ಮಚ್ಚೆಯಲ್ಲಿ ರಾಯಣ್ಣ ಪ್ರತಿಮೆಗೆ ಅವಮಾನ

ಮಚ್ಚೆೆಯಲ್ಲಿ ಕ್ರಾಂತಿವೀರರ ಪ್ರತಿಮೆಗೆ ಅವಮಾನ.

ಕಪ್ಪು ಆಯಿಲ್ ಸುರಿದು ಕಿಡಿಗೇಡಿಗಳ ಕೃತ್ಯ;

ಕನ್ನಡ ಪರ ಸಂಘಟನೆಗಳ ಆಕ್ರೋಶ.

ತಕ್ಷಣ ಮಧ್ಯಪ್ರವೇಶಿಸಿದ ಪೊಲೀಸ್.

ಬೆಳಗಾವಿ: ತಾಲೂಕಿನ ಮಚ್ಚೆ ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಕಿಡಿಗೇಡಿಗಳು ಕಪ್ಪು ಬಣ್ಣದ ಆಯಿಲ್ ಸುರಿದು ಅವಮಾನ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಸುದ್ದಿ ತಿಳಿಯುತ್ತಿದ್ದಂತೆಯೇ ಪ್ರದೇಶದಲ್ಲಿ ತೀವ್ರ ಉದ್ವಿಗ್ನತೆ ಉಂಟಾಗಿದೆ.
ಪ್ರತಿಮೆಯ ಮೇಲೆ ಕಪ್ಪು ಬಣ್ಣ ಹಚ್ಚಿರುವುದು ಸ್ಥಳೀಯರ ಗಮನಕ್ಕೆ ಬಂದಿದ್ದು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆಯೇ ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಸೇರಿದಂತೆ ಡಿಸಿಪಿ ನಾರಾಯಣ ಬರಮನಿ ಹಾಗೂ ಇನ್ನಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಪೊಲೀಸರು ಪ್ರತಿಮೆಯನ್ನು ತಕ್ಷಣವೇ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಅಲ್ಲಿ, ಭದ್ರತೆಯನ್ನು ಹೆಚ್ಚಿಸಿದ್ದಾರೆ. ಕೃತ್ಯಕ್ಕೆ ಕಾರಣವಾದವರನ್ನು ಪತ್ತೆಹಚ್ಚಲು ವಿಶೇಷ ತಂಡ ರಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕನ್ನಡ ಪರ ಸಂಘಟನೆಗಳ ಆಕ್ರೋಶ.

ಘಟನೆಗೆ ಸಂಬಂಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. “ರಾಯಣ್ಣ ಕೇವಲ ಇತಿಹಾಸದ ವ್ಯಕ್ತಿಯಲ್ಲ, ನಮ್ಮ ಅಸ್ತಿತ್ವದ ಸಂಕೇತ. ಅವರ ಪ್ರತಿಮೆಗೆ ಅವಮಾನ ಮಾಡುವ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ” ಎಂದು ಮುಖಂಡರು ಖಂಡಿಸಿದ್ದಾರೆ. ಆರೋಪಿಗಳನ್ನು ತಕ್ಷಣ ಬಂಧಿಸಬೇಕು, ಇಲ್ಲದಿದ್ದರೆ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಉದ್ವಿಗ್ನತೆ ನಿಯಂತ್ರಣಕ್ಕೆ ಪೊಲೀಸ್ ಕ್ರಮ
ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *

error: Content is protected !!