ಕೊಟ್ಟ ಮಾತಿಗೆ ತಪ್ಪದ ಜಾರಕಿಹೊಳಿ ಸಹೋದರರು..!
E belagavi ವಿಶೇಷ ವರದಿ
ಬೆಳಗಾವಿ:
ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಸುತ್ತ ರಾಜಕೀಯ ತೀವ್ರತೆ ಶಿಖರ ತಲುಪಿದ್ದರೂ, ಅಂತಿಮ ಕ್ಷಣದಲ್ಲಿ ಎಲ್ಲರ ಗಮನ ಸೆಳೆದವರು ಜಾರಕಿಹೊಳಿ ಸಹೋದರರು. !
ಚುನಾವಣೆಯ ಮುನ್ನ ಬಾಲಚಂದ್ರ ಜಾರಕಿಹೊಳಿ ಅವರು “ಲಿಂಗಾಯತರಿಗೆ ಅಧ್ಯಕ್ಷ ಸ್ಥಾನ ನೀಡಲಾಗುತ್ತದೆ ಎಂದು ಹೇಳಿದ್ದರು. ಅದಕ್ಕೆ ಸಚಿವ ಸತೀಶ ಜಾರಕಿಹೊಳಿ ಸಹ ಸಹಮತ ವ್ಯಕ್ತಪಡಿಸಿದ್ದರು.
ಆದರೆ ಆಗ ಕೆಲವರು ಇವರ ಹೇಳಿಕೆಯನ್ನು ರಾಜಕೀಯ ಸ್ಟಂಟ್ ಎಂದು ವ್ಯಂಗ್ಯವಾಡಿದ್ದರು. ಆದರೆ ಜಾರಕಿಹೊಳಿ ನುಡಿದಂತೆ ನಡೆದು ತೋರಿಸಿದರೆಂಬುದಕ್ಕೆ ಫಲಿತಾಂಶವೇ ಸಾಕ್ಷಿ.
ನುಡಿ-ನಡತೆಯ ಸಮನ್ವಯ

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳ ಹಂಚಿಕೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡುವ ಮೂಲಕ ಬಾಲಚಂದ್ರ ಜಾರಕಿಹೊಳಿ ಮತ್ತು ಸಚಿವ ಸತೀಶ ಜಾರಕಿಹೊಳಿ ಅವರು ತಮ್ಮ ನುಡಿಯ ಗೌರವ ಉಳಿಸಿಕೊಂಡಿದ್ದಾರೆ.
ಈ ನಿರ್ಧಾರದಿಂದ ಬ್ಯಾಂಕಿನ ಒಳರಾಜಕೀಯದಲ್ಲಿ ಹೊಸ ಸಮತೋಲನ ನಿರ್ಮಾಣವಾಗುವ ಸಾಧ್ಯತೆಗಳಿವೆ ಎಂದು ಸಹಕಾರ ವಲಯದ ವೀಕ್ಷಕರು ವಿಶ್ಲೇಷಿಸಿದ್ದಾರೆ.
ವಿರೋಧಿಗಳಿಗೆ ತಕ್ಕ ಉತ್ತರ
ಚುನಾವಣೆಯ ಮುನ್ನ “ಅದು ಕೇವಲ ರಾಜಕೀಯ ಮಾತು” ಎಂದು ವ್ಯಂಗ್ಯವಾಡಿದ್ದ ವಿರೋಧಿಗಳು ಇದೀಗ ಮೌನರಾಗಿದ್ದಾರೆ.

ಹಿರಿಯ ಸಹಕಾರ ನಾಯಕರೊಬ್ಬರು ಹೇಳುವಂತೆ — “ಬಾಲಚಂದ್ರರು ನುಡಿದಂತೆ ನಡೆದಿದ್ದಾರೆ; ಇದು ಅವರ ಶೈಲಿ. ಸಹಕಾರ ರಾಜಕೀಯದಲ್ಲಿ ಈ ನಿಷ್ಠೆ ಅಪರೂಪ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಂಬಿಕೆಗೆ ಮತ್ತೊಂದು ಹೆಸರು…!
ಸಹಕಾರ ಕ್ಷೇತ್ರದಲ್ಲಿ ಜಾರಕಿಹೊಳಿ ಕುಟುಂಬದ ಪ್ರಭಾವ ಹೊಸದೇನಲ್ಲ. ಆದರೆ ಬಾಲಚಂದ್ರ ಜಾರಕಿಹೊಳಿಯ ಈ ಕ್ರಮ ಅವರ ವ್ಯಕ್ತಿತ್ವದ ನಂಬಿಕೆ, ಪ್ರಾಮಾಣಿಕತೆ ಮತ್ತು ಮಾತಿನ ಮೌಲ್ಯವನ್ನು ಮತ್ತೆ ಸಾಬೀತುಪಡಿಸಿದೆ ಎಂದು ಪಕ್ಷದ ಒಳವಲಯದಲ್ಲೇ ಚರ್ಚೆ ಶುರುವಾಗಿದೆ.

