
ಬಾಕಿ ಬಿಲ್, ಕಮಿಷನ್ ಆರೋಪದ ನಡುವೆಯೇ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ.
ಬೆಂಗಳೂರು, “ಕಮಿಷನ್ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತೆ… ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಸುಲಭವಲ್ಲ,” ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಗುರುವಾರ ಹೇಳಿಕೆ ನೀಡಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
ಗುತ್ತಿಗೆದಾರರಿಂದ ಕಮಿಷನ್ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಪರಿಹಾರ ಕಂಡುಕೊಳ್ಳಲು ದಾರಿ ಹುಡುಕಬೇಕು. ಸಿಎಂ ಇದ್ದಾರೆ, ಲೋಕಾಯುಕ್ತ ಇದೆ — ಅವರ ಗಮನಕ್ಕೆ ತರಲಿ. ಆದರೆ ಮೊದಲು ಬಾಕಿ ಏಕೆ ಇಷ್ಟೊಂದು ಹೆಚ್ಚಾಗಿದೆ ಎಂಬುದರ ಬಗ್ಗೆ ಚಿಂತನೆ ಆಗಬೇಕು,” ಎಂದು ಸ್ಪಷ್ಟಪಡಿಸಿದರು.

ಬಾಕಿ ಬಿಲ್ ಗೊಂದಲ:
ಹಿಂದಿನ ಸರ್ಕಾರದ ಮೇಲೆಯೇ ಹೊಣೆ?
ಸಚಿವರು ಆರೋಪಿಸಿದ್ದು, “ಬಜೆಟ್ ಬೆಂಬಲವಿಲ್ಲದೆ ಬಿಜೆಪಿ ಸರ್ಕಾರ ತನ್ನ ಅವಧಿಯಲ್ಲಿ ಕಾಮಗಾರಿಗಳಿಗೆ ಟೆಂಡರ್ ನೀಡಿದೆ. ಅದು ಆಗದೇ ಇದ್ದಿದ್ದರೆ ಈ ಪರಿಸ್ಥಿತಿ ಉಂಟಾಗುತ್ತಿರಲಿಲ್ಲ. ಕೆಲಸ ನಡೆದಿದೆ, ಪಾವತಿ ಮಾಡಲು ಸಮಯ ಬೇಕು. ನೀರಾವರಿ ಮತ್ತು ಲೋಕೋಪಯೋಗಿ ಇಲಾಖೆಯಲ್ಲಿ ಬಾಕಿ ಜಾಸ್ತಿ ಇದೆ. ಕಾಮಗಾರಿ ನಿಲ್ಲಿಸುವುದಕ್ಕೆ ಆಗಲ್ಲ. ಅವರಿಗೆ ‘ಕಂಫರ್ಟ್’ ಇರುವ ಕಡೆ ಟೆಂಡರ್ ಹಾಕುತ್ತಾರೆ,” ಎಂದರು.
ಅವರು ನೀಡಿದ ಅಂಕಿಅಂಶಗಳು:
ಒಟ್ಟು ಬಾಕಿ: ₹12,000 ಕೋಟಿ.
ಪಾವತಿಸಿದ ಮೊತ್ತ: ₹3,000 ಕೋಟಿ.
ಇನ್ನೂ ಬಾಕಿ: ₹9,000 ಕೋಟಿ.
“ನಮ್ಮಲ್ಲಿರುವ ಬಜೆಟ್‌ಗೆ ಸರಿದೂಗಿಸಿ ಬ್ಯಾಲೆನ್ಸ್ ಮಾಡುತ್ತಿದ್ದೇವೆ. ನಾವು ಹೊಸ ಕೆಲಸ ನೀಡಿಲ್ಲ. ಹಿಂದಿನ ಬಾಕಿಯನ್ನು ಸಮತೋಲನಗೊಳಿಸುತ್ತಿದ್ದೇವೆ,” ಎಂದು ವಿವರಿಸಿದರು.
“ಕಮಿಷನ್ ನಿಯಂತ್ರಣ ಮಾಡಬೇಕು, ನಿರ್ಮೂಲನೆ ಅಸಾಧ್ಯ!”
“ಕಮಿಷನ್ ನಿಯಂತ್ರಣ ಮಾಡಬೇಕು ಅಷ್ಟೇ. ಅದನ್ನು ಸಂಪೂರ್ಣವಾಗಿ ತಡೆಯುವುದು ಕಷ್ಟ,” ಎಂದು ಸಚಿವರು ಅಸಹಾಯಕತೆ ವ್ಯಕ್ತಪಡಿಸಿದರು. “ಇದರಲ್ಲಿ ಅಧಿಕಾರಿಗಳ ಲೋಪ ಎನ್ನಲು ಬರಲ್ಲ. ಹಿಂದಿನ ಸರ್ಕಾರದ ನಿರ್ಧಾರಗಳೇ ಮೂಲ ಕಾರಣ,” ಎಂದು ಅವರು ಪುನರುಚ್ಚರಿಸಿದರು.
_–
ಹೈಕಮಾಂಡ್ ಗಟ್ಟಿ…
ಅಧಿಕಾರ ಹಸ್ತಾಂತರಕ್ಕೆ ಕಾಲವೇ ಉತ್ತರ
ಸಚಿವ ಹಚ್.ಸಿ. ಮಹದೇವಪ್ಪ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, “ಅವರನ್ನೇ ಕೇಳಬೇಕು. ನಮ್ಮ ಹೈಕಮಾಂಡ್ ಗಟ್ಟಿ ಇದೆ. ಯಾರೂ ಅದನ್ನು ಅಲ್ಲಾಡಿಸಲು ಸಾಧ್ಯವಿಲ್ಲ. ಸ್ಪಷ್ಟನೆ ಕೊಡಬೇಕಾದರೆ ಹೈಕಮಾಂಡ್ ಕೊಡುತ್ತದೆ,” ಎಂದರು.
ಅಧಿಕಾರ ಹಸ್ತಾಂತರ ವಿಚಾರವಾಗಿ, “ಕಾಲ ಬಂದಾಗ ನೋಡೋಣ. ನಾವು ಕೂಡ ಕಾಯುತ್ತಿದ್ದೇವೆ,” ಎಂದು ಸೂಕ್ಷ್ಮ ಸಂದೇಶ ನೀಡಿದರು.
ಶಾಸಕರ ವಿದೇಶ ಪ್ರವಾಸ:

ಶಾಸಕರ ವಿದೇಶ ಪ್ರವಾಸ ಕುರಿತು ಅವರು, “ಹಿರಿಯ ಶಾಸಕರು ಹಿಂದಿನಿಂದಲೂ ತೆರಳುತ್ತಿದ್ದಾರೆ. ಕೆಲವರು ದುಬೈ, ಕೆಲವರು ಯೂರೋಪ್‌ಗೆ ಹೋಗಿದ್ದರು. ಪಕ್ಷದಲ್ಲಿ ಟೀಂಗಳು ಇದ್ದೇ ಇರುತ್ತವೆ. ಪ್ರತೀ ವರ್ಷ ಹೋಗುತ್ತಾರೆ. ತಮ್ಮ ಸ್ವಂತ ಖರ್ಚಿನಲ್ಲಿ ತೆರಳುತ್ತಾರೆ. ಅವರನ್ನು ನಿಯಂತ್ರಿಸಲು ಸಾಧ್ಯವೇ?” ಎಂದು ಪ್ರಶ್ನಿಸಿದರು.

