ಡಿಸೆಂಬರ್‌ನಲ್ಲಿ ನಾಲ್ಕು ಪೊಕ್ಸೊ ಪ್ರಕರಣಗಳು
ಗಡಿನಾಡ

ಬೆಳಗಾವಿ:
ಡಿಸೆಂಬರ್ ತಿಂಗಳು ಬೆಳಗಾವಿಗೆ ಕೇವಲ ಚಳಿಯನ್ನಲ್ಲ, ಮಕ್ಕಳ ಮೇಲಿನ ದೌರ್ಜನ್ಯದ ಭೀತಿಯನ್ನೂ ತಂದಿದೆ. ಒಂದೇ ತಿಂಗಳಲ್ಲಿ ನಾಲ್ಕು ಪೊಕ್ಸೊ ಪ್ರಕರಣಗಳು ದಾಖಲಾಗಿರುವುದು ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಮೂರು ಪ್ರಕರಣಗಳು ನಗರ ಎಪಿಎಂಸಿ ಠಾಣೆ ವ್ಯಾಪ್ತಿಯಲ್ಲಿ, ಇನ್ನೊಂದು ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಆದರೆ ಪ್ರಕರಣಗಳ ಸಂಖ್ಯೆ ಏರಿದಂತೆ ಕಾನೂನು ವ್ಯವಸ್ಥೆ ಚುರುಕಾಗಬೇಕಿದ್ದರೆ, ಇಲ್ಲಿ ಮೌನವೇ ಮೇಲುಗೈ ಸಾಧಿಸಿದೆ.

ಮಕ್ಕಳ ರಕ್ಷಣೆಗೆ ರೂಪಿಸಿದ ಕಾನೂನುಗಳು ಕಡತಗಳಲ್ಲಿ ಸೀಮಿತವಾಗಿದ್ದಾವೇ? ಎಂಬ ಪ್ರಶ್ನೆ ಇಂದು ಬೆಳಗಾವಿಯ ಪ್ರತಿಯೊಬ್ಬ ಪೋಷಕರನ್ನು ಕಾಡುತ್ತಿದೆ.
ಅಪಹರಣ, ಬೆದರಿಕೆ… ಬಳಿಕವೂ ನಿಶ್ಚಲ ವ್ಯವಸ್ಥೆ.
ಎಪಿಎಂಸಿ ಠಾಣೆ ವ್ಯಾಪ್ತಿಯ ಹಳ್ಳಿಯೊಂದರಲ್ಲಿ ನಡೆದ ಘಟನೆ ಪೊಲೀಸ್ ವ್ಯವಸ್ಥೆಯ ನಿಜ ಮುಖವನ್ನು ಬಹಿರಂಗಪಡಿಸಿದೆ. ಶಾಲೆಯಿಂದ ಮನೆಗೆ ಮರಳುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಆಟೋದಲ್ಲಿ ಬಂದ ವ್ಯಕ್ತಿಯೊಬ್ಬ ‘ಪತ್ರ ಕೊಡಬೇಕು’ ಎಂಬ ನೆಪದಲ್ಲಿ ಬಲವಂತವಾಗಿ ಕರೆದೊಯ್ದಿದ್ದಾನೆ ಎನ್ನಲಾಗಿದೆ. ಪ್ರಜ್ಞೆ ತಪ್ಪಿಸುವ ವಸ್ತು ಮಿಶ್ರಿತ ನೀರು ಕುಡಿಸಿ ತಾಂಡಾಕ್ಕೆ ಕರೆದೊಯ್ದ ಆರೋಪವೂ ಗಂಭೀರವಾಗಿದೆ.
ಕುಟುಂಬಸ್ಥರು ಹುಡುಕಾಟ ಆರಂಭಿಸಿ ಠಾಣೆ ತಲುಪಿದ ಮಾಹಿತಿ ಆರೋಪಿಗಳಿಗೆ ತಲುಪುತ್ತಿದ್ದಂತೆಯೇ, ಬಾಲಕಿಯನ್ನು ಶಾಲೆಯ ಸಮೀಪ ಬಿಟ್ಟು ಪರಾರಿಯಾಗಿದ್ದಾರೆ. ಈ ಬಗ್ಗೆ ಯಾರಿಗೂ ಹೇಳಿದರೆ ಜೀವ ಬೆದರಿಕೆ ಎಂದು ಬಾಲಕಿಯನ್ನು ಮೌನಕ್ಕೆ ತಳ್ಳಲಾಗಿದೆ ಎನ್ನಲಾಗಿದೆ.
ಸಾಕ್ಷ್ಯ ಇದ್ದರೂ ಕಾನೂನು ನಿದ್ರೆ
ಆರೋಪಿಗಳು ನೀಡಿದ ಪತ್ರ, ಅದರಲ್ಲಿದ್ದ ದೂರವಾಣಿ ಸಂಖ್ಯೆ—ಎಲ್ಲವೂ ಕುಟುಂಬದ ಕೈಯಲ್ಲೇ ಇದ್ದರೂ, ಠಾಣೆಯಲ್ಲಿ ಕಾನೂನು ಚಲಿಸಲಿಲ್ಲ. ದೂರವಾಣಿ ಸಂಖ್ಯೆಗೆ ಒಂದು ಕರೆ ಮಾಡಿದಷ್ಟೇ, ಮುಂದಿನ ಕ್ರಮ ಶೂನ್ಯ. ಇನ್ನೂ ಆತಂಕಕಾರಿ ಸಂಗತಿ ಎಂದರೆ, ಪತ್ತೆಯಾದ ತಕ್ಷಣ ಕಡ್ಡಾಯವಾಗಿರುವ ವೈದ್ಯಕೀಯ ಪರೀಕ್ಷೆಗೂ ಬಾಲಕಿಯನ್ನು ಕರೆದೊಯ್ಯದೆ ಮನೆಗೆ ಕಳುಹಿಸಲಾಗಿದೆ ಎಂಬ ಆರೋಪ.
‘ ಇದು ಅಧಿವೇಶನ ಕಾಲ’—ಅಪರಾಧಕ್ಕೆ ಕ್ಯಾಲೆಂಡರಾ?
ದೂರು ದಾಖಲಿಸಲು ಮತ್ತೆ ಠಾಣೆಗೆ ಹೋದಾಗ, ‘ಈಗ ಅಧಿವೇಶನ ನಡೆಯುತ್ತಿದೆ, 20ರ ನಂತರ ಬನ್ನಿ’ ಎಂಬ ಉತ್ತರ ಕೇಳಿಬಂದಿದೆ ಎನ್ನಲಾಗಿದೆ. ಮಕ್ಕಳ ಮೇಲಿನ ಲೈಂಗಿಕ ಅಪರಾಧಕ್ಕೂ ದಿನಾಂಕ, ಸಮಯ ನಿಗದಿಯೇ?
*ಎನ್‌ಜಿಓ ಒತ್ತಡಕ್ಕೆ ರಾತ್ರಿ ಎಫ್‌ಐಆರ್—ಪೊಕ್ಸೊ ಮರೆಯಾಯಿತು.
ಎನ್‌ಜಿಓ ಕಾರ್ಯಕರ್ತರ ತೀವ್ರ ಒತ್ತಡದ ಬಳಿಕ ರಾತ್ರಿ 11 ಗಂಟೆಗೆ ಪ್ರಕರಣ ದಾಖಲಾಗಿದೆ. ಆದರೆ ಎಫ್‌ಐಆರ್‌ನಲ್ಲಿ ಪೊಕ್ಸೊ ಕಾಯ್ದೆಯ ಸ್ಪಷ್ಟ ಉಲ್ಲೇಖವೇ ಇಲ್ಲ. ಗಂಭೀರ ಅಂಶಗಳನ್ನು ಮಸುಕುಗೊಳಿಸಿದಂತೆ ಕಂಡುಬರುವ ಈ ನಡೆ ನಿರ್ಲಕ್ಷ್ಯವೇ ಅಥವಾ ಉದ್ದೇಶಪೂರ್ವಕ ರಕ್ಷಣೆವೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ.
ಸಚಿವೆ ತವರು ಜಿಲ್ಲೆಯಲ್ಲಿ ಮಕ್ಕಳ ಸ್ಥಿತಿ ಇದೇನಾ?
ಬೆಳಗಾವಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರ ತವರು ಜಿಲ್ಲೆ. ಇಲ್ಲಿ ಮಕ್ಕಳ ಮೇಲಿನ ದೌರ್ಜನ್ಯಕ್ಕೂ ಕಾನೂನು ತಕ್ಷಣ ಸ್ಪಂದಿಸದಿದ್ದರೆ, ಅದು ಕೇವಲ ಪೊಲೀಸ್ ಇಲಾಖೆಯಲ್ಲ, ಸಂಪೂರ್ಣ ಸರ್ಕಾರದ ನೈತಿಕ ಹೊಣೆಗಾರಿಕೆಯ ಪ್ರಶ್ನೆಯಾಗುತ್ತದೆ.
ಪೊಕ್ಸೊ ಕಾನೂನು ಕಾಗದದ ಮೇಲಿನ ಭರವಸೆಯಾಗಬಾರದು. ಪೊಲೀಸ್ ನಿರ್ಲಕ್ಷ್ಯಕ್ಕೆ ಮಕ್ಕಳ ಭವಿಷ್ಯ ಬಲಿಯಾಗಬಾರದು. ಸರ್ಕಾರ ತಕ್ಷಣವೇ ಜಿಲ್ಲೆಯಲ್ಲಿ ದಾಖಲಾಗಿರುವ ಎಲ್ಲ ಪೊಕ್ಸೊ ಪ್ರಕರಣಗಳ ಉನ್ನತ ಮಟ್ಟದ ಮರುಪರಿಶೀಲನೆ ನಡೆಸಿ, ಲೋಪ ಮಾಡಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಬೆಳಗಾವಿಯಲ್ಲಿ ‘ಮಕ್ಕಳ ಸುರಕ್ಷತೆ’ ಎಂಬ ಪದವೇ ಶೀರ್ಷಿಕೆಯಷ್ಟೇ ಉಳಿಯುವ ಅಪಾಯ ಎದುರಾಗಿದೆ.

