ಕೃಷ್ಣಮೃಗಗಳ ಸಾವಿನ ಬಗ್ಗೆ ನಿರ್ಲಕ್ಷ್ಯ ಬೇಡ- ಸಚಿವ ಸತೀಶ್

ಬೆಳಗಾವಿ: ರಾಣಿ ಚೆನ್ನಮ್ಮ ಮಿನಿ ಮೃಗಾಲಯದಲ್ಲಿ ಕೃಷ್ಣಮೃಗಗಳ ಸಾವುಗಳು ಆತಂಕ ಸೃಷ್ಟಿಸಿರುವ ಹಿನ್ನೆಲೆ, ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಮಂಗಳವಾರ ತುರ್ತುವಾಗಿ ಮೃಗಾಲಯಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ನೇರವಾಗಿ ಪರಿಶೀಲಿಸಿದರು.
ಪ್ರಾಣಿಗಳ ಆರೈಕೆ, ಕಾಯಿಲೆ ವ್ಯಾಪಕಗೊಳ್ಳುತ್ತಿರುವ ಶಂಕೆ ಹಾಗೂ ಮೃಗಾಲಯದ ಒಳಗಿನ ಸುರಕ್ಷತಾ ಕ್ರಮಗಳ ಕುರಿತು ಅಧಿಕಾರಿಗಳಿಂದ ವಿವರವಾದ ಮಾಹಿತಿ ಪಡೆದು, “ಯಾವುದೇ ನಿರ್ಲಕ್ಷ್ಯ ಮರುಕಳಿಸಬಾರದು” ಎಂದು ಸಚಿವರು ಸ್ಪಷ್ಟ ಸೂಚನೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಕೃಷ್ಣಮೃಗಗಳಲ್ಲಿ ವೈರಲ್‌ ರೋಗ ಕಾಣಿಸಿಕೊಂಡಿದ್ದರಿಂದ ಅನೇಕ ಮೃಗಗಳು ಮೃತಪಟ್ಟಿರುವುದು ದೊಡ್ಡ ಚಿಂತೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವರು ಅಧಿಕಾರಿಗಳು ಹಾಗೂ ಪಶುವೈದ್ಯರ ತಂಡದೊಂದಿಗೆ  ಚರ್ಚೆ ನಡೆಸಿದರು.

ಸಚಿವರು ಕೇಳಿದ್ದೇನು?

ಈ ಕಾಯಿಲೆ ಮೃಗಾಲಯದ ಮತ್ತಿತರ ಪ್ರಾಣಿಗಳಿಗೆ ಪಸರಿಸುವ ಸಂಭವವಿದೆಯೇ?

ತುರ್ತು ಚಿಕಿತ್ಸೆ ಮತ್ತು ವೈದ್ಯಕೀಯ ನಿಗಾ ಹೇಗಿದೆ?

*ಮುಂದೆ ಇಂತಹ ಸ್ಥಿತಿಯನ್ನು ತಪ್ಪಿಸಲು ಏನು ಕ್ರಮ?*

ಈ ಎಲ್ಲ ಪ್ರಶ್ನೆಗಳ ಬಗ್ಗೆ ಸಚಿವರು ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ ಕೇಳಿದರು. ಮೃಗಾಲಯದ ವೈದ್ಯರು, “ಕೃಷ್ಣಮೃಗಗಳಿಗೆ ಕಂಡುಬಂದಿರುವ ಕಾಯಿಲೆ ಇತರ ಪ್ರಾಣಿಗಳಿಗೆ ಹರಡುವ ಸಾಧ್ಯತೆ ಕಡಿಮೆ” ಎಂದು ಸಚಿವರಿಗೆ ವಿವರಿಸಿದರು.

ಬೆಂಗಳೂರಿನಿಂದ ವಿಶೇಷ ವೈದ್ಯರ ತಂಡವನ್ನು ತರಿಸಿ ರೋಗಪೀಡಿತ ಮೃಗಗಳಿಗೆ ಚಿಕಿತ್ಸೆ ನೀಡಲಾಗಿದೆ.
ಲ್ಯಾಬ್‌ ವರದಿ ಸಹ ದೊರೆತಿದ್ದು ರೋಗದ ಮೂಲವನ್ನು ಪತ್ತೆಹಚ್ಚಲಾಗಿದೆ.
“ಮೃಗಾಲಯದಲ್ಲಿರುವ ಹುಲಿ, ಸಿಂಹ ಸೇರಿದಂತೆ ಇತರ ಪ್ರಾಣಿಗಳ ಮೇಲೆ ಕೂಡ ಕಟ್ಟುನಿಟ್ಟಿನ ನಿಗಾವಹಿಸಲಾಗಿದೆ, ಎಲ್ಲರ ಆರೋಗ್ಯ ಸುರಕ್ಷಿತವಾಗಿದೆ” ಎಂದು ಅಧಿಕಾರಿಗಳು ಸಚಿವರಿಗೆ ಹೇಳಿಕೊಟ್ಟರು.

‘ಕಟ್ಟುನಿಟ್ಟಿನ ನಿಗಾ — ಪರಿಣಾಮಕಾರಿ ನಿಯಂತ್ರಣ-
ಚಿಕಿತ್ಸೆಯ ಪರಿಣಾಮವಾಗಿ ರೋಗ ನಿಯಂತ್ರಣ ಹಂತಕ್ಕೆ ಬಂದಿದೆ ಎಂದು ವೈದ್ಯರು ಸಚಿವರಿಗೆ ಮಾಹಿತಿ ನೀಡಿದರು.
ಮುಂದಿನ ದಿನಗಳಲ್ಲಿ ಇಂತಹ ಆಪತ್ತು ಮರುಕಳಿಸದಂತೆ ನಿಗಾ, ಹೈಜೀನ್‌, ವೈದ್ಯಕೀಯ ತಪಾಸಣೆ ಮತ್ತು ವಾಸಸ್ಥಳ ಸುಧಾರಣೆ ಕುರಿತ ಯೋಜನೆಗಳನ್ನೂ ಸಚಿವರು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಎಸಿಎಫ್ ನಾಗರಾಜ ಬಾಳೇಹೂಸೂರ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸದಸ್ಯ–ಕಾರ್ಯದರ್ಶಿ ಸುನಿಲ್ ಪನವಾರ್, ಮಂಜುನಾಥ ಚವ್ಹಾಣ್, ಡಿಎಫ್‌ಒ ಕ್ರಾಂತಿ ಎನ್‌.ಇ, ಪಶುವೈದ್ಯರಾದ ಪ್ರಿಯಾಗ್ ಹಾಗೂ ಮೃಗಾಲಯ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!