ಶಿಕ್ಷಣವೇ ನಮ್ಮ ಶಕ್ತಿ – ಪ್ರಲ್ಹಾದ ಜೋಷಿ

ಜಗತ್ತಿನ ಜ್ಞಾನಭೂಮಿ ಭಾರತ;

ಬಿ.ಕೆ. ಮಾಡೆಲ್ ಶಾಲೆ ಸುವರ್ಣ ಮಹೋತ್ಸವದಲ್ಲಿ ಕೇಂದ್ರ ಸಚಿವರ ಘೋಷಣೆ.

ಬೆಳಗಾವಿ:
ಭಾರತವು ಜಗತ್ತಿನಲ್ಲೇ ಅತ್ಯಂತ ಜ್ಞಾನವಂತರಿರುವ ಭೂಮಿಯಾಗಿದ್ದು, ಶಿಕ್ಷಣಕ್ಕೆ ನಮ್ಮ ದೇಶದಲ್ಲಿ ಸಿಕ್ಕಿರುವ ಪ್ರಧಾನತೆ ಬೇರೆ ಯಾವುದೇ ರಾಷ್ಟ್ರದಲ್ಲಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಹೇಳಿದರು.
ಬೆಲಗಾಮ್ ಎಜ್ಯುಕೇಷನ್ ಸೊಸೈಟಿ ನಡೆಸುತ್ತಿರುವ ಬಿ.ಕೆ. ಮಾಡೆಲ್ ಶಾಲೆಯ ಸುವರ್ಣ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು

. , ಬ್ರಿಟಿಷರ ಕಾಲಕ್ಕಿಂತಲೂ ಮುಂಚೆಯೇ ಭಾರತದಲ್ಲಿ ಶಾಲೆಗಳು ಹಾಗೂ ವಿದ್ಯಾಲಯಗಳು ಅಸ್ತಿತ್ವದಲ್ಲಿದ್ದವು. ಪುರಾತನ ಭಾರತದಲ್ಲಿ ಶಿಕ್ಷಣವೇ ಸಮಾಜದ ಮೂಲಬಲವಾಗಿತ್ತು ಎಂದು ಹೇಳಿದರು.
ಭಾರತವು ಮಾನವೀಯತೆಯ ಸಂದೇಶವನ್ನು ಜಗತ್ತಿಗೆ ನೀಡಿದ ರಾಷ್ಟ್ರ. 18ನೇ ಶತಮಾನಕ್ಕೂ ಮೊದಲೇ ಇಲ್ಲಿ ಶಿಕ್ಷಣ ವ್ಯವಸ್ಥೆ ಗಟ್ಟಿಯಾಗಿ ನೆಲೆಸಿತ್ತು. 2047ರ ವೇಳೆಗೆ ದೇಶವು ವಿಕಸಿತ ರಾಷ್ಟ್ರವಾಗಿ ಹೊರಹೊಮ್ಮಬೇಕಾದರೆ ಶಿಕ್ಷಣ ಕ್ಷೇತ್ರದಲ್ಲಿ ಮೂಲಭೂತ ಬದಲಾವಣೆ ಅಗತ್ಯ. ಇಂದಿನ ದಿನಗಳಲ್ಲಿ ಭಾರತ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದ್ದು, ಇಡೀ ಜಗತ್ತು ಭಾರತದತ್ತ ನಿರೀಕ್ಷೆಯಿಂದ ನೋಡುವಂತಾಗಿದೆ ಎಂದು ಜೋಷಿ ಹೇಳಿದರು.
ರಾಜ್ಯಸಭಾ ಮಾಜಿ ಸದಸ್ಯ ಡಾ. ಪ್ರಭಾಕರ್ ಕೋರೆ ಮಾತನಾಡಿ, ಹಿಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು ಅನೇಕ ಮಹನೀಯರ ತ್ಯಾಗ ಮತ್ತು ಸೇವೆಯಿಂದ ಸ್ಥಾಪನೆಯಾಗಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಶಿಕ್ಷಣ ಸಂಸ್ಥೆಗಳು ಕೆಲ ಕುಟುಂಬಗಳಿಗೆ ಸೀಮಿತವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕೆ.ಎಲ್.ಇ. ಸಂಸ್ಥೆ ಮತ್ತು ಬಿ.ಕೆ. ಮಾಡೆಲ್ ಶಾಲೆಯಂತಹ ಸಂಸ್ಥೆಗಳು ಶಿಕ್ಷಕರಿಂದಲೇ ಸ್ಥಾಪಿತವಾಗಿದ್ದು, ದಶಕಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣದ ದಾಸೋಹ ನೀಡುತ್ತ ಬಂದಿವೆ. ಈ ಪರಂಪರೆಯನ್ನು ಮುಂದುವರಿಸಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮಹಾಪೌರ ಮಂಗೇಶ್ ಪವಾರ್, ಉಪಮಹಾಪೌರ ವಾಣಿ ವಿಲಾಸ ಜೋಷಿ, ಮಾಜಿ ಶಾಸಕ ಸಂಜಯ್ ಪಾಟೀಲ್, ಸಂಸ್ಥೆಯ ಅಧ್ಯಕ್ಷ ಅವಿನಾಶ ಪೋದಾರ, ದೀಪಕ ಕರಂಜಿಕರ, ವಿದ್ಯಾ ಮುರಕುಂಬಿ, ಎಸ್.ಎನ್. ಶಿವಣಗಿ, ಸುಧೀರ್ ಕುಲಕರ್ಣಿ, ಅರವಿಂದ ಹುಣಗುಂದ, ಕೆ.ಎನ್. ಪೈ, ಎಸ್.ಎ. ಚಾಟೆ, ಎಸ್.ಎನ್. ಜೋಷಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!