ಬೋಡಕೆನಟ್ಟಿಯಲ್ಲಿ ಅಂಗಡಿ ಮಾಲೀಕನ ಹತ್ಯೆ
ಮದ್ಯದ ಅಮಲಿನ ನಾಲ್ವರು ಯುವಕರಿಂದ ಅಮಾನುಷ ಹಲ್ಲೆ – ನಾಲ್ವರ ಬಂಧನ
ಬೆಳಗಾವಿ:
ಸಿಗರೇಟ್ ದುಡ್ಡಿನಂತೆ ಕಾಣಿಸಿದ ಕ್ಷುಲ್ಲಕ ತಕರಾರು ಒಂದು ಜೀವವನ್ನೇ ಬಲಿ ಪಡೆದ ಹೃದಯವಿದ್ರಾವಕ ಘಟನೆ ಬೆಳಗಾವಿ ತಾಲೂಕಿನ ಬೋಡಕೆನಟ್ಟಿ ಗ್ರಾಮದಲ್ಲಿ ನಡೆದಿದೆ. ಮದ್ಯದ ಅಮಲಿನಲ್ಲಿ ಇದ್ದ ನಾಲ್ವರು ಯುವಕರು ನಡೆಸಿದ ಕ್ರೂರ ಹಲ್ಲೆಯಿಂದ ಅಂಗಡಿ ಮಾಲೀಕ ಯಲ್ಲಪ್ಪ ದುರ್ಗಪ್ಪ ನಾಯಿಕ (48) ಮೃತಪಟ್ಟಿದ್ದಾರೆ.
ಕಡೋಲಿ ಗ್ರಾಮದ ಪ್ರಜ್ವಲ್ ರಾಮಚಂದ್ರ ಪಾಟೀಲ (22), ನಿಖಿಲ್ ಮಹೇಶ್ ಚೌಗಲೆ (22), ವಿವೇಕ್ ರಾಜೇಂದ್ರ ಚೌಗುಲೆ (22) ಹಾಗೂ ಶ್ರೀಧರ್ ರತನ ಪಾಟೀಲ (21) ಹಲ್ಲೆ ನಡೆಸಿದ ಆರೋಪಿಗಳಾಗಿದ್ದು, ಹಲ್ಲೆ ನಡೆದು ಅರ್ಧ ಗಂಟೆಯೊಳಗೆ ಕಾಕತಿ ಪೊಲೀಸರು ನಾಲ್ವರನ್ನು ಬಂಧಿಸಿ ಗಮನಾರ್ಹ ಚುರುಕನ್ನು ತೋರಿದ್ದಾರೆ.

ಮಂಗಳವಾರ ರಾತ್ರಿ ಮೋಹನಗಾ ಜಾತ್ರೆ ಮುಗಿಸಿಕೊಂಡು ವಾಪಸಾಗುತ್ತಿದ್ದ ಆರೋಪಿಗಳು ಮದ್ಯದ ಅಮಲಿನಲ್ಲಿ ಮಧ್ಯರಾತ್ರಿ ಬೋಡಕೆನಟ್ಟಿ ಗ್ರಾಮದಲ್ಲಿ ಬೈಕ್ ನಿಲ್ಲಿಸಿ, ಮುಚ್ಚುವ ಹಂತದಲ್ಲಿದ್ದ ಅಂಗಡಿಯಲ್ಲಿ ಸಿಗರೇಟ್ ತೆಗೆದುಕೊಂಡಿದ್ದಾರೆ. ಅಲ್ಲೇ ಸಿಗರೇಟ್ ಸೇದಿದ ಬಳಿಕ ದುಡ್ಡು ಕೇಳಿದ ಅಂಗಡಿ ಮಾಲೀಕ ಯಲ್ಲಪ್ಪ ನಾಯಿಕ ಅವರೊಂದಿಗೆ ಮಾತಿನ ಚಕಮಕಿ ನಡೆದಿದೆ.

ಕ್ಷಣಾರ್ಧದಲ್ಲೇ ವಾಗ್ವಾದ ಹಲ್ಲೆಗೆ ತಿರುಗಿದ್ದು, ನಾಲ್ವರು ಸೇರಿ ನಡೆಸಿದ ಥಳಿತದಿಂದ ಯಲ್ಲಪ್ಪ ನಾಯಿಕ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ತಕ್ಷಣ ವೈದ್ಯರಿಗೆ ತೋರಿಸಿ ನಂತರ ಬೆಳಗಾವಿಯ ಕೆಎಲ್ಇ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.
ಹತ್ಯೆ ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕಾಕತಿ ಪೊಲೀಸರು, ಪರಾರಿಯಾಗಿದ್ದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದು, ಸಣ್ಣ ವಿಚಾರಕ್ಕೂ ಜೀವ ಹರಣವಾಗುವಷ್ಟು ಸಮಾಜದಲ್ಲಿ ಹೆಚ್ಚುತ್ತಿರುವ ಹಿಂಸಾತ್ಮಕ ಪ್ರವೃತ್ತಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.

