ಬೆಳಗಾವಿ ಮಹಾನಗರ ಪಾಲಿಕೆ ಸಭೆಯಲ್ಲಿ ₹217 ಕೋಟಿ ಅಡಿಟ್ ಆಕ್ಷೇಪಣೆ ಸಿಡಿಲು!
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸದಸ್ಯರ ಒಕ್ಕೊರಲ ನಿರ್ಣಯ –
ಮೇಯರ್ ಅವರಿಂದ ಎರಡು ತಿಂಗಳ ಒಳಗೆ ವರದಿ ಸೂಚನೆ
ಬೆಳಗಾವಿ:
ಮಹಾನಗರ ಪಾಲಿಕೆಯ ವಿವಿಧ ಕಾಮಗಾರಿಗಳಿಗೆ ಸಂಬಂಧಿಸಿದ ₹217 ಕೋಟಿ ರೂ.ಗಳ ಅಡಿಟ್ ಆಕ್ಷೇಪಣೆ ವಿಷಯ ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಯಿತು. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ದಾಖಲೆ ಕೊರತೆ ಕುರಿತಾಗಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒಮ್ಮತದಿಂದ ನಿರ್ಣಯ ಕೈಗೊಂಡರು.
ಸಭೆಯ ಆರಂಭದಲ್ಲೇ ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ವಿಷಯ ಪ್ರಸ್ತಾಪಿಸಿ, “ಅಡಿಟ್ ಇಲಾಖೆಯು ₹217 ಕೋಟಿ ರೂ. ಆಕ್ಷೇಪಣೆ ಮಾಡಿದೆ. ಏಕೆ ಇಷ್ಟು ದಿನ ದಾಖಲೆ ಕ್ಲಿಯರ್ ಆಗಿಲ್ಲ? ಕಾಮಗಾರಿಗಳಲ್ಲಿ ಲೋಪವಿದೆಯೇ?” ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕಂದಾಯ ಅಧಿಕಾರಿ ಮಂಜುನಾಥ ಬೀಳಗಿ, “ಅಡಿಟ್ ಸಮಯದಲ್ಲಿ ಕೆಲವು ದಾಖಲೆಗಳನ್ನು ಸಲ್ಲಿಸಲಾಗಿಲ್ಲ. ಹೀಗಾಗಿ ಆಕ್ಷೇಪಣೆಗಳು ಬಂದಿವೆ. ದಾಖಲೆಗಳು ತೋರಿಸಲಾಗದ ಕಾರಣ ‘ನಾನ್ ಪ್ರೊಡಕ್ಷನ್ ರೆಕಾರ್ಡ್’ ಎಂದು ಉಲ್ಲೇಖಿಸಲಾಗಿದೆ,” ಎಂದು ಹೇಳಿದರು.

ಕೊಂಗಾಲಿಯವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, “ರೆಕಾರ್ಡ್ ಇದ್ದರೂ ತೋರಿಸದಿರುವುದು ಗಂಭೀರ ವಿಷಯ. ಈಗಲಾದರೂ ಪಿಡಬ್ಲ್ಯೂಡಿ ಸೇರಿದಂತೆ ಎಲ್ಲ ಇಲಾಖೆಗೆ ನೋಟೀಸ್ ಕೊಟ್ಟಿದ್ದೇವೆ. ಆದರೆ ಉತ್ತರ ಬರಲೇ ಇಲ್ಲ!” ಎಂದು ಹೇಳಿದರು.
ಅವರು ಮುಂದುವರೆದು, “ಎರಡು ತಿಂಗಳೊಳಗೆ ವರದಿ ಸಲ್ಲಿಸದ ಅಧಿಕಾರಿಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ಕುರಿತು ಸರ್ಕಾರಕ್ಕೆ ಪತ್ರ ಬರೆಯೋಣ,” ಎಂದು ಪ್ರಸ್ತಾಪಿಸಿದಾಗ ಸಭೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಸಹಮತ ವ್ಯಕ್ತಪಡಿಸಿದರು.
ಮೇಯರ್ ಮಂಗೇಶ ಪವಾರ ಅವರು ರೂಲಿಂಗ್ ನೀಡುತ್ತಾ, “ಎರಡು ತಿಂಗಳೊಳಗೆ ಎಲ್ಲಾ ಇಲಾಖೆಯಿಂದ ಸಮಗ್ರ ಮಾಹಿತಿ ಪಡೆದು ವರದಿ ಸಲ್ಲಿಸಬೇಕು. ಆ ವರದಿಯ ಆಧಾರದ ಮೇಲೆ ಸರ್ಕಾರಕ್ಕೆ ಶಿಫಾರಸು ಪತ್ರ ಕಳುಹಿಸಲಾಗುತ್ತದೆ,” ಎಂದು ಸೂಚಿಸಿದರು.

ಸಭೆಯಲ್ಲಿ ಗದ್ದಲ –
ನಾಮನಿರ್ದೇಶಿತ ಸದಸ್ಯರ ಅಸಮಾಧಾನದಿಂದ ಸಂಚಲನ
₹217 ಕೋಟಿ ಆಕ್ಷೇಪಣೆ ಕುರಿತ ಚರ್ಚೆ ಅಂತ್ಯವಾಗುತ್ತಿದ್ದಂತೆಯೇ ಸಭೆಯಲ್ಲಿ ನಾಮನಿರ್ದೇಶಿತ ಸದಸ್ಯರು ರಮೇಶ್ ಸೊಂಟಕ್ಕಿ ಮತ್ತು ದಿನೇಶ್ ನಾಶಿಪುಡಿ ಎದ್ದು ನಿಂತು “ಈ ವಿಷಯದ ಮೇಲೆ ಚರ್ಚೆಗೆ ಅವಕಾಶ ಕೊಡಬೇಕು!” ಎಂದು ಆಗ್ರಹಿಸಿದರು.
ಹನುಮಂತ ಕೊಂಗಾಲಿ ತಕ್ಷಣ ಮಧ್ಯಪ್ರವೇಶಿಸಿ, “ಮೇಯರ್ ರೂಲಿಂಗ್ ಕೊಟ್ಟಿದ್ದಾರೆ. ಚರ್ಚೆಗೆ ಅಗತ್ಯವಿಲ್ಲ,” ಎಂದಾಗ ವಾತಾವರಣ ತೀವ್ರಗೊಂಡಿತು.
ಈ ವೇಳೆಯಲ್ಲಿ ಆಡಳಿತ ಪಕ್ಷದ ಸದಸ್ಯ ರವಿ ಧೋತ್ರೆ ಅವರ ಹೇಳಿಕೆ ನಾಮನಿರ್ದೇಶಿತ ಸದಸ್ಯರ ಕೋಪಕ್ಕೆ ಕಾರಣವಾಯಿತು. ಇಬ್ಬರೂ ಎದ್ದು ನಿಂತು ಗದ್ದಲ ಸೃಷ್ಟಿಸಿದರು. ವಿರೋಧ ಪಕ್ಷದ ಸದಸ್ಯರೂ ಅವರ ಪರ ನಿಂತರು. ಕ್ಷಣಕಾಲ ಸಭೆ ಗೊಂದಲದ ಗೂಡಾಯಿತು.
ಈ ಸಂದರ್ಭ ಮೇಯರ್ ಮಂಗೇಶ ಪವಾರ ಮಧ್ಯಪ್ರವೇಶಿಸಿ, “ಪ್ರತಿ ಸದಸ್ಯರು ಕ್ರಮವಾಗಿ ಮಾತನಾಡಲಿ. ಸಭೆಯ ಶಿಸ್ತನ್ನು ಕಾಪಾಡೋಣ,” ಎಂದು ವಿನಂತಿಸಿದ ಬಳಿಕ ಸದಸ್ಯರು ತಮ್ಮ ಸ್ಥಾನಗಳಲ್ಲಿ ಕುಳಿತು ಸಭೆ ಮುಂದುವರಿಸಲಾಯಿತು.
–

ನಗರದ ಪಾರ್ಕಿಂಗ್ ಸಮಸ್ಯೆ: ರಸ್ತೆ ಸುರಕ್ಷತೆಗೆ ಸವಾಲು!*
ಸಭೆಯ ಮುಂದಿನ ಭಾಗದಲ್ಲಿ ಆಡಳಿತ ಪಕ್ಷದ ಸದಸ್ಯ ಸಂದೀಪ ಜೀರಗ್ಯಾಳ ನಗರದ ಪಾರ್ಕಿಂಗ್ ಸಮಸ್ಯೆ ಕುರಿತು ಕಟುವಾಗಿ ಮಾತನಾಡಿದರು.
“ನಗರದಲ್ಲಿ ವಾಹನಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಆದರೆ ಪಾರ್ಕಿಂಗ್ ಸ್ಥಳಗಳ ಕೊರತೆಯಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ. ಸಂಚಾರಿ ಪೊಲೀಸ್, ಆರ್‌ಟಿಓ ಹಾಗೂ ಪಾಲಿಕೆ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದರು.
ಅವರು ಪಾರ್ಕಿಂಗ್ ವ್ಯವಸ್ಥೆಯ ಅವ್ಯವಸ್ಥೆ, ಫುಟ್‌ಪಾತ್‌ಗಳಲ್ಲಿ ಅಕ್ರಮ ನಿಲುಗಡೆ, ರಸ್ತೆ ಗುಂಡಿಗಳ ಸಮಸ್ಯೆ ಮುಂತಾದವುಗಳ ಬಗ್ಗೆ ಗಂಭೀರವಾಗಿ ಉಲ್ಲೇಖಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಂಚಾರಿ ಎಸಿಪಿ ಉಜ್ವಲ್ ನಿಕ್ಕಂ, “ಸದಸ್ಯರು ಪ್ರಸ್ತಾಪಿಸಿದ ವಿಷಯಗಳು ನಿಜಕ್ಕೂ ಗಂಭೀರ. ನಾವು ಈಗಾಗಲೇ ಕ್ರಮ ಕೈಗೊಂಡಿದ್ದೇವೆ. ಹಲವು ಶಾಲೆ–ಕಾಲೇಜುಗಳಿಗೆ ನೋಟೀಸ್ ನೀಡಲಾಗಿದೆ. ಕೆಲವು ಸಂಸ್ಥೆಗಳು ಈಗಾಗಲೇ ಪಾರ್ಕಿಂಗ್ ವ್ಯವಸ್ಥೆ ಸರಿಪಡಿಸಿವೆ. ಶೀಘ್ರದಲ್ಲೇ ಎಲ್ಲ ಸದಸ್ಯರ ಸಹಯೋಗದಿಂದ ಸಮಗ್ರ ಯೋಜನೆ ರೂಪಿಸಲಾಗುವುದು,” ಎಂದು ಭರವಸೆ ನೀಡಿದರು.

