Headlines

ಬಿಸಿಲಲ್ಲೇ ಜಮೀನಿಗೆ ಇಳಿದ RCU ವಿಸಿ

ರೈತರ ಅಳಲು ಕೇಳಿದ ಆರ್ಸಿಯು ಆಡಳಿತ – ಇತಿಹಾಸದ ಮೊದಲ ಮಾನವೀಯ ತಿರುವು.

ಹಿರೇಬಾಗೇವಾಡಿ ಮಲ್ಲಪ್ಪನ ಗುಡ್ಡ ಪ್ರದೇಶದಲ್ಲಿ ನೇರ ಸಂವಾದ

ರೈತರು ಬೆಳೆಗೆ, ನೀರಿನ ಹರಿವು ಮತ್ತು ಬದುಕಿನ ಭದ್ರತೆ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು

ಕಾಮಗಾರಿಯ ತ್ವರಿತ ಸಮಸ್ಯೆಗಳ ಚರ್ಚೆ
ಕುಲಪತಿ ಭರವಸೆ – ನ್ಯಾಯಯುತ ಪರಿಹಾರ
ಸಂಕಷ್ಟ ಪರಿಹಾರಕ್ಕೆ ನೇರ ಕ್ರಮ

ಸಿಂಡಿಕೇಟ್ ಸಭೆಯಲ್ಲಿ ಮನವಿ ಸಲ್ಲಿಸಿದ ಸಮಸ್ಯೆಗಳ ಪರಿಶೀಲನೆ. ರೈತರೊಂದಿಗೆ ಭವಿಷ್ಯದ ಸಹಕಾರ


ಹಿರೇಬಾಗೇವಾಡಿ/ಬೆಳಗಾವಿ:
ಸುಡುವ ಬಿಸಿಲು, ಉರಿಯುವ ನೆಲ… ಆದರೆ ಅದಕ್ಕಿಂತ ಹೆಚ್ಚು ಉರಿಯುತ್ತಿತ್ತು ರೈತರ ಮನಸ್ಸು. ಆ ನೋವಿನ ನಡುವೆಯೇ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜನ್ ಅವರು ಕಚೇರಿ ಮಿತಿ ದಾಟಿ ನೇರವಾಗಿ ರೈತರ ಜಮೀನಿಗೆ ಇಳಿದು, ಎರಡುವರೆ ತಾಸುಗಳ ಕಾಲ ರೈತರೊಂದಿಗೆ ಕುಳಿತು ಮಾತುಕತೆ ನಡೆಸಿದರು.

ಇದು ಆರ್ಸಿಯು ಇತಿಹಾಸದಲ್ಲೇ ಅಲ್ಲ, ರಾಜ್ಯದ ಉನ್ನತ ಶಿಕ್ಷಣ ಆಡಳಿತದಲ್ಲಿಯೂ ಅಪರೂಪದ ಮಾನವೀಯ ಕ್ಷಣವಾಗಿ ದಾಖಲಾಗಿದೆ.
ಹಿರೇಬಾಗೇವಾಡಿ ಸಮೀಪದ ಮಲ್ಲಪ್ಪನ ಗುಡ್ಡ ಪ್ರದೇಶದಲ್ಲಿ ನಡೆಯುತ್ತಿರುವ ರಸ್ತೆ–ಪೈಪ್ಲೈನ್ ಕಾಮಗಾರಿಯಿಂದ ಕಳೆದ ನಾಲ್ಕು ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿರುವ ರೈತರ ಅಳಲು, ಆಕ್ರೋಶ, ಅನುಮಾನಗಳೆಲ್ಲವೂ ಈ ಸಭೆಯಲ್ಲಿ ಬಹಿರಂಗವಾಗಿ ಹೊರಬಂದವು.

ಇದುವರೆಗೂ ಯಾವುದೇ ಕುಲಪತಿಗಳು ರೈತರ ಜಮೀನಲ್ಲೇ ಸಭೆ ನಡೆಸಿರಲಿಲ್ಲ ಎಂಬುದೇ ಈ ಘಟನೆಯ ವಿಶೇಷತೆ.
ಸಭೆಗೆ ಇನ್ನೊಂದು ವಿಭಿನ್ನ ಆಯಾಮ ನೀಡಿದುದು – ಕುಲಪತಿಗಳು ರೈತರ ದ್ವಿಚಕ್ರ ವಾಹನದಲ್ಲೇ ಸಂಚರಿಸಿ ಜಮೀನಿಗೆ ತೆರಳಿ, ಕಾಮಗಾರಿಯಿಂದ ಉಂಟಾದ ಹಾನಿಯನ್ನು ಸ್ಥಳದಲ್ಲೇ ಪರಿಶೀಲಿಸಿದುದು. ಕಚೇರಿಯ ಗೋಡೆಗಳೊಳಗೆ ಸೀಮಿತವಾಗಿದ್ದ ಆಡಳಿತ ಈ ಬಾರಿ ಕಡತಗಳನ್ನು ಬದಿಗಿಟ್ಟು ನೆಲದ ವಾಸ್ತವವನ್ನು ಕಂಡಿದೆ ಎಂಬ ಭಾವನೆ ರೈತರಲ್ಲಿ ಮೂಡಿತು.

ಆಕ್ರೋಶದ ನಡುವೆ ಸಂಧಾನ
ಯಾವುದೇ ಪೂರ್ವ ಸೂಚನೆ ಇಲ್ಲದೆ ರಸ್ತೆ, ಪೈಪ್ಲೈನ್, ಚರಂಡಿ ಕಾಮಗಾರಿ ಆರಂಭಿಸಿರುವುದರಿಂದ ಬೆಳೆ ನಾಶವಾಗಿದೆ, ನೀರಿನ ಸಹಜ ಹರಿವಿಗೆ ಅಡ್ಡಿಯಾಗಿದೆ, ಬದುಕಿನ ಭದ್ರತೆಯೇ ಪ್ರಶ್ನಾರ್ಥಕವಾಗಿದೆ ಎಂದು ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತಮ್ಮ ಜಮೀನಿನಲ್ಲಿ ಗುರುತು ಹಾಕಿ, ಬೋರ್ವೆಲ್ ಕೊರೆದು ಕಾಮಗಾರಿ ನಡೆಸುತ್ತಿರುವುದು ಅತಿಕ್ರಮಣವೇ ಅಲ್ಲವೇ ಎಂಬ ಪ್ರಶ್ನೆಯನ್ನೂ ಅವರು ನೇರವಾಗಿ ಮುಂದಿಟ್ಟರು.

ಆಕ್ರೋಶದ ನಡುವೆಯೂ ಕುಲಪತಿ ತ್ಯಾಗರಾಜನ್ ಹಾಗೂ ಕುಲಸಚಿವ ಸಂತೋಷ ಕಾಮಗೌಡ ಅವರು ಸಮಾಧಾನ ಕಾಪಾಡಿಕೊಂಡು ಪ್ರತಿಯೊಂದು ಅಹವಾಲನ್ನೂ ಗಮನದಿಂದ ಆಲಿಸಿದರು.
“ಕಳೆದ ನಾಲ್ಕು ವರ್ಷಗಳಿಂದ ರೈತರು ಅನುಭವಿಸುತ್ತಿರುವ ಸಂಕಷ್ಟಗಳು ನನ್ನ ಗಮನಕ್ಕೆ ಬಂದಿವೆ. ರೈತರಿಗೆ ಯಾವುದೇ ಅನ್ಯಾಯವಾಗದಂತೆ ಪ್ರಾಮಾಣಿಕ ಪರಿಹಾರ ನೀಡಲಾಗುವುದು. ರಸ್ತೆ ನಿರ್ಮಾಣಕ್ಕೆ ರೈತರು ಇದುವರೆಗೂ ಸಹಕಾರ ನೀಡಿದ್ದಾರೆ; ಮುಂದೆಯೂ ಪರಸ್ಪರ ಸಹಕಾರ ಅಗತ್ಯ,” ಎಂದು ಕುಲಪತಿ ಹೇಳಿದರು.

ರೈತರು ಸಲ್ಲಿಸಿರುವ ಎಲ್ಲ ಮನವಿಗಳನ್ನು ಸಿಂಡಿಕೇಟ್ ಸಭೆಯ ಮುಂದಿಟ್ಟು ನ್ಯಾಯಯುತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದರು. ಮುಂದಿನ ಶೈಕ್ಷಣಿಕ ವರ್ಷದಲ್ಲೇ ಇಲ್ಲಿ ತರಗತಿಗಳು ಆರಂಭವಾಗಲಿದ್ದು, ವಿವಿಯ ಮುಂಭಾಗದಲ್ಲಿ ರಾಣಿ ಚನ್ನಮ್ಮನ ಭವ್ಯ ಮೂರ್ತಿ ಪ್ರತಿಷ್ಠಾಪನೆ ಯೋಜನೆಯೂ ಇದೆ ಎಂದು ತಿಳಿಸಿದರು

.ಆಡಳಿತದ ಸ್ಪಷ್ಟನೆ
ಕುಲಸಚಿವ ಸಂತೋಷ ಕಾಮಗೌಡ ಮಾತನಾಡಿ, 20 ಅಡಿ ಅಗಲದ ಸಿಸಿ ರಸ್ತೆ ನಿರ್ಮಾಣ ನಡೆಯುತ್ತಿದೆ. ಒಂದು ಬದಿ ಪೂರ್ಣಗೊಂಡಿದ್ದು, ಇನ್ನೊಂದು ಬದಿಯಲ್ಲಿ ಚರಂಡಿ ನಿರ್ಮಾಣ ನಡೆಯಲಿದೆ. ಯಾವುದೇ ರೈತರ ಜಮೀನಿನ ಅತಿಕ್ರಮಣ ಇಲ್ಲ, ಆಗುವುದೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಧೂಳಿನ ಸಮಸ್ಯೆ ತಪ್ಪಿಸಲು ವಾಹನಗಳ ವೇಗ ನಿಯಂತ್ರಣ, ಗುಡ್ಡದ ಮೇಲಿಂದ ಮಳೆನೀರು ಜಮೀನಿಗೆ ನುಗ್ಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.
ರೈತರ ಬದುಕಿನ ಸಂಕಷ್ಟ
ರೈತರು ತಮ್ಮ ಮನವಿಯಲ್ಲಿ, “ನಾವು ವಿಶ್ವವಿದ್ಯಾಲಯದ ವಿರೋಧಿಗಳಲ್ಲ, ಅಭಿವೃದ್ಧಿಗೂ ವಿರೋಧಿಗಳಲ್ಲ. ರಸ್ತೆ ಬೇಕು, ಶಿಕ್ಷಣ ಬೇಕು, ವಿವಿಯ ಬೆಳವಣಿಗೆ ಬೇಕು. ಆದರೆ ಆ ಬೆಳವಣಿಗೆ ರೈತರ ಕಣ್ಣೀರ ಮೇಲೆ ಕಟ್ಟಬಾರದು” ಎಂದು ಸ್ಪಷ್ಟಪಡಿಸಿದ್ದಾರೆ.

ರಸ್ತೆ ಕಾಮಗಾರಿ ಆರಂಭವಾದ ನಂತರ ಹೊಲಗಳ ಅಂಚುಗಳು ಕಡಿದುಹೋಗಿವೆ. ಎದೆಎತ್ತರಕ್ಕೆ ಬೆಳೆದ ಕಬ್ಬು, ಜೋಳದ ಬೆಳೆ ಧೂಳಿನಿಂದ ಮುಚ್ಚಿಹೋಗಿದ್ದು, ಕಾರ್ಖಾನೆಗಳು ಕಬ್ಬು ಸ್ವೀಕರಿಸದ ಸ್ಥಿತಿ ನಿರ್ಮಾಣವಾಗಿದೆ. ಜೋಳದ ತೆನೆಗಳನ್ನು ಜಾನುವಾರುಗಳೂ ತಿನ್ನದಂತಹ ಪರಿಸ್ಥಿತಿ ಉಂಟಾಗಿದೆ ಎಂದು ರೈತರು ವಿವರಿಸಿದ್ದಾರೆ. ನೀರು ಹರಿಯುವ ಸಹಜ ದಾರಿಗಳು ಮುಚ್ಚಲ್ಪಟ್ಟಿರುವುದರಿಂದ ಮುಂದಿನ ಬೆಳೆ ಹಾಗೂ ಆದಾಯದ ಬಗ್ಗೆ ಭಯ ಆವರಿಸಿದೆ ಎಂಬುದು ಅವರ ಅಳಲು.
ಭೂಸ್ವಾಧೀನ ಕಾಯ್ದೆ–2013ರ ಅಡಿಯಲ್ಲಿ ಲಿಖಿತ ಒಪ್ಪಿಗೆ, ಸಾಮಾಜಿಕ ಪರಿಣಾಮ ಮೌಲ್ಯಮಾಪನ ಹಾಗೂ ನ್ಯಾಯಯುತ ಪರಿಹಾರ ತಮ್ಮ ಹಕ್ಕುಗಳಾಗಿವೆ ಎಂದು ರೈತರು ಒತ್ತಾಯಿಸಿದ್ದಾರೆ. ರಸ್ತೆ ವಿನ್ಯಾಸ ಮರುಪರಿಶೀಲನೆ, ನಾಶವಾದ ಬೆಳೆ–ಭೂಮಿಗೆ ಪರಿಹಾರ ಮತ್ತು ಮುಂದಿನ ಯಾವುದೇ ಕಾಮಗಾರಿಗೂ ಮೊದಲು ಲಿಖಿತ ಒಪ್ಪಿಗೆ ಪಡೆಯಬೇಕು ಎಂಬುದು ಪ್ರಮುಖ ಬೇಡಿಕೆ.
ಸಭೆಯ ಅಂತ್ಯಕ್ಕೆ ಉದ್ವಿಗ್ನತೆಯ ನಡುವೆಯೂ ಸಂಧಾನದ ವಾತಾವರಣ ನಿರ್ಮಾಣವಾದರೂ, ರೈತರ ಭವಿಷ್ಯ ಸಿಂಡಿಕೇಟ್ ಸಭೆಯ ತೀರ್ಮಾನಗಳ ಮೇಲೆ ನಿಂತಿದೆ. ಆದರೂ, ರೈತರ ಜಮೀನಲ್ಲೇ ಕುಳಿತು ಅವರ ಮಾತು ಕೇಳಿದ ಈ ಸಭೆ, ಆಡಳಿತ–ಜನರ ನಡುವಿನ ಅಂತರ ಕಡಿಮೆ ಮಾಡುವ ದಿಕ್ಕಿನಲ್ಲಿ ಆರ್ಸಿಯು ಇತಿಹಾಸದ ಮಹತ್ವದ ಹೆಜ್ಜೆಯಾಗಿ ಉಳಿಯಲಿದೆ.

Leave a Reply

Your email address will not be published. Required fields are marked *

error: Content is protected !!