ಮೃನಾಲ್ ಹೆಬ್ಬಾಳ್ಕರ್ ಚಾಲಕನ ಮೇಲಿನ ಚೂರಿ ಇರಿತದ ಹಿಂದೆ ಅಡಗಿರುವ ಆಳದ ಆಟ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃನಾಲ್ ಚಾಲಕನ ಮೇಲೆ ನಡು ರಸ್ತೆಯಲ್ಲಿ ಹಲ್ಲೆ – ಕಾಂಟ್ರಾಕ್ಟ್ ಅಟ್ಯಾಕ್ ಶಂಕೆ.
ಈ ಚೂರಿ ಕೇವಲ ದೇಹಕ್ಕೆ ಅಲ್ಲ… ಸಂದೇಶ ಕೊಟ್ಟಿದ್ದು ಯಾರಿಗೆ?
ಸಚಿವೆ ಪುತ್ರನ ಚಾಲಕನ ಮೇಲೆ ಜನನಿಬಿಡ ರಸ್ತೆಯಲ್ಲಿ ಚೂರಿ ಇರಿತ – ಹಲವು ಆಯಾಮಗಳಲ್ಲಿ ತನಿಖೆ
ಇ ಬೆಳಗಾವಿ ವಿಶೇಷ
ಬೆಳಗಾವಿ:
ಕ್ಲಬ್ ರಸ್ತೆಯ ಜನನಿಬಿಡ ಪ್ರದೇಶದಲ್ಲಿ ನಡೆದ ಸಚಿವೆ ಹೆಬ್ಬಾಳಕರ ಪುತ್ರ ಮೃನಾಲ್ ನ ಕಾರು ಚಾಲಕ ಬಸವಂತ ಕಡೋಲ್ಕರ್ ಮೇಲಿನ ಚೂರಿ ಇರಿತವು ಕೇವಲ ಒಂದು ಸಣ್ಣ ಜಗಳವಲ್ಲ.!
ಘಟನೆಯ ಶೈಲಿ, ಸಮಯ, ಗುರಿ ಮತ್ತು ಪರಾರಿಯ ಕ್ರಮ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದು `ಕಾಂಟ್ರಾಕ್ಟ್ ಅಟ್ಯಾಕ್’ ಎನ್ನುವ ಸಂಶಯವನ್ನು ದೃಢಪಡಿಸುತ್ತಿವೆ.
ಬಸವಂತ ಕಾಡೋಲ್ಕರ್ ಮೇಲೆ ದಾಳಿ ನಡೆದ ವಿಧಾನವೇ ಭಯಾನಕ ಕಥೆಯನ್ನು ಬಿಚ್ಚಿಡುತ್ತದೆ. ಚಾಲಕನನ್ನು ನೇರವಾಗಿ ತಡೆದು, ಮೂರು ಕಡೆ ಚೂರಿಯಿಂದ ಇರಿದು, ಕ್ಷಣಾರ್ಧದಲ್ಲಿ ಪರಾರಿಯಾಗಿರುವುದನ್ನು ಗಮನಿಸಿದರೆ ಇದೊಂದು ಪೂರ್ವ ನಿಯೋಜಿತ ಎನ್ನುವ ಅನುಮಾನ ಪೊಲೀಸರನ್ನು ಕಾಡುತ್ತಿದೆ.

ಈ ಘಟನೆಯು ಹಾದಿಯಲ್ಲಿ ರಕ್ತದ ಗುರುತು ಪೊಲೀಸರ ತನಿಖೆ ಇದೀಗ ಬಸವಂತನ ಹಣಕಾಸು ವ್ಯವಹಾರಗಳ ಕಡೆ ತಿರುಗಿದೆ…
ಬಸವಂತನಿಗೆ ಕೆಲವರೊಂದಿಗೆ ವೈಯಕ್ತಿಕ ವೈಷಮ್ಯ ಇತ್ತು ಎನ್ನುವ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಆದರೆ ಇದು ಕೇವಲ ವೈಯಕ್ತಿಕ ದ್ವೇಷವಲ್ಲ ಎನ್ನುವುದನ್ನು, ದಾಳಿಯ ಪ್ರೊಫೆಷನಲ್ ಶೈಲಿಯೇ ಹೇಳುತ್ತದೆ.

ಗಣಿಗಾರಿಕೆಯ ನೆರಳು.. ಮೌನದ ಹಿಂದಿನ ಭಯ
ಈ ದಾಳಿಗೆ ಅಕ್ರಮ ಗಣಿಗಾರಿಕೆಯ ನೆರಳು ಕೂಡ ತಾಗಿಕೊಂಡಿದೆ.
ಮಹಾರಾಷ್ಟ್ರ ಬೆಳಗಾವಿ ಗಡಿಭಾಗದಲ್ಲಿ ನಡೆಯುತ್ತಿರುವ ಲ್ಯಾಟರೈಟ್ ಮತ್ತು ಕಲ್ಲು ಗಣಿಗಾರಿಕೆ, ಅದರಲ್ಲಿ ತೊಡಗಿರುವ ಯುವಕರು, ಅದರ ಹಿಂದೆ ನಿಂತಿರುವ ರಾಜಕೀಯ, ಆಥರ್ಿಕ ಜಾಲ ..ಇವೆಲ್ಲವೂ ಈಗ ಪೊಲೀಸ್ ಫೈಲ್ನಲ್ಲಿ ಒಂದಾಗುತ್ತಿವೆ.

ಇತ್ತೀಚೆಗೆ ಕೆಲವು ಗಣಿಗಾರಿಕೆ ಕೇಂದ್ರಗಳಿಗೆ ಹೊಡೆತ ಬಿದ್ದಿದ್ದು, ಆ ಕಾರಣದಿಂದಲೇ ಸಂದೇಶ ಕೊಡಲು ಈ ದಾಳಿ ನಡೆದಿರಬಹುದೆಂಬ ಅನುಮಾನ ಬಲವಾಗುತ್ತಿದೆ.
ಗುರಿ ಕೇವಲ ಚಾಲಕನಲ್ಲ ವಲಯವೇ ಗುರಿ
ಬಸವಂತ ಕಾಡೋಲ್ಕರ್ ಮೃನಾಲ್ ಹೆಬ್ಬಾಳ್ಕರ್ ಅವರ ಅತ್ಯಂತ ಸಮೀಪದ ವ್ಯಕ್ತಿ. ಅವನ ಮೇಲೆ ದಾಳಿ ಅಂದರೆ, ಅದು ಒಬ್ಬ ವ್ಯಕ್ತಿಗೆ ಅಲ್ಲ. ಒಂದು ಶಕ್ತಿಕೇಂದ್ರಕ್ಕೆ. ಇದು ಬೆದರಿಕೆ. ಇದು ಎಚ್ಚರಿಕೆ.
ಎನ್ನುವ ಸಂದೇಶ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಪೊಲೀಸರು ಈಗ ಬಸವಂತನ ಕಾಲ್ ಡೀಟೇಲ್, ವಾಟ್ಸಾಪ್ ಚಾಟ್, ಹಣಕಾಸು ಅಪ್ಲಿಕೇಶನ್ ಬಳಕೆ ಎಲ್ಲವನ್ನೂ ಶೋಧಿಸುತ್ತಿದ್ದಾರೆ.
ಈ ದಾಳಿಯನ್ನು ಮಾಡಿದ್ದು ಚೂರಿ ಹಿಡಿದವರು ಅಲ್ಲ. ಅವರು ಕೇವಲ ಕೈಗಳು. ನಿಜವಾದ ಮುಖಗಳು ಇನ್ನೂ ನೆರಳಿನಲ್ಲಿವೆ.
ಹಣದ ಜಾಲವೇ? ಗಣಿಗಾರಿಕೆಯ ಗ್ಯಾಂಗ್ವೇ? ಅಥವಾ ರಾಜಕೀಯ ನೆರಳೇ?
ಬೆಳಗಾವಿ ಈಗ ಉತ್ತರಕ್ಕಾಗಿ ಕಾಯುತ್ತಿದೆ.

