ನಡು ರಸ್ತೇಲಿ‌ ಮಹಿಳೆಗೆ ಥಳಿತ- ವಾಟ್ಸಪ ಗೊಂದಲ

Oplus_16908288

ನಡು ರಸ್ತೆಯಲ್ಲಿ ಮಹಿಳೆಯ ಎಳೆದಾಟ–ಹಲ್ಲೆ |
ಪೊಲೀಸ್ ಆಯುಕ್ತರ ಸ್ಪಷ್ಟನೆ: “ಆಕೆ ಮಕ್ಕಳ ಕಳ್ಳಿ
ಅಲ್ಲ
ಬೆಳಗಾವಿ –
ನಗರದ ಗಾಂಧಿನಗರದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುಳ್ಳು ವಾಟ್ಸಪ್ ಸಂದೇಶದ ಬೆನ್ನಲ್ಲೇ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. “ಮಕ್ಕಳ ಕಳ್ಳಿ” ಎಂಬ ಅಪವಾದಕ್ಕೆ ಬಲಿಯಾಗಿ ನಿರಪರಾಧಿ ಮಹಿಳೆಯನ್ನು ನಡು ರಸ್ತೆಯಲ್ಲೇ ಗುಂಪೊಂದು ಎಳೆದಾಡಿ, ಬಟ್ಟೆ ಹರಿದು ಹಲ್ಲೆ ನಡೆಸಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ಏನಾಯಿತು?
ಸುಮಾರು ನೂರಕ್ಕೂ ಹೆಚ್ಚು ಮಂದಿ ಸೇರಿದ್ದ ಗುಂಪಿನಲ್ಲಿ ಕೆಲವರು ಮಹಿಳೆಯನ್ನು ಕಾಲಿನಿಂದ ಒದ್ದು, ಕೂದಲು ಹಿಡಿದು ಎಳೆದಾಡಿದ ದೃಶ್ಯಗಳು ಕಂಡುಬಂದಿವೆ. ಪ್ರಶ್ನಿಸುವ ನೆಪದಲ್ಲಿ ತಳ್ಳಾಟ–ಒದ್ದಾಟ ನಡೆಸಿದ ಗುಂಪು, ಆಕೆ ನಿರಪರಾಧಿ ಎಂದು ಮನವಿ ಮಾಡಿಕೊಂಡರೂ ಕೇಳಿಸಿಕೊಳ್ಳದೇ ಗದ್ದಲ ಸೃಷ್ಟಿಸಿದೆ. ಜನಸಮೂಹದ ಮಧ್ಯೆ ಮಾನವೀಯತೆ ಮಣ್ಣಾಗಿದೆ ಎಂಬ ಭಾವ ಮೂಡಿಸುವ ಘಟನೆ ಇದಾಗಿದೆ.
ಸ್ಥಳಕ್ಕಾಗಮಿಸಿದ ಮಾಳಮಾರುತಿ ಸಿಪಿಐ ಗಡ್ಡೆಕರ ಅವರು ಪರಿಸ್ಥಿತಿಯನ್ನು ನಿಯಂತ್ರಿಸಿ ಮಹಿಳೆಯನ್ನು ಠಾಣೆಗೆ ಕರೆದುಕೊಂಡು ಹೋಗಿ ರಕ್ಷಣೆ ಒದಗಿಸಿದರು

Oplus_16908288

ಪೊಲೀಸ್ ತನಿಖೆಯಲ್ಲಿ ಏನು ಗೊತ್ತಾಯಿತು?
ಪೊಲೀಸ್ ಮೂಲಗಳ ಪ್ರಕಾರ, ಹಲ್ಲೆಗೆ ಒಳಗಾದ ಮಹಿಳೆ ಪ್ರತಿವರ್ಷ ಭಿಕ್ಷೆ ಕೇಳಲು ಗಾಂಧಿನಗರ ಪ್ರದೇಶಕ್ಕೆ ಬರುತ್ತಾಳೆ. ತೀವ್ರ ಬಿಸಿಲಿನ ಕಾರಣ ಬುರಖಾ ತರಹದ ಉಡುಪು ಧರಿಸಿದ್ದಳು; ಕೈಯಲ್ಲಿ ಚೀಲವೂ ಇತ್ತು. ಈ ಕಾರಣದಿಂದ ಕೆಲವರು ವಾಟ್ಸಪ್‌ನಲ್ಲಿ ಹರಿದಾಡಿದ ಮಕ್ಕಳ ಅಪಹರಣದ ಸುಳ್ಳು ಸಂದೇಶವನ್ನು ನಂಬಿ ಆಕೆಯ ಮೇಲೆ ಅನುಮಾನ ವ್ಯಕ್ತಪಡಿಸಿ ಗುಂಪು ಹಲ್ಲೆ ನಡೆಸಿದ್ದಾರೆ.

ಪೊಲೀಸ್ ಆಯುಕ್ತರ ಸ್ಪಷ್ಟನೆ
ನಗರ ಪೊಲೀಸ್ ಆಯುಕ್ತರು ಸ್ಪಷ್ಟಪಡಿಸಿ,
“ಹಲ್ಲೆಗೆ ಒಳಗಾದ ಮಹಿಳೆ ಮಕ್ಕಳ ಕಳ್ಳಿ ಅಲ್ಲ. ಯಾವುದೇ ಅಪಹರಣ ಪ್ರಕರಣದಲ್ಲಿ ಆಕೆಯ ಭಾಗವಹಿಸುವಿಕೆ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಸುಳ್ಳು ಮಾಹಿತಿಯೇ ಗೊಂದಲಕ್ಕೆ ಕಾರಣ,” ಎಂದು ತಿಳಿಸಿದ್ದಾರೆ.
ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಸಿದ್ದಾರೆ.

Oplus_16908288

ಸುಳ್ಳು ಸುದ್ದಿಗಳ ಭೀತಿ
ಕೆಲ ದಿನಗಳಿಂದ ವಾಟ್ಸಪ್ ಗುಂಪುಗಳಲ್ಲಿ ಮಕ್ಕಳ ಅಪಹರಣದ ಎಚ್ಚರಿಕೆ ಸಂದೇಶಗಳು ಹರಿದಾಡುತ್ತಿದ್ದವು. ಯಾವುದೇ ದೃಢ ಮಾಹಿತಿ ಇಲ್ಲದೇ ಜನರು ಗುಂಪುಗೂಡಿ ಸ್ವಯಂ ನ್ಯಾಯ ಕೈಗೆತ್ತಿಕೊಂಡಿರುವುದು ಆತಂಕಕಾರಿ ಬೆಳವಣಿಗೆ.
ಪರಿಶೀಲಿಸದ ಮಾಹಿತಿಯನ್ನು ಹಂಚಿಕೊಳ್ಳುವುದು ಮತ್ತು ಅದನ್ನು ನಂಬಿ ತಕ್ಷಣ ಪ್ರತಿಕ್ರಿಯಿಸುವುದು ಸಮಾಜಕ್ಕೆ ಅಪಾಯಕಾರಿ ಎಂಬುದನ್ನು ಗಾಂಧಿನಗರ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.

ಕಾನೂನು ವ್ಯವಸ್ಥೆ ಇರುವ ರಾಜ್ಯದಲ್ಲಿ ಅಪವಾದದ ಆಧಾರದಲ್ಲಿ ವ್ಯಕ್ತಿಯನ್ನೇ ಶಿಕ್ಷಿಸುವ ಪ್ರವೃತ್ತಿ ಎಷ್ಟು ನ್ಯಾಯಸಮ್ಮತ?
“ಸತ್ಯಕ್ಕಿಂತ ವೇಗವಾಗಿ ಹರಡುವುದು ಅಪವಾದ” ಎಂಬ ಕಹಿ ವಾಸ್ತವವನ್ನು ಬೆಳಗಾವಿಯ ಈ ಘಟನೆ ಮತ್ತೆ ನೆನಪಿಸಿದೆ.

Leave a Reply

Your email address will not be published. Required fields are marked *

error: Content is protected !!