ಸುತಗಟ್ಟಿಯಲ್ಲಿ ಸರ್ಕಾರಿ ದಾಖಲೆಗಳ ಮಹಾ ದುರಂತ
ಐದು ತಿಂಗಳ ಅಲೆದಾಟದ ನಡುವೆಯೂ ರದ್ದಾಗದ ಮರಣ ಪ್ರಮಾಣಪತ್ರ; ರೈತ ಈರಪ್ಪ ಅಬ್ಬಾಯಿಯ ಬದುಕು ದಾಖಲೆಗಳಲ್ಲೇ ಸತ್ತಿತು

ಬೆಳಗಾವಿ:
ಸರ್ಕಾರಿ ವ್ಯವಸ್ಥೆಯ ಭಾರೀ ಯಡವಟ್ಟಿಗೆ ಬೆಚ್ಚಿಬೀಳಿಸುವ ಉದಾಹರಣೆಯೊಂದು ಸವದತ್ತಿ ತಾಲ್ಲೂಕಿನ ಸುತಗಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಜೀವಂತ ವ್ಯಕ್ತಿಯೊಬ್ಬರನ್ನು ಸರ್ಕಾರಿ ದಾಖಲೆಗಳಲ್ಲಿ ಸತ್ತವನಾಗಿಸಿ ಮರಣ ಪ್ರಮಾಣಪತ್ರ ನೀಡಿರುವ ಘಟನೆ ಇದೀಗ ಸಾರ್ವಜನಿಕರಲ್ಲಿ ಆಕ್ರೋಶ ಉಂಟುಮಾಡಿದೆ.
ಗ್ರಾಮದ ರೈತ ಈರಪ್ಪ ನಾಗಪ್ಪ ಅಬ್ಬಾಯಿ ತುಂತುರು ಹನಿ ನೀರಾವರಿ ಯೋಜನೆಗೆ ಅರ್ಜಿ ಸಲ್ಲಿಸಲು ಮುರಗೋಡ ಕೃಷಿ ಇಲಾಖೆಗೆ ತೆರಳಿದಾಗ ಈ ಅಘಾತಕಾರಿ ಸತ್ಯ ಗೊತ್ತಾಗಿದೆ. ದಾಖಲೆಗಳ ಪ್ರಕಾರ ಅವರು 08–07–2021 ರಂದು ಮೃತರಾಗಿದ್ದಾರೆ ಎಂದು ಮರಣ ಪ್ರಮಾಣಪತ್ರ ನೋಂದಾಯಿಸಲಾಗಿದೆ.

ಆದರೆ ಈರಪ್ಪ ಅಬ್ಬಾಯಿ ಇಂದಿಗೂ ಹೊಲದಲ್ಲಿ ದುಡಿಯುತ್ತಾ ಬದುಕುತ್ತಿದ್ದಾರೆ!
ಈ ಯಡವಟ್ಟು ಸುತಗಟ್ಟಿ ಗ್ರಾಮಲೆಕ್ಕಾಧಿಕಾರಿ ನೀಲಾ ಮೂರಗೋಡ (ಬಾನಿ) ಅವರಿಂದ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.
ಐದು ತಿಂಗಳು ಕಚೇರಿಗಳ ಸುತ್ತಾಟ – ಆದರೆ ‘ಮರಣ’ ಇನ್ನೂ ರದ್ದು ಆಗಿಲ್ಲ
ತಾನು ಬದುಕಿರುವುದನ್ನು ಸಾಬೀತುಪಡಿಸಲು ಈರಪ್ಪ ಅಬ್ಬಾಯಿ ಕಳೆದ ಐದು ತಿಂಗಳಿಂದ ಮುರಗೋಡ ನಾಡ ಕಚೇರಿ ಮತ್ತು ಸವದತ್ತಿ ತಹಶೀಲ್ದಾರ್ ಕಚೇರಿಗೆ ಅಲೆದಾಡುತ್ತಿದ್ದಾರೆ. ಆದರೂ ಮರಣ ಪ್ರಮಾಣಪತ್ರವನ್ನು ರದ್ದುಪಡಿಸಲು ಅಧಿಕಾರಿಗಳು ಕ್ರಮಕೈಗೊಂಡಿಲ್ಲ.
“ನಾನು ಜೀವಂತನಾಗಿದ್ದರೂ ಸರ್ಕಾರಿ ದಾಖಲೆಗಳಲ್ಲಿ ಸತ್ತವನಾಗಿದ್ದೇನೆ. ಇದರಿಂದ ನನಗೆ ಯಾವುದೇ ಸರ್ಕಾರಿ ಸೌಲಭ್ಯ ಸಿಗುತ್ತಿಲ್ಲ” ಎಂದು ಈರಪ್ಪ ಅಬ್ಬಾಯಿ ಅಳಲು ತೋಡಿಕೊಂಡಿದ್ದಾರೆ.

ಯಡವಟ್ಟನ್ನು ಮುಚ್ಚುವ ಪ್ರಯತ್ನ?
2021ರಲ್ಲಿ ತಪ್ಪಾಗಿ ಮರಣ ಪ್ರಮಾಣಪತ್ರ ದಾಖಲಿಸಿದ ಬಳಿಕ ಅದನ್ನು ಸರಿಪಡಿಸುವ ಬದಲು, ಅಧಿಕಾರಿಗಳು “ದಾಖಲೆ ತಿದ್ದುಪಡಿ ಮಾಡುತ್ತೇವೆ” ಎಂದು ಹೇಳಿ ವಿಷಯವನ್ನು ಮುಂದೂಡುತ್ತಾ ಬಂದಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ. ಪತ್ರಕರ್ತರಿಗೆ ಈ ವಿಷಯ ತಿಳಿದ ನಂತರ ಮಾತ್ರ ಅಧಿಕಾರಿಗಳು ಚಲನೆಗೆ ಬಂದಿದ್ದಾರೆ ಎಂಬ ಮಾತುಗಳು ಗ್ರಾಮದಲ್ಲಿ ಹರಿದಾಡುತ್ತಿವೆ.
ಅಧಿಕಾರಿಗಳ ಪ್ರತಿಕ್ರಿಯಿಸಿದ
ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನವರ ಅವರು,
“ಬದುಕಿರುವ ವ್ಯಕ್ತಿಗೆ ಮರಣ ಪ್ರಮಾಣಪತ್ರ ನೋಂದಾಯಿಸಿರುವ ಬಗ್ಗೆ ದೂರು ಬಂದಿದೆ. ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಈ ಸಂಬಂಧ ಸುತಗಟ್ಟಿ ಗ್ರಾಮಲೇಕ್ಕಾಧಿಕಾರಿಗೆ ನೋಟಿಸ್ ನೀಡಲಾಗಿದೆ ಎಂದರು.
ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರವೀಣ ಜೈನ್ ಅವರು,
“ಈ ವಿಷಯದ ಬಗ್ಗೆ ಮಾಹಿತಿ ಪಡೆದು ತಕ್ಷಣ ಕ್ರಮ ಜರುಗಿಸಲಾಗುವುದು. ಯಡವಟ್ಟು ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಸಾರ್ವಜನಿಕರ ಆಕ್ರೋಶ
ಜೀವಂತ ವ್ಯಕ್ತಿಯನ್ನು ಸರ್ಕಾರಿ ದಾಖಲೆಗಳಲ್ಲಿ ‘ಸತ್ತವನು’ ಎಂದು ಮುದ್ರಿಸುವಷ್ಟು ಭಾರೀ ತಪ್ಪು ನಡೆದಿರುವುದು ಆಡಳಿತ ವ್ಯವಸ್ಥೆಯ ಮೇಲಿನ ನಂಬಿಕೆಗೆ ಧಕ್ಕೆ ತಂದಿದೆ.
ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

