e belagavi Special Report
ಪೋಕ್ಸೊ ಪ್ರಕರಣದಲ್ಲಿ ಕರ್ತವ್ಯ ಲೋಪ ಸಾಬೀತಾದ ಪೊಲೀಸರಿಗೆ ಕಠಿಣ ಶಿಕ್ಷೆ ಬದಲು ಸಣ್ಣ ಎಚ್ಚರಿಕೆ – ಪೊಲೀಸ್ ಆಯುಕ್ತರ ನಡೆ ಭಾರೀ ವಿವಾದಕ್ಕೆ ಕಾರಣ
ಹೈಕೋರ್ಟ್‌ಗೆ ತಪ್ಪಿತಸ್ಥರೆಂದು ವರದಿ ಕೊಟ್ಟ ಮೇಲೂ, ಎಪಿಎಂಸಿ ಠಾಣೆ ಅಧಿಕಾರಿಗಳಿಗೆ ರೂಲ್–7 ಮಾತ್ರ – ಮಕ್ಕಳ ನ್ಯಾಯವೇ ಪ್ರಶ್ನಾರ್ಥಕ
ಹೈಕೋರ್ಟ್‌ಗೆ ತಪ್ಪಿತಸ್ಥರೆಂದು ವರದಿ ಸಲ್ಲಿಸಿದ ನಂತರವೂ ಸಿಪಿಐ–ಪಿಎಸ್ಐಗಳ ಮೇಲೆ ಕಠಿಣ ಕ್ರಮ ಇಲ್ಲ –
ಬೆಳಗಾವಿ |
ನಗರದ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಅತ್ಯಂತ ಗಂಭೀರವಾದ ಪೋಕ್ಸೊ ಪ್ರಕರಣ ಈಗ ಪೊಲೀಸ್ ಇಲಾಖೆಯೊಳಗೇ ಭಾರೀ ಚರ್ಚೆಗೆ ಕಾರಣವಾಗಿದೆ.
ಪೊಲೀಸರು ತಪ್ಪು ಮಾಡಿದ್ದಾರೆ ಎಂದು ಸ್ವತಃ ಹೈಕೋರ್ಟ್‌ಗೆ ವರದಿ ಸಲ್ಲಿಸಿದ ನಂತರವೂ, ಅದೇ ಅಧಿಕಾರಿಗಳ ವಿರುದ್ಧ ಕೇವಲ ರೂಲ್–7 (ಸಣ್ಣ ಎಚ್ಚರಿಕೆ) ನೀಡಿರುವ ಪೊಲೀಸ್ ಆಯುಕ್ತರ ಕ್ರಮ ಇದೀಗ ನ್ಯಾಯಾಂಗ ಮತ್ತು ಪೊಲೀಸ್ ವಲಯದಲ್ಲಿ ವಿವಾದದ ಕಿಡಿ ಹೊತ್ತಿಸಿದೆ.
ಈ ಪ್ರಕರಣ ಬೆಳಕಿಗೆ ಬಂದಿದ್ದು, ‘e belagavi ಯಲ್ಲಿ ಪ್ರಕಟವಾದ ವರದಿಯ ಆಧಾರವಾಗಿ. ಈ ವರದಿಯನ್ನು ಗಮನಿಸಿದ ಹೈಕೋರ್ಟ್ ಅಧೀನದ ಕಿಶೋರ ನ್ಯಾಯ ಮಂಡಳಿ (JJB) ಹಾಗೂ ಮಕ್ಕಳ ಹಕ್ಕು ರಕ್ಷಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು, ಪೊಲೀಸ್ ಆಯುಕ್ತರಿಗೆ ತನಿಖೆಗೆ ಆದೇಶ ನೀಡಿತ್ತು.
ಹೈಕೋರ್ಟ್ ಆದೇಶದಂತೆ, ಪೊಲೀಸ್ ಆಯುಕ್ತರು ಈ ತನಿಖೆಯನ್ನು ಎಸಿಪಿ ರಘು ಅವರಿಗೆ ವಹಿಸಿದ್ದರು.
ಅವರ ತನಿಖಾ ವರದಿಯಲ್ಲಿ, ಎಪಿಎಂಸಿ ಠಾಣೆಯ ಸಿಪಿಐ ಉಸ್ಮಾನ ಅವಟಿ, ಪಿಎಸ್ಐ ಮುತ್ತತ್ತಿ, ಮತ್ತು ಮುಖ್ಯಪೇದೆ ಇವರು ಪೋಕ್ಸೊ ಪ್ರಕರಣದ ನಿರ್ವಹಣೆಯಲ್ಲಿ ಕರ್ತವ್ಯ ಲೋಪ ಮಾಡಿದ್ದಾರೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಈ ವರದಿಯನ್ನು ಪೊಲೀಸ್ ಆಯುಕ್ತರು ಅಧಿಕೃತವಾಗಿ ಹೈಕೋರ್ಟ್‌ನ ಕಿಶೋರ ನ್ಯಾಯ ಮಂಡಳಿಗೆ ಸಲ್ಲಿಸಿದ್ದರು.
ಆದರೆ, ಇಂತಹ ಗಂಭೀರ ಆರೋಪಗಳ ನಂತರ, ಈ ಮೂವರು ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕಾದ ಪೊಲೀಸ್ ಆಯುಕ್ತರು, ಕೇವಲ ರೂಲ್–7 ನೀಡುವುದರ ಮೂಲಕ ಇತಿಶ್ರೀ ಹಾಡಿರುವುದು
ತಪ್ಪಿತಸ್ಥರನ್ನು ರಕ್ಷಿಸುವ ಪ್ರಯತ್ನವೇ?” ಎನ್ನುವ ಅನುಮಾನವನ್ನು ಹುಟ್ಟು ಹಾಕಿದೆ.

ಮಕ್ಕಳ ನ್ಯಾಯವೇ ಪ್ರಶ್ನಾರ್ಥಕ?
ಪೋಕ್ಸೊ ಪ್ರಕರಣಗಳಲ್ಲಿ ಪೊಲೀಸರು ಅತ್ಯಂತ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹಲವು ಬಾರಿ ಸ್ಪಷ್ಟವಾಗಿ ಹೇಳಿದೆ.
ಮಗು ಪೀಡಿತನಾಗಿರುವ ಪ್ರಕರಣದಲ್ಲಿ,
“ಒಂದು ಸಣ್ಣ ನಿರ್ಲಕ್ಷ್ಯವೂ ಗಂಭೀರ ಅಪರಾಧಕ್ಕೆ ಸಮಾನ”
ಎಂದು ನ್ಯಾಯಾಲಯವೇ ಹೇಳಿರುವಾಗ, ಇಲ್ಲಿ ನಡೆದಿರುವ ತನಿಖಾ ಲೋಪವನ್ನು ಕೇವಲ ಸಣ್ಣ ತಪ್ಪು ಎಂದು ಪರಿಗಣಿಸುವುದು ಹೇಗೆ?
ಎಸಿಪಿ ರಘು ಅವರ ತನಿಖಾ ವರದಿ ಹಾಗೂ ಹೈಕೋರ್ಟ್‌ಗೆ ಸಲ್ಲಿಸಿದ ದಾಖಲೆಗಳಲ್ಲೇ, ಈ ಮೂವರು ಅಧಿಕಾರಿಗಳು ಕಾನೂನುಬಾಹಿರವಾಗಿ ವರ್ತಿಸಿದ್ದಾರೆ ಎಂದು ಹೇಳಿರುವಾಗ, ಅವರಿಗೆ ಕೇವಲ ರೂಲ್–7 ನೀಡಿರುವುದು ಮಕ್ಕಳ ಹಕ್ಕುಗಳ ಸುರಕ್ಷತೆ ಮೇಲೆಯೇ ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಹಾಕಿದೆ.
ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೇ ಹೇಳುವಂತೆ:
“ರೂಲ್–7 ಎಂದರೆ ಸಣ್ಣ ತಪ್ಪಿಗೆ ಕೊಡುವ ಎಚ್ಚರಿಕೆ ಮಾತ್ರ. ಆದರೆ ಪೋಕ್ಸೊ ಪ್ರಕರಣದಲ್ಲಿ ತನಿಖಾ ಲೋಪ ಎಂದರೆ ಅದು ಕಾನೂನು ಉಲ್ಲಂಘನೆ. ಅದಕ್ಕೆ ತಕ್ಕಂತೆ ಕಠಿಣ ಕ್ರಮ ಅನಿವಾರ್ಯ.”
ನ್ಯಾಯಾಲಯ ಮತ್ತೆ ಕೇಳಿದರೆ?
ಕಾನೂನು ತಜ್ಞರ ಅಭಿಪ್ರಾಯದ ಪ್ರಕಾರ, : ಒಂದೆಡೆ ಹೈಕೋರ್ಟ್‌ಗೆ ‘ತಪ್ಪು ನಡೆದಿದೆ’ ಎಂದು ವರದಿ.
ಮತ್ತೊಂದೆಡೆ ಅದೇ ಅಧಿಕಾರಿಗಳಿಗೆ ಕೇವಲ ರೂಲ್–7.
ಈ ಎರಡು ಪರಸ್ಪರ ವಿರುದ್ಧವಾದ ದಾಖಲೆಗಳನ್ನು ನ್ಯಾಯಾಲಯ ಗಂಭೀರವಾಗಿ ಪರಿಗಣಿಸುವುದು ಖಚಿತ. ಎನ್ನಲಾಗುತ್ತಿದೆ
ಈ ಹಿನ್ನೆಲೆಯಲ್ಲೇ, ಪೊಲೀಸ್ ಆಯುಕ್ತರ ಈ ನಡೆ – ನ್ಯಾಯಕ್ಕೆ ಅನ್ಯಾಯವೋ, ಅಥವಾ ತಪ್ಪಿತಸ್ಥರ ರಕ್ಷಣೆಯೋ?”ಎನ್ನುವ ಪ್ರಶ್ನೆ ಬೆಳಗಾವಿಯಿಂದ ಬೆಂಗಳೂರಿನವರೆಗೂ ಪ್ರತಿಧ್ವನಿಸುತ್ತಿದೆ.

