ಬೆಳಗಾವಿ: ಅಮೇರಿಕಾ ಪ್ರಜೆಗಳನ್ನು ಗುರಿಯಾಗಿಸಿಕೊಂಡು ಆನ್‌ಲೈನ್ ವಂಚನೆ ನಡೆಸುತ್ತಿದ್ದ ಅಂತರರಾಜ್ಯ ಸೈಬರ್ ಅಪರಾಧ ಪ್ರಕರಣವನ್ನು ಬೆಳಗಾವಿ ಸೈಬರ್ ಕ್ರೈಂ ಪೊಲೀಸರು ಭೇದಿಸಿದ್ದಾರೆ.
ಅಜಂ ನಗರ ಸರ್ಕಲ್ ಬಳಿ ಅಕ್ರಮವಾಗಿ ಕಾಲ್ ಸೆಂಟರ್ ನಡೆಸುತ್ತಿದ್ದ 33 ಮಂದಿ ಆರೋಪಿತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 37 ಲ್ಯಾಪ್‌ಟಾಪ್‌ಗಳು, 37 ಮೊಬೈಲ್‌ಗಳು ಮತ್ತು 3 ವೈ-ಫೈ ರೌಟರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ಅಂತರಿಕ ಭದ್ರತಾ ವಿಭಾಗ ನೀಡಿದ ಮಾಹಿತಿ ಹಾಗೂ ಅನಾಮದೇಯ ಪತ್ರದ ಆಧಾರದ ಮೇಲೆ ಎ.ಎಸ್.ಐ ಎಲ್.ಎಸ್. ಚಿನಗುಂಡಿ ಅವರು ನೀಡಿದ ಫಿರ್ಯಾದಿನ ಮೇರೆಗೆ ಪ್ರಕರಣ ದಾಖಲಿಸಲಾಗಿದ್ದು, ಪಿ.ಐ ಬಿ.ಆರ್. ಗಡ್ಡಕರ ಅವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ದಾಳಿ ನಡೆಸಲಾಗಿದೆ.

ವಂಚನೆಯ ಮಾದರಿ
ಆರೋಪಿತರು ಅಮೇರಿಕಾದ ಪ್ರಜೆಗಳಿಗೆ “ನಿಮ್ಮ ಅಮೇಜಾನ್ ಆರ್ಡರ್ ಪ್ಲೇಸ್ ಆಗಿದೆ” ಎಂಬ ನಕಲಿ ಎಸ್‌ಎಂಎಸ್‌ಗಳನ್ನು ಕಳುಹಿಸುತ್ತಿದ್ದರು. ಆ ಸಂದೇಶದಲ್ಲಿ ನೀಡಿದ್ದ ನಂಬರಕ್ಕೆ ಕರೆ ಮಾಡಿದವರು “ಅಮೇಜಾನ್ ಕಸ್ಟಮರ್ ಕೇರ್” ಹೆಸರಿನಲ್ಲಿ ಮಾತನಾಡುತ್ತಿದ್ದ ಆರೋಪಿತರಿಗೆ ಸಿಕ್ಕುತ್ತಿದ್ದರು. ನಂತರ, ಆರ್ಡರ್ ರದ್ದು ಮಾಡಲು ಸಹಾಯ ಮಾಡುವ ನೆಪದಲ್ಲಿ ಪೀಡಿತರ ಬ್ಯಾಂಕ್ ಖಾತೆಯ ವಿವರಗಳನ್ನು ಪಡೆದು, “ನಿಮ್ಮ ಹೆಸರಿನಲ್ಲಿ ಮೋಸ ಖಾತೆಗಳು ತೆರೆಯಲ್ಪಟ್ಟಿವೆ” ಎಂದು ಹೆದರಿಸಿ ಹಣ ವರ್ಗಾಯಿಸಲು ಪ್ರೇರೇಪಿಸುತ್ತಿದ್ದರು. ಈ ಮೂಲಕ ಲಕ್ಷಾಂತರ ರೂಪಾಯಿಗಳನ್ನು ವಂಚಿಸುವ ಚಟುವಟಿಕೆ ನಡೆಸಿದ್ದರು ಎನ್ನಲಾಗಿದೆ.

ಬಂಧಿತರು
ಬಂಧಿತ 33 ಮಂದಿ ಗುಜರಾತ್, ಮಹಾರಾಷ್ಟ್ರ, ದೆಹಲಿ, ಉತ್ತರ ಪ್ರದೇಶ, ರಾಜಸ್ಥಾನ, ಹಿಮಾಚಲ ಪ್ರದೇಶ, ಮೇಘಾಲಯ, ಝಾರ್ಖಂಡ್, ನಾಗಾಲ್ಯಾಂಡ್ ಹಾಗೂ ಪಶ್ಚಿಮ ಬಂಗಾಳ ರಾಜ್ಯಗಳ ನಿವಾಸಿಗಳಾಗಿದ್ದಾರೆ. ಪ್ರಮುಖ ಆರೋಪಿತರಲ್ಲಿ ಪ್ರಿತೇಶ್ ಪಟೇಲ್, ಅಶುತೋಷ್ ಜಾ, ಕರಣ್ ರಾಜಪುತ, ರೋಹನ್ ಯಾದವ್, ಪುಷ್ಪರಾಜ ಸ್ವಾಮಿ, ಕ್ರಿಸ್ಟೋಫರ್ ಪೀಟರ್, ನವೀನ್ ವರ್ಮಾ, ರಾಹುಲ್ ಸಾಹಿ, ಪೇರಿಸಿಸಾ ಲಾಜರ್ ಸೇರಿದಂತೆ ಹಲವರು ಸೇರಿದ್ದಾರೆ.
ಪೊಲೀಸ್ ಆಯುಕ್ತರು ಈ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

