Headlines

ಏಸೀಲಿ ಸಭೆ ಬೇಡ – ಹೊಲದಲ್ಲೇ ತೀರ್ಮಾನ!”

ಹಿರೇಬಾಗೇವಾಡಿ ರೈತರ ಐತಿಹಾಸಿಕ ಘೋಷಣೆ: RCU ರಸ್ತೆ ವಿರುದ್ಧ ಕಠಿಣ ನಿಲುವು

ಬೆಳಗಾವಿ:
ಹಿರೇಬಾಗೇವಾಡಿ ರೈತರು ಮತ್ತೊಮ್ಮೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ (RCU) ವಿರುದ್ಧ ಸಿಡಿದೆದ್ದಿದ್ದಾರೆ. ಗುಡ್ಡದ ಮಲ್ಲಪ್ಪನ ಜಾಗೆಯ ಮೂಲಕ ವಿವಿಗೆ ಹೋಗುವ ರಸ್ತೆ ನಿರ್ಮಾಣದಲ್ಲಿ ರೈತ ವಿರೋಧಿ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ, ರೈತರು ಅಭೂತಪೂರ್ವ ತೀರ್ಮಾನ ಕೈಗೊಂಡಿದ್ದಾರೆ .

ನಮ್ಮ ಭೂಮಿಯ ವಿಚಾರ ಏಸಿ ಕೊಠಡಿಯಲ್ಲಿ ಅಲ್ಲ, ನಮ್ಮ ಹೊಲದ ಮಧ್ಯೆ ತೀರ್ಮಾನವಾಗಬೇಕು.
ರೈತರ ಯಾವುದೇ ಪೂರ್ವಾನುಮತಿ ಇಲ್ಲದೇ ಇದ್ದ ರಸ್ತೆಯನ್ನು ಬಿಟ್ಟು, ಫಲವತ್ತಾದ ಜಮೀನಿನೊಳಗೆ ಹೊಸ ರಸ್ತೆ ಗುರುತಿಸಿರುವುದು ಈ ವಿವಾದಕ್ಕೆ ಕಾರಣವಾಗಿದೆ. ರಸ್ತೆ ಕಾಮಗಾರಿ ವೇಳೆ ಏಳುವ ದಟ್ಟ ಧೂಳಿನಿಂದ ಕಬ್ಬು, ಜೋಳ ಸೇರಿ ಬೆಳೆಗಳು ಸತ್ವ ಕಳೆದು ಕೊಳ್ಳುತ್ತಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಹಿನ್ನೆಲೆಯಲ್ಲಿ, ವಿವಿಗೆ ನೀರು ಪೂರೈಕೆ ಆರಂಭಿಸಲು ನಡೆದ ಕಾಮಗಾರಿಯನ್ನು ರೈತರು ಸೋಮವಾರದವರೆಗೆ ಬಂದ್ ಮಾಡಿಸಿದ್ದಾರೆ.
ಸೋಮವಾರ RCU ಕುಲಪತಿಗಳು ರೈತರೊಂದಿಗೆ ಸಭೆ ನಡೆಸುವುದಾಗಿ ಹೇಳಿದ್ದರೂ, ಆ ಸಭೆ ಏಸಿ ಕೊಠಡಿಯಲ್ಲಿ ಅಲ್ಲ, ಸಮಸ್ಯೆ ಇರುವ ರಸ್ತೆ ಮಧ್ಯದಲ್ಲೇ ನಡೆಯಬೇಕು ಎಂಬುದು ರೈತರ ಸ್ಪಷ್ಟ ನಿಲುವು.

“ಅಲ್ಲಿ ಸಮಸ್ಯೆಗೆ ಪರಿಹಾರ ಸಿಕ್ಕರೆ ಒಳ್ಳೆಯದು. ಇಲ್ಲದಿದ್ದರೆ ಮುಂದಿನ ಹೋರಾಟವೂ ಅಲ್ಲಿಯೇ ಆರಂಭವಾಗುತ್ತದೆ,” ಎಂದು ರೈತರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಹಿರೇಬಾಗೇವಾಡಿಯಿಂದ ಕೇಳಿಬಂದಿರುವ ಈ ಧ್ವನಿ ಈಗ ಕೇವಲ ರಸ್ತೆ ವಿಚಾರವಲ್ಲ –
ಇದು ರೈತನ ಭೂ ಹಕ್ಕು ಮತ್ತು ಸ್ವಾಭಿಮಾನದ ಸಮರ.

Leave a Reply

Your email address will not be published. Required fields are marked *

error: Content is protected !!