ಇ ಬೆಳಗಾವಿ ವಿಶೇಷ ಬೆಳಗಾವಿ. ಹಿರೇಬಾಗೇವಾಡಿ ಸಮೀಪ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿಮರ್ಾಣ ಯೋಜನೆಯಿಂದ ಹುಟ್ಟಿಕೊಂಡ ವಿವಾದ ಇದೀಗ ಕೇವಲ ಸ್ಥಳೀಯ ಸಮಸ್ಯೆಯಾಗಿ ಉಳಿದಿಲ್ಲ. ರೈತರ ಹೋರಾಟ, ಭೂಮಿ ಹಕ್ಕಿನ ಪ್ರಶ್ನೆ ಮತ್ತು ನಾಳೆ ದಿ. 19ರಂದು ನಡೆಯಲಿರುವ ಮಹತ್ವದ ಸಭೆ. ಈ ಎಲ್ಲ ಬೆಳವಣಿಗೆಗಳು ರಾಜ್ಯದ ಗಮನ ಸೆಳೆಯುವ ಹಂತಕ್ಕೆ ತಲುಪಿವೆ.
ವಿಶ್ವವಿದ್ಯಾಲಯದ ಅಭಿವೃದ್ಧಿಯ ಹೆಸರಿನಲ್ಲಿ ಕೈಗೊಂಡ ರಸ್ತೆ ಕಾಮಗಾರಿಯು ರೈತರ ಜಮೀನಿಗೆ ಧಕ್ಕೆಯಾಗಿದೆ ಎಂಬ ಆರೋಪ, ಭೂಸ್ವಾಧೀನ ಕಾಯ್ದೆ 2013ರ ಪಾಲನೆಯ ಕುರಿತು ಉಂಟಾದ ಗಂಭೀರ ಪ್ರಶ್ನೆಗಳು ಹಾಗೂ ಪರಿಹಾರವಿಲ್ಲದ ಕೆಲಸದ ವಿರುದ್ಧ ರೈತರ ಆಕ್ರೋಶ..ಇವೆಲ್ಲವೂ ಈ ಸಂಘರ್ಷದ ಮೂಲ ಕಾರಣಗಳಾಗಿವೆ. ಇತಿಹಾಸದಲ್ಲೇ ಮೊದಲ ಬಾರಿಗೆ ರೈತರ ಜಮೀನಿನಲ್ಲಿ ವಿಸಿ ಸಭೆ.
ಈ ವಿವಾದಕ್ಕೆ ಇದೀಗ ಒಂದು ಅಪರೂಪದ ತಿರುವು ಸಿಗುವ ಎಲ್ಲ ಲಕ್ಷಣಗಳು ಕಾಣಸಿಗುತ್ತಿವೆ. ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಪ್ರಸ್ತುತ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ತ್ಯಾಗರಾಜ ಅವರು ನಾಳೆ ದಿ. 19ರಂದು ರೈತರ ಜಮೀನಲ್ಲೇ ರೈತರೊಂದಿಗೆ ನೇರವಾಗಿ ಕುಳಿತು ಸಭೆ ನಡೆಸಲು ಸಮ್ಮತಿಸಿದ್ದಾರೆ ಎನ್ನಲಾಗಿದೆ. ಹಿರೇಬಾಗೇವಾಡಿ ಮಲ್ಲಪ್ಪನ ಗುಡ್ಡದಲ್ಲಿ ವಿವಿ ಕಾಮಗಾರಿ ಆರಂಭವಾದಾಗಿನಿಂದ ಯಾವೊಬ್ಬ ಆರ್ಸಿಯು ಕುಲಪತಿ ರೈತರ ಜಮೀನಿನಲ್ಲಿ ಸಭೆ ನಡೆಸಿದ ಉದಾಹರಣೆ ಇಲ್ಲ.
ಹೀಗಾಗಿ ಈಗಿನ ವಿಸಿಯವರು ರೈತರ ಜಮೀನಿನಲ್ಲಿ ಸಭೆ ನಡೆಸಿದರೆ ಅದು ಇತಿಹಾಸದಲ್ಲಷ್ಟೇ ಅಲ್ಲ, ಉನ್ನತ ಶಿಕ್ಷಣ ಆಡಳಿತದ ವಲಯದಲ್ಲಿಯೂ ಅಪರೂಪದ ಹೆಜ್ಜೆ ಆಗಲಿದೆ.
ಹೊಲಕ್ಕೆ ಬಂದ್ರೆ ಅರ್ಧ ಸಮಸ್ಯೆ ಬಗೆಹರಿದಂತೆ ರೈತರ ಮಾತು ಸರಳವಾಗಿದೆ, ಆದರೆ ತೀವ್ರವಾಗಿದೆ. ಕಚೇರಿಯಲ್ಲಿ ಕುಳಿತು ಮಾಡುವುದಕ್ಕಿಂತ, ನಮ್ಮ ಹೊಲಕ್ಕೆ ಬಂದು ನೋಡಿದರೆ ನಮ್ಮ ನೋವು ಅರ್ಥವಾಗುತ್ತದೆ. ರಸ್ತೆ ಕಾಮಗಾರಿಯಿಂದ ನಿಂತ ಬೆಳೆ ಹಾನಿ, ಜಮೀನಿನ ಅಂಚು ಕಡಿತ, ನೀರು ಹರಿವಿನ ದಾರಿಗಳ ಅಡ್ಡಿಪಡಿಕೆ ಈ ಎಲ್ಲ ಸಮಸ್ಯೆಗಳು ಕಾಗದದ ನಕ್ಷೆಯಲ್ಲಿ ಕಾಣಿಸುವುದಿಲ್ಲ. ಹೊಲದಲ್ಲಿ ರೈತರೊಂದಿಗೆ ನಿಂತಾಗ ಮಾತ್ರ ಗೋಚರವಾಗುತ್ತವೆ ಎನ್ನುವುದು ರೈತರ ವಾದ. ಅದಕ್ಕಾಗಿಯೇ, ರೈತರು ವಿಸಿಯವರನ್ನು ತಮ್ಮ ಜಮೀನಿಗೆ ಆಹ್ವಾನಿಸುವ ಕೆಲಸ ಮಾಡಿದ್ದಾರೆ. ಎಲ್ಲರೂ ಅಂದುಕೊಂಡಂತೆ ವಿಸಿಯವರು ರೈತರ ಜಮೀನಿಗೆ ಬಂದರೆ ಅರ್ಧ ಸಮಸ್ಯೆಗೆ ಪರಿಹಾರ ಸಿಕ್ಕಂತೆಯೇ ಎಂಬ ಭರವಸೆ ರೈತರಲ್ಲಿದೆ.