ಬೆಳಗಾವಿ:
ಜಿಲ್ಲಾ ಕೇಂದ್ರಗಳಲ್ಲಿ ಕೈಗಾರಿಕೆಗಳನ್ನು ಬೆಳೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಂಭೀರ ಪ್ರಯತ್ನ ನಡೆಸುತ್ತಿದೆ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ಬೆಳಗಾವಿ ವಾಣಿಜ್ಯೋದ್ಯಮ ಸಂಘಕ್ಕೆ ಭೇಟಿ ನೀಡಿ ಕೈಗಾರಿಕೋದ್ಯಮಿಗಳೊಂದಿಗೆ ಚರ್ಚೆ ನಡೆಸಿದ ಅವರು, ರಾಜ್ಯದ ಜಿಡಿಪಿ ಬೆಳವಣಿಗೆಯಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಮಹತ್ವದ್ದಾಗಿದೆ. ಈ ಹಿನ್ನೆಲೆ ಕೈಗಾರಿಕೋದ್ಯಮಿಗಳಿಗೆ ಅಗತ್ಯವಿರುವ ಮೂಲಸೌಕರ್ಯ ಹಾಗೂ ಸೌಲಭ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

‘ಬಿಯಾಂಡ್ ಬೆಂಗಳೂರು’ ಎನ್ನುವ ದೃಷ್ಟಿಕೋನದೊಂದಿಗೆ ಸರ್ಕಾರ ಕಾರ್ಯನಿರ್ವಹಿಸುತ್ತಿದ್ದು, ಬೆಂಗಳೂರು ಕೇಂದ್ರಿತ ಅಭಿವೃದ್ಧಿಯನ್ನು ಮೀರಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕೈಗಾರಿಕೆಗಳಿಗೆ ಅಗತ್ಯವಾದ ಭೂಮಿ ಗುರುತಿಸಲಾಗುತ್ತಿದೆ. ಜಿಲ್ಲೆಗಳಲ್ಲಿಯೇ ಕೈಗಾರಿಕೆ ಬೆಳೆಯಲು ಬೇಕಾದಷ್ಟು ಅವಕಾಶಗಳಿದ್ದು, ಈ ಸಂಬಂಧ ಮುಖ್ಯಮಂತ್ರಿ ಅವರೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ ಎಂದು ಅವರು ಹೇಳಿದರು.

ಉತ್ತರ ಕರ್ನಾಟಕ ಭಾಗದಲ್ಲಿ ಕೈಗಾರಿಕೆಗಳ ಅಭಿವೃದ್ಧಿ ಸರ್ಕಾರದ ಪ್ರಮುಖ ಉದ್ದೇಶವಾಗಿದೆ. ಈ ಭಾಗದಲ್ಲಿ ಕೈಗಾರಿಕೆ ಬೆಳೆಯಬೇಕೆಂಬುದು ಸರ್ಕಾರದ ಇಚ್ಛೆಯಷ್ಟೇ ಅಲ್ಲ, ಬಲವಾದ ಉತ್ಸಾಹವೂ ಇದೆ ಎಂದು ಸಚಿವ ದರ್ಶನಾಪುರ ಹೇಳಿದರು.
‘ಬಿಯಾಂಡ್ ಬೆಂಗಳೂರು’ ಹುಬ್ಬಳ್ಳಿಯಲ್ಲೇ ನಿಲ್ಲಬಾರದು: ಅಭಯ ಪಾಟೀಲ್

ಕಾರ್ಯಕ್ರಮದಲ್ಲಿ ಶಾಸಕ ಅಭಯ ಪಾಟೀಲ್ ಮಾತನಾಡಿ, ‘ಬಿಯಾಂಡ್ ಬೆಂಗಳೂರು’ ಪರಿಕಲ್ಪನೆ ಬಹುತೇಕ ಹುಬ್ಬಳ್ಳಿವರೆಗೆ ಬಂದು ನಿಲ್ಲುತ್ತದೆ. ಅದರ ಮುಂದೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ವಿಶೇಷ ಸಹಕಾರವಿಲ್ಲದೆಲೇ ಬೆಳಗಾವಿಯ ಕೈಗಾರಿಕೋದ್ಯಮಿಗಳು ಕೈಗಾರಿಕೆಗಳನ್ನು ಬೆಳೆಸಿದ್ದಾರೆ. ಆದರೆ ಅಧಿಕಾರಿಗಳ ಕಿರುಕುಳ ಹೆಚ್ಚುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಹೇಳಿದರು.
ಗಡಿ ಜಿಲ್ಲೆಯಾಗಿರುವ ಬೆಳಗಾವಿಗೆ ಅನೇಕ ಅವಕಾಶಗಳಿದ್ದರೂ, ಆರಂಭದಿಂದಲೂ ಜಿಲ್ಲೆಯನ್ನು ನಿರ್ಲಕ್ಷ್ಯ ಮಾಡಲಾಗಿದೆ. ಬೆಳಗಾವಿಯನ್ನು ಕೈಗಾರಿಕಾ ಕೇಂದ್ರವಾಗಿ ಮಾರ್ಕೆಟಿಂಗ್ ಮಾಡುವಲ್ಲಿ ನಾವೂ ವಿಫಲರಾಗಿದ್ದೇವೆ ಎಂಬ ಆತ್ಮವಿಮರ್ಶೆಯನ್ನೂ ಅವರು ಮಾಡಿದರು.
ಈ ಸಂದರ್ಭದಲ್ಲಿ ಫೌಂಡ್ರಿ ಕ್ಲಸ್ಟರ್ ಅಸೋಸಿಯೇಷನ್ ಅಧ್ಯಕ್ಷ ರಾಮ್ ಭಂಡಾರೆ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸತ್ಯನಾರಾಯಣ ಭಟ್ ಉಪಸ್ಥಿತರಿದ್ದರು.
ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಪ್ರಭಾಕರ ನಾಗರ ಮುನ್ನೋಳಿ ಸ್ವಾಗತಿಸಿದರು.
ಆನಂದ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು.
ಗೌರವ ಕಾರ್ಯದರ್ಶಿ ಸತೀಶ್ ಕುಲಕರ್ಣಿ ವಂದಿಸಿದರು.
ಬೆಳಗಾವಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ವತಿಯಿಂದ ಸಚಿವರಿಗೆ ಮನವಿಯನ್ನೂ ಸಲ್ಲಿಸಲಾಯಿತು.

