷ–ಉಪಾಧ್ಯಕ್ಷರ ಹೆಸರುಗಳು ಇಂದು ರಾತ್ರಿ ಫೈನಲ್ ಆಗಲಿವೆ.
ರಾತ್ರಿ ನಡೆಯಲಿರುವ ಸಭೆಯಲ್ಲಿ ಅಣ್ಣಾಸಾಹೇಬ್ ಜೊಲ್ಲೆ, ಮಹಾಂತೇಶ ದೊಡ್ಡಗೌಡ್ರ, ಅಪ್ಪಾಸಾಹೇಬ ಕುಲಗೋಡೆ, ಅಮರನಾಥ ಜಾರಕಿಹೊಳಿ, ರಾಹುಲ್ ಜಾರಕಿಹೊಳಿ, ನೀಲಕಂಠ ಕಪ್ಪಲಗುದ್ದಿ, ವಿರುಪಾಕ್ಷ ಮಾಮನಿ, ವಿಶ್ವಾಸ ವೈದ್ಯ ಸೇರಿದಂತೆ ಪ್ರಮುಖ ನಿರ್ದೇಶಕರು ಭಾಗವಹಿಸಲಿದ್ದಾರೆ.
ತಟಸ್ಥ ಧೋರಣೆ ಉಳಿಸಿಕೊಂಡಿದ್ದ ಶಾಸಕರಾದ ಭರಮಗೌಡ ಕಾಗೆ ಹಾಗೂ ಗಣೇಶ್ ಹುಕ್ಕೇರಿ ಸಹ ಸಭೆಯಲ್ಲಿ ಹಾಜರಾಗುವ ಸಾಧ್ಯತೆ ಇದೆ. ಇವರ ಬೆಂಬಲ ಸಿಕ್ಕರೆ, ಜಾರಕಿಹೊಳಿ ಬಣದ ಬೆಂಬಲದ ಸಂಖ್ಯೆ 13ಕ್ಕೆ ಏರಲಿದೆ, ಹೀಗಾಗಿ ವಿರೋಧ ಬಣಕ್ಕೆ ಅವಕಾಶವೇ ಇಲ್ಲದಂತಾಗಿದೆ.
ಬಾಲಚಂದ್ರ ಜಾರಕಿಹೊಳಿಯವರ ಮಾತುಗಳ ಪ್ರಕಾರ, ಈ ಬಾರಿ ಲಿಂಗಾಯತ ಸಮುದಾಯದ ನಾಯಕನೊಬ್ಬರು ಅಧ್ಯಕ್ಷ ಸ್ಥಾನಕ್ಕೆ ಏರುವ ಸಾಧ್ಯತೆಗಳು ಹೆಚ್ಚು. ಅಣ್ಣಾಸಾಹೇಬ್ ಜೊಲ್ಲೆ, ಮಹಾಂತೇಶ ದೊಡ್ಡಗೌಡ್ರ, ಅಪ್ಪಾಸಾಹೇಬ ಕುಲಗೋಡೆ – ಈ ಮೂವರಲ್ಲಿ ಒಬ್ಬರು ಬ್ಯಾಂಕಿನ ಹೊಸ ಅಧ್ಯಕ್ಷರಾಗುವ ನಿರೀಕ್ಷೆ ಹೆಚ್ಚಿದೆ. ಉಪಾಧ್ಯಕ್ಷ ಸ್ಥಾನಕ್ಕೆ ನೀಲಕಂಠ ಕಪ್ಪಲಗುದ್ದಿ ಮತ್ತು ಅರವಿಂದ ಪಾಟೀಲ್ ಹೆಸರುಗಳು ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿವೆ.
ನಾಳೆ ಬೆಳಿಗ್ಗೆಯಿಂದಲೇ ಚುನಾವಣಾ ಪ್ರಕ್ರಿಯೆಗಳು ಆರಂಭಗೊಳ್ಳಲಿದ್ದು, ಮಧ್ಯಾಹ್ನ 3 ಗಂಟೆ ವೇಳೆಗೆ ಅಧಿಕೃತ ಫಲಿತಾಂಶ ಪ್ರಕಟವಾಗಲಿದೆ. ಸಚಿವ ಸತೀಶ್ ಜಾರಕಿಹೊಳಿ ಅವರ ಬಣ ಸಂಪೂರ್ಣ ನಿಯಂತ್ರಣ ಸಾಧಿಸಿರುವ ಹಿನ್ನೆಲೆ, ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನಗಳು ಅವರ ಬಣದಿಂದಲೇ ಆಯ್ಕೆಯಾಗುವುದು ನಿಶ್ಚಿತ.
ಒಟ್ಟಿನಲ್ಲಿ, ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಈಗ ಜಾರಕಿಹೊಳಿಯವರ ರಾಜಕೀಯ ಬುದ್ಧಿಮತ್ತೆ ಹಾಗೂ ಬಣದ ಏಕತೆ ಪರೀಕ್ಷೆಯ ವೇದಿಕೆಯಾಗಿ ಮಾರ್ಪಟ್ಟಿದೆ.