Headlines

ರಾಜಸೌರಭದಲ್ಲಿ ಮಿಂಚಿದ ಶಹಾಪುರದ ಶಾಲೆ..!

ಸಾಂಗ್ಲಿ ಸಂಸ್ಥಾನದ ಛಾಯೆಯಲ್ಲಿ ಚಿಂತಾಮಣರಾವ್ ಶಾಲೆಯ ಶತಮಾನೋತ್ಸವ –

ಸಾವಿರಾರು ಜನರ ನಡುವೆ ಮಹಾರಾಜರ ಮೂರ್ತಿ ಅನಾವರಣ.

ಅಭಯ ಪಾಟೀಲರ ಉಸ್ತುವಾರಿಯಲ್ಲಿ ಅದ್ದೂರಿಯಾಗಿ ನಡೆದ ಶಾಲಾ ಶತಮಾನೋತ್ಸವ.

ಬೆಳಗಾವಿ:
ಶಹಾಪುರದ ಸಂಸ್ಕಾರ, ಸಾಂಗ್ಲಿ ಸಂಸ್ಥಾನದ ರಾಜಗೌರವ ಮತ್ತು ಬೆಳಗಾವಿಯ ಶೈಕ್ಷಣಿಕ ಹೆಮ್ಮೆ – ಈ ಮೂರೂ ಒಂದೇ ವೇದಿಕೆಯಲ್ಲಿ ಒಂದಾಗಿ, ಚಿಂತಾಮಣರಾವ್ ಪಟವರ್ಧನ ಶಾಲೆಯ ಶತಮಾನೋತ್ಸವ ಇಂದು ಬೆಳಗಾವಿಯನ್ನು ಹಬ್ಬದ ನಗರವನ್ನಾಗಿ ಮಾಡಿತು.

ಸಾಂಗ್ಲಿ ಸಂಸ್ಥಾನಿಕ ಚಿಂತಾಮಣರಾವ್ ಪಟವರ್ಧನ ಮಹಾರಾಜರ ಭವ್ಯ ಮೂರ್ತಿ ಅನಾವರಣದೊಂದಿಗೆ ಆರಂಭವಾದ ಈ ಸಮಾರಂಭ ಇತಿಹಾಸದ ಪುಟಗಳನ್ನು ಜೀವಂತಗೊಳಿಸಿದಂತಿತ್ತು.

ಶಹಾಪುರದಿಂದ ಶಾಲಾ ಆವರಣದವರೆಗೆ ನಡೆದ ಮೆರವಣಿಗೆಯಲ್ಲಿ ಕೇಸರಿ ಧ್ವಜಗಳು, ಮಹಿಳೆಯರ ನೃತ್ಯ, ಕಲಾತಂಡಗಳ ವೈಭವ ಮತ್ತು ಸಾಂಗ್ಲಿ ಸಂಸ್ಥಾನದ ಚಿಹ್ನೆ ಹೊತ್ತ ರಾಜರಥ ನಗರವನ್ನೇ ಕಂಗೊಳಿಸಿತು. ಸಾಂಗ್ಲಿ ಮಹಾರಾಜರ ವಂಶಸ್ಥರು ಹಾಗೂ ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ್ ಒಟ್ಟಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಕ್ಷಣವೇ “ರಾಜಕೀಯ–ಇತಿಹಾಸ” ಒಂದಾದ ಕ್ಷಣವಾಯಿತು.

“ಈ ಶಾಲೆಯೇ ನನ್ನ ಜೀವನದ ತಿರುವು”

1969ರ ಬ್ಯಾಚ್‌ನ ಹಳೆಯ ವಿದ್ಯಾರ್ಥಿ ಹಾಗೂ ಅಮೆರಿಕ ಸಂಸದ ಶ್ರೀನಿವಾಸ್ ಠಾಣೆದಾರ ಭಾವುಕರಾಗಿ ಮಾತನಾಡಿ,

ಚಿಂತಾಮಣರಾವ್ ಶಾಲೆಯೇ ನನಗೆ ಸಂಸ್ಕಾರ, ಶಿಸ್ತು ಮತ್ತು ಆತ್ಮವಿಶ್ವಾಸ ಕೊಟ್ಟಿತು. ನಾನು ಇಂದು ಸಂಸದನಾಗಿರುವುದಕ್ಕೆ ಕಾರಣ ಇದೇ ಶಾಲೆ”
ಎಂದು ಹೇಳಿದರು.
ಡೆಂಟಲ್ ಆಸ್ಪತ್ರೆಯಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಬಾಲ್ಯದಿಂದ ಹಿಡಿದು ಅಮೆರಿಕದಲ್ಲಿ ಎಂಎಸ್‌ಸಿ–ಪಿಎಚ್‌ಡಿ ಪಡೆದು ಸಂಸದನಾಗುವವರೆಗೆ ಸಾಗಿದ ಪಯಣಕ್ಕೆ ಈ ಶಾಲೆಯೇ ಅಡಿಪಾಯ ಎಂದು ಅವರು ನೆನಪಿಸಿದರು.

15 ಕೋಟಿ ರೂ. ಹೂಡಿಕೆ – ಶಾಲೆಗೆ ಹೊಸ ಮುಖ.

ಶಾಸಕ ಅಭಯ ಪಾಟೀಲ್ ಮಾತನಾಡಿ,
“ಈ ಶತಮಾನೋತ್ಸವಕ್ಕೆ ಮೂರು ವರ್ಷಗಳ ತಯಾರಿ ನಡೆದಿದೆ. ಶಾಲೆಗೆ 15 ಕೋಟಿ ರೂ. ಹೂಡಿಕೆ ಮಾಡಿದ್ದೇವೆ. 7 ಕೋಟಿ ರೂ. ವೆಚ್ಚದಲ್ಲಿ ಆಡಿಯಿಟೋರಿಯಂ, ಡಿಜಿಟಲ್ ಕ್ಲಾಸ್‌ರೂಮ್ ಮತ್ತು ಕಂಪ್ಯೂಟರ್ ಲ್ಯಾಬ್ ನಿರ್ಮಿಸಲಾಗಿದೆ. ಇನ್ನೂ 2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮುಂದುವರೆಯಲಿದೆ” ಎಂದು ತಿಳಿಸಿದರು.

ಉತ್ತರ ಕರ್ನಾಟಕದಲ್ಲೇ ಸರ್ಕಾರಿ ಶಾಲೆಗೆ ಅತಿ ದೊಡ್ಡ ಎಲ್‌ಇಡಿ ಪರದೆ ಇಲ್ಲಿದೆ ಎಂಬುದೂ ವಿಶೇಷ ಎಂದು ಹೇಳಿದರು.
ಸಾಂಗ್ಲಿ ಚಿಹ್ನೆಯ ರಥಕ್ಕೆ ಪುಷ್ಪವೃಷ್ಠಿ

ಸಾಂಗ್ಲಿ ಸಂಸ್ಥಾನದ ಚಿಹ್ನೆ ಹೊತ್ತ ರಥದಲ್ಲಿ ತರಲಾದ ಚಿಂತಾಮಣರಾವ್ ಪಟವರ್ಧನ ಮಹಾರಾಜರ ಮೂರ್ತಿಗೆ ಜನರು ಪುಷ್ಪವೃಷ್ಠಿ ಮಾಡಿ ಗೌರವ ಸಲ್ಲಿಸಿದರು. ರಾಜವಂಶಸ್ಥರ ಸಮ್ಮುಖದಲ್ಲಿ ಮೂರ್ತಿ ಅನಾವರಣಗೊಂಡಾಗ ಜನಸಾಗರ ಕರತಾಡನದಿಂದ ಮೈದುಂಬಿತು.

ಶಿಕ್ಷಕರೇ ಈ ಶಾಲೆಯ ನಿಜವಾದ ರಾಜರು
ಕಡಿಮೆ ಸಂಬಳದ ನಡುವೆಯೂ ವಿದ್ಯಾರ್ಥಿಗಳ ಮೇಲೆ ಅಪಾರ ಪ್ರೀತಿ, ಶಿಸ್ತು ಮತ್ತು ವಿಶ್ವಾಸ ಬಿತ್ತಿದ ಶಿಕ್ಷಕರೇ ಈ ಶಾಲೆಯ ಅಸಲಿ ಶಕ್ತಿ. ಅವರೇ ಸಮಾಜಕ್ಕೆ ಅಧಿಕಾರಿಗಳು, ವೈದ್ಯರು, ವಿಜ್ಞಾನಿಗಳು ಹಾಗೂ ವಿದೇಶ ಸಂಸದರನ್ನು ಕೊಟ್ಟಿದ್ದಾರೆ ಎಂಬ ಹೆಮ್ಮೆ ಈ ಶತಮಾನೋತ್ಸವದ ಹೃದಯವಾಗಿತ್ತು.

Leave a Reply

Your email address will not be published. Required fields are marked *

error: Content is protected !!