
ಮಹಿಳಾ ಶಕ್ತಿ, ಅಭಿವೃದ್ಧಿ,
ರಾಜಕೀಯ ಚರ್ಚೆ ನಡುವೆ ದಕ್ಷಿಣ ಕ್ಷೇತ್ರಕ್ಕೆ ರಾಷ್ಟ್ರೀಯ ಮಟ್ಟದ ಮೆಚ್ಚುಗೆ.
ಬೆಳಗಾವಿ:
“ಬೆಳಗಾವಿ ದಕ್ಷಿಣ ಮತಕ್ಷೇತ್ರ ಇಂದು ದೇಶಕ್ಕೇ ಮಾದರಿಯಾಗಿದೆ” – ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಈ ಘೋಷಣೆ ಕಾರ್ಯಕ್ರಮದ ಕೇಂದ್ರಬಿಂದುವಾಯಿತು. ಕೇಂದ್ರ ಬಜೆಟ್ ಕುರಿತ ಮಹಿಳಾ ಸಂವಾದ ಮತ್ತು ಪದ್ಮಶ್ರೀ ಪುರಸ್ಕೃತ ಡಾ. ಪ್ರಭಾಕರ ಕೋರೆ ಅವರ ಸನ್ಮಾನ ಕಾರ್ಯಕ್ರಮ ದಲ್ಲಿ ಅವರು ಮಾತನಾಡಿದರು, ಶಾಸಕ ಅಭಯ ಪಾಟೀಲ ಅವರ ಕಾರ್ಯಶೈಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಕ್ಷೇತ್ರದ ಅಭಿವೃದ್ಧಿ ಮಾದರಿಯನ್ನು ರಾಷ್ಟ್ರೀಯ ಮಟ್ಟಕ್ಕೆ ಎತ್ತಿ ಹಿಡಿದರು.

ದಕ್ಷಿಣ ಕ್ಷೇತ್ರದಲ್ಲಿ ಮಹಿಳೆಯರಿಗೆ ನೂರಕ್ಕೆ ನೂರರಷ್ಟು ಸ್ಥಾನಮಾನ ನೀಡಲಾಗಿದೆ. ಆಡಳಿತ, ಸಂಘಟನೆ ಮತ್ತು ಸಾರ್ವಜನಿಕ ಜೀವನದಲ್ಲಿ ಮಹಿಳೆಯರ ಸಕ್ರಿಯ ಭಾಗವಹಿಸುವಿಕೆ ಈ ಕ್ಷೇತ್ರದ ಶಕ್ತಿ. ಇದೇ ಕಾರಣಕ್ಕೆ ದಕ್ಷಿಣ ಮತಕ್ಷೇತ್ರ ದೇಶಕ್ಕೇ ಮಾದರಿ,” ಎಂದು ವಿಜಯೇಂದ್ರ ಹೇಳಿದರು.
ಅಭಿವೃದ್ಧಿ, ಮಹಿಳಾ ಸಬಲೀಕರಣ, ಸಂಘಟನಾ ಬಲ – ಈ ಮೂರು ಅಂಶಗಳ ಸಮನ್ವಯದಿಂದ ದಕ್ಷಿಣ ಕ್ಷೇತ್ರ ವಿಶೇಷ ಗುರುತನ್ನು ಗಳಿಸಿದೆ. ಇಂತಹ ಮಾದರಿಯನ್ನು ಇತರೆ ಕ್ಷೇತ್ರಗಳೂ ಅನುಸರಿಸಬೇಕು,” ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಒಂಬತ್ತು ಬಾರಿ ಬಜೆಟ್ ಮಂಡಿಸಿರುವುದು ಇತಿಹಾಸಾತ್ಮಕ ಸಾಧನೆ ಎಂದ ಅವರು, “ಕರ್ನಾಟಕವನ್ನು ಪ್ರತಿನಿಧಿಸುತ್ತಿರುವುದು ರಾಜ್ಯಕ್ಕೆ ಹೆಮ್ಮೆ. ರೈತರು, ಮಹಿಳೆಯರು, ಯುವಕರು ಹಾಗೂ ಬಡವರ ಪರ ಪ್ರಧಾನಮಂತ್ರಿ ನರೇಂದ್ರ ಮೋದಿ ರೂಪಿಸಿರುವ ಯೋಜನೆಗಳು ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತಿವೆ. ಆದಿವಾಸಿ ಮಹಿಳೆಯನ್ನು ರಾಷ್ಟ್ರಪತಿಯಾಗಿ ನೇಮಕ ಮಾಡಿರುವುದು ಮಹಿಳಾ ಶಕ್ತಿಯ ಮೇಲಿನ ವಿಶ್ವಾಸಕ್ಕೆ ಸಾಕ್ಷಿ,” ಎಂದರು.

, “ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಲು ಕೇಂದ್ರದತ್ತ ಬೊಟ್ಟು ಮಾಡುತ್ತಿದೆ. ಐದು ಗ್ಯಾರಂಟಿಗಳ ಘೋಷಣೆ ರಾಜಕೀಯ ಲಾಭಕ್ಕಾಗಿ. ತೆರಿಗೆ ವಿಚಾರದಲ್ಲಿ ಕೇಂದ್ರದ ವಿರುದ್ಧದ ಆರೋಪಗಳು ಸರಿಯಲ್ಲ. ಉತ್ತಮ ಆರ್ಥಿಕ ನೀತಿಯಿಂದ ಭಾರತ ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ,” ಎಂದು ಹೇಳಿದರು.
“ಕೋರೆ ರಾಜ್ಯಪಾಲರಾಗಲಿ” –

ಶಾಸಕ ಅಭಯ ಪಾಟೀಲ ಮಾತನಾಡಿ, “ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಡಾ. ಪ್ರಭಾಕರ ಕೋರೆ ಅವರನ್ನು ಉತ್ತರ, ದಕ್ಷಿಣ ಹಾಗೂ ಗ್ರಾಮೀಣ ಬಿಜೆಪಿ ವತಿಯಿಂದ ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂಗತಿ. ಅವರು ರಾಜ್ಯಪಾಲರಾಗಬೇಕು ಎಂಬುದು ಈ ಭಾಗದ ಜನರ ಅಪೇಕ್ಷೆಯಾಗಿದೆ,” ಎಂದು ಹೇಳಿದರು.
“ನಾರಿಶಕ್ತಿ ನಿರ್ಣಾಯಕ” – ಡಾ. ಕೋರೆ.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪದ್ಮಶ್ರೀ ಡಾ. ಬಾ. ಪ್ರಭಾಕರ ಕೋರೆ, “ದೇಶದ ನಾರಿಶಕ್ತಿ ಅತ್ಯಂತ ಬಲಿಷ್ಠ. ನಿರ್ಮಲಾ ಸೀತಾರಾಮನ್ ಒಂಬತ್ತು ಬಾರಿ ಬಜೆಟ್ ಮಂಡಿಸಿರುವುದು ವಿಶೇಷ. ಮಹಿಳೆಯರಿಗೆ 33 ಶೇಕಡಾ ಮೀಸಲಾತಿ ಜಾರಿಗೆ ಬರಲಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಅವಕಾಶಗಳು ಲಭಿಸಲಿವೆ. ಮುಂದಿನ ಚುನಾವಣೆ ಬಹಳ ಪ್ರಮುಖ; ಬಿಜೆಪಿ ಅಧಿಕಾರಕ್ಕೆ ಬರಲಿದೆ,” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಹಿಳಾ ಶಕ್ತಿಯಿಂದ ಸನ್ಮಾನ ಸ್ವೀಕರಿಸುವುದು ಸಂತೋಷ ತಂದಿದೆ ಎಂದರು.
“ಬಜೆಟ್ ದೇಶಾಭಿವೃದ್ಧಿಗೆ ಪೂರಕ” –
ಬಿಜೆಪಿ ಮುಖ್ಯ ವಕ್ತಾರ ಕೇಶವ ಉಪಾಧ್ಯಾಯ ಮಾತನಾಡಿ, “ಪ್ರಧಾನಿ ಮೋದಿ ಮಹಿಳಾ ಶಕ್ತಿಯನ್ನು ಗುರುತಿಸಿದ್ದಾರೆ. ಕಳೆದ ಒಂಬತ್ತು ವರ್ಷಗಳಲ್ಲಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಪ್ರತಿಯೊಂದು ಬಜೆಟ್ ದೇಶದ ಆರ್ಥಿಕ ಏಳ್ಗೆಗೆ ಪೂರಕವಾಗಿದೆ. ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವಲ್ಲಿ ಮೋದಿ ಮಹತ್ತರ ಶ್ರಮ ಪಟ್ಟಿದ್ದಾರೆ,” ಎಂದು ಹೇಳಿದರು.
ಮಾಜಿ ಶಾಸಕ ಅನೀಲ ಬೆನಕೆ ಮಾತನಾಡಿ, ಕೇಂದ್ರ ಸರ್ಕಾರದ ಆರ್ಥಿಕ ಶಿಸ್ತಿನ ನೀತಿಗಳು ದೇಶದ ಬೆಳವಣಿಗೆಗೆ ಬುನಾದಿಯಾಗಿವೆ ಎಂದು ಹೇಳಿದರು. ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ನೀಡಿರುವ ಉತ್ತೇಜನ ಕ್ರಮಗಳು ಸಮಾಜದಲ್ಲಿ ದೀರ್ಘಕಾಲಿಕ ಪರಿಣಾಮ ಬೀರುತ್ತವೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಸಂಜಯ ಪಾಟೀಲ, ಮಹಾಂತೇಶ ಕವಟಗಿಮಠ, ಗೀತಾ ಸುತಾರ, ಸುಭಾಷ್ ಪಾಟೀಲ, ಅರವಿಂದ್ ಪಾಟೀಲ, ಅರುಣ್ ಶಹಾಪುರ, ರಮೇಶ್ ದೇಶಪಾಂಡೆ, ಭೈರಪ್ಪನವರ, ಬಡವನಾಚೆ ಸೇರಿದಂತೆ ಹಲವರು ಹಾಜರಿದ್ದರು.

