ಅಂಗನವಾಡಿ ವರ್ಗಾವಣೆಯಲ್ಲಿ ಸರ್ಕಾರವೇ ಎರಡು ಭಾಗ
ಮಹಿಳಾ ಮತ್ತು ಮಕ್ಕಳ ಇಲಾಖೆಯಲ್ಲೇ ‘ಡ್ಯುಯಲ್ ಪವರ್’.
ಬೆಂಗಳೂರು:
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನಡುವಿನ ಅಧಿಕಾರ ಸಂಘರ್ಷ ಇದೀಗ ರಾಜಕೀಯ ವೇದಿಕೆಗಳನ್ನು ಮೀರಿ ಸರ್ಕಾರದ ಆಡಳಿತ ಯಂತ್ರದೊಳಗೆ ನುಗ್ಗಿದೆ.
ಮುಖ್ಯಮಂತ್ರಿ ನೀಡಿದ ಲಿಖಿತ ಆದೇಶವನ್ನೇ ಇಲಾಖೆಯೊಳಗೆ ಡೋಂಟಕೇರ್ ಮಾಡುವ ಹಂತಕ್ಕೆ ಈ ಸಂಘರ್ಷ ತಲುಪಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಮೇಲ್ವಿಚಾರಕಿಯ ವರ್ಗಾವಣೆ ಪ್ರಕರಣ ಇದಕ್ಕೆ ಅತ್ಯಂತ ಸ್ಪಷ್ಟ ಸಾಕ್ಷಿಯಾಗಿದೆ.

ಕೈ ಶಾಸಕ ಶಿವಣ್ಣ ಅವರ ಪತ್ರದ ಆಧಾರದಲ್ಲಿ ಸರಿತಾ ನಾಯ್ಕ, ಅಂಗನವಾಡಿ ಮೇಲ್ವಿಚಾರಕಿ (ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಕನಕಪುರ ತಾಲ್ಲೂಕು, ರಾಮನಗರ ಜಿಲ್ಲೆ) ಅವರನ್ನು ಆನೇಕಲ್ ತಾಲ್ಲೂಕು, ಬೆಂಗಳೂರು ನಗರ ಜಿಲ್ಲೆಗೆ ವರ್ಗಾವಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ 14.10.2025ರಂದು ಕಡತದಲ್ಲಿ ನೇರ ಸೂಚನೆ ನೀಡಿದ್ದರು.

ಈ ಸೂಚನೆಯ ಮೇರೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯೇ (ಕಡತ ಸಂಖ್ಯೆ WCD/TRAN/35/2025, E-No 1972911) ಅಧಿಕೃತ ವರ್ಗಾವಣೆ ಆದೇಶ ಹೊರಡಿಸಿದ್ದಾರೆ.
ಆದರೆ ಮುಖ್ಯಮಂತ್ರಿ ಸಹಿ ಹಾಕಿದ ಈ ಲಿಖಿತ ಆದೇಶವೇ, ಅದೇ ಇಲಾಖೆಯೊಳಗೆ ಶೂನ್ಯವಾಗಿಬಿಟ್ಟಿತು.

ಆದೇಶ ಇದೆ… ಆದರೆ ಬಿಡುಗಡೆ ಇಲ್ಲ!
06.12.2025ರಂದು ವರ್ಗಾವಣೆ ಆದೇಶದೊಂದಿಗೆ ಕರ್ತವ್ಯದಿಂದ ಬಿಡುಗಡೆ ಪಡೆಯಲು ಸರಿತಾ ನಾಯ್ಕ ಅವರು ಸಿಡಿಪಿಓ ನಾರಾಯಣ ಅವರ ಕಚೇರಿಗೆ ಹೋದಾಗ ಎದುರಾದ ಉತ್ತರವೇ ಆಡಳಿತದ ಒಳಚರಂಡಿಯನ್ನು ಬಯಲು ಮಾಡಿತು.
“ಡಿಸಿಎಂ ಮೌಖಿಕ ಸೂಚನೆ ಇದೆ”
ಈ ಒಂದೇ ಕಾರಣ ನೀಡಿ, ಮುಖ್ಯಮಂತ್ರಿ ಆದೇಶವನ್ನು ಬದಿಗೊತ್ತಿ ಅಧಿಕಾರಿಯ ಬಿಡುಗಡೆಗೆ ನಿರಾಕರಣೆ ಮಾಡಲಾಯಿತು.
ಇಲ್ಲಿಯೇ ಸರ್ಕಾರದೊಳಗಿನ ಎರಡು ಶಕ್ತಿ ಕೇಂದ್ರಗಳ ಅಸ್ತಿತ್ವ ಸ್ಪಷ್ಟವಾಯಿತು —
ಒಂದು ಕಡೆ ಮುಖ್ಯಮಂತ್ರಿ ಕಚೇರಿ, ಇನ್ನೊಂದು ಕಡೆ ಉಪಮುಖ್ಯಮಂತ್ರಿಯ ಅಘೋಷಿತ ಅಧಿಕಾರ.
24 ದಿನಗಳ ಸರ್ಕಾರಿ ಸರ್ಕಸ್
ಒಂದು ಸಿಎಂ ಆದೇಶ ಜಾರಿಗೆ ಬರಬೇಕಾದರೆ ಒಬ್ಬ ಮಹಿಳಾ ಅಧಿಕಾರಿ 24 ದಿನಗಳ ಕಾಲ ಕಚೇರಿಗಳ ಮೆಟ್ಟಿಲೇರಬೇಕಾಯಿತು.
ಪ್ರತಿ ದಿನ ಒಂದೊಂದು ನೆಪ, ಒಂದೊಂದು ವಿಳಂಬ.
ಕೊನೆಗೆ, ಮುಖ್ಯಮಂತ್ರಿ ಆದೇಶವೇ ಅಸ್ತಿತ್ವ ಕಳೆದುಕೊಂಡಿತು. ಅಂತಿಮವಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ನಿರ್ದೇಶಕರು ಹೊರಡಿಸಿದ ಆದೇಶ ಮತ್ತಷ್ಟು ಬೆಚ್ಚಿಬೀಳಿಸುವಂತಿತ್ತು:

ಡಿಸಿಎಂ ಮೌಖಿಕ ಸೂಚನೆ ಮೇರೆಗೆ ವರ್ಗಾವಣೆ ರದ್ದು.”
ಇದರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಲಿಖಿತ ಆದೇಶ ಕಾಗದದ ತುಂಡಾಗಿ ಉಳಿದು,
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಮಾತೇ ಇಲಾಖೆಯ ಅಂತಿಮ ಕಾನೂನಾಗಿ ಬದಲಾಗಿದೆ.
ಸಿಎಂ ಆದೇಶಕ್ಕೂ ಕವಡೆಕಾಸಿನ ಬೆಲೆ ಇಲ್ಲವೇ?
ಇದು ಕೇವಲ ಒಂದು ಅಧಿಕಾರಿಯ ವರ್ಗಾವಣೆ ಅಲ್ಲ.
ಇದು ಕರ್ನಾಟಕ ಸರ್ಕಾರದೊಳಗಿನ ಶಕ್ತಿ ಸಮತೋಲನದ ನಗ್ನ ಚಿತ್ರಣ.
ಒಬ್ಬ ಮುಖ್ಯಮಂತ್ರಿ ನೀಡಿದ ಅಧಿಕೃತ ಆದೇಶವನ್ನು ಉಪಮುಖ್ಯಮಂತ್ರಿಯ ಮೌಖಿಕ ಸೂಚನೆ ಮಣ್ಣುಮಾಡಬಲ್ಲದಾದರೆ, ಆಡಳಿತ ಯಂತ್ರದ ವಿಶ್ವಾಸಾರ್ಹತೆ ಯಾವ ಹಂತಕ್ಕೆ ಕುಸಿದಿದೆ?
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಈ ಪ್ರಕರಣದಲ್ಲಿ ಕಳುಹಿಸಿರುವ ಸಂದೇಶ ಸ್ಪಷ್ಟ:
“ಇಲ್ಲಿ ಸಿಎಂ ಆದೇಶಕ್ಕೂ ಕವಡೆ ಕಾಸಿನ ಕಿಮ್ಮತ್ತು ಇಲ್ಲ.”

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ಮೌನ ಏಕೆ?
ಇಲ್ಲಿ ಅತಿದೊಡ್ಡ ಮತ್ತು ಅತಿ ಅಪಾಯಕಾರಿ ಪ್ರಶ್ನೆ ಮೂಡುತ್ತದೆ:
ಸಿಎಂ ಆದೇಶಕ್ಕೆ ಮಣ್ಣು ಹಾಕಿರುವ ಈ ಬೆಳವಣಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರ ಗಮನಕ್ಕೆ ಬಂದಿಲ್ಲವೇ?
ಅಥವಾ ಗೊತ್ತಿದ್ದರೂ ಮೌನವಾಗಿ ಕುಳಿತಿರುವರೇ?
ಒಬ್ಬ ಮುಖ್ಯಮಂತ್ರಿ ನೀಡಿದ ಲಿಖಿತ ಆದೇಶವನ್ನು ಮೌಖಿಕ ಸೂಚನೆಯೊಂದರಿಂದ ರದ್ದು ಮಾಡುವ ಧೈರ್ಯ ಅಧಿಕಾರಿಗಳಿಗೆ ಬಂದಿರುವುದೇ,
ಸರ್ಕಾರದೊಳಗಿನ ಅಧಿಕಾರ ಯುದ್ಧ ಯಾವ ಹಂತಕ್ಕೆ ತಲುಪಿದೆ ಎಂಬುದಕ್ಕೆ ಜೀವಂತ ಸಾಕ್ಷಿ.
ಇದು ಸಿಎಂ–ಡಿಸಿಎಂ ನಡುವಿನ ರಾಜಕೀಯ ಪೈಪೋಟಿ ಮಾತ್ರವಲ್ಲ.
ಇದು ಕರ್ನಾಟಕ ಸರ್ಕಾರದ ಆಡಳಿತ ವ್ಯವಸ್ಥೆಯೊಳಗೆ ನಡೆಯುತ್ತಿರುವ ಅಧಿಕಾರ ಯುದ್ಧದ ದಾಖಲೆ.

