Headlines

ವಾರ್ಡ್ 43ಕ್ಕೆ 24×7 ನೀರು: ದಶಕದ ಕನಸು ಸಾಕಾರ

Oplus_16908288

ಬೆಳಗಾವಿ, ಮಾ.13:
ದಶಕಕ್ಕೂ ಹೆಚ್ಚು ಕಾಲದ ನಿರೀಕ್ಷೆಯ ನಂತರ ಬೆಳಗಾವಿ ದಕ್ಷಿಣ ಕ್ಷೇತ್ರದ ವಾರ್ಡ್ ನಂ.43ರಲ್ಲಿ ನಿರಂತರ (24×7) ಕುಡಿಯುವ ನೀರು ಪೂರೈಕೆ ಯೋಜನೆಗೆ ಚಾಲನೆ ದೊರೆತಿದೆ.

ಹಲವು ಹಂತಗಳಲ್ಲಿ ಅಡೆತಡೆಗಳನ್ನು ಎದುರಿಸಿದ ಈ ಯೋಜನೆ ಇದೀಗ ಕಾರ್ಯರೂಪಕ್ಕೆ ಬಂದಿರುವುದು ಸ್ಥಳೀಯರಿಗೆ ದೊಡ್ಡ ನಿರಾಳತೆಯನ್ನು ತಂದಿದೆ.
ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಅಭಯ ಪಾಟೀಲ, “ಅಭಿವೃದ್ಧಿ ಎನ್ನುವುದು ಜಾತಿ, ಮತ, ಪಂಥ ಅಥವಾ ರಾಜಕೀಯ ಲಾಭದ ವಿಷಯವಲ್ಲ. ಜನರ ಬದುಕಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ನಮ್ಮ ಹೊಣೆ,” ಎಂದು ಹೇಳಿದರು.

2017ರಲ್ಲಿ ಸುಮಾರು ₹240 ಕೋಟಿ ಮೌಲ್ಯದ ನಿರಂತರ ನೀರು ಪೂರೈಕೆ ಯೋಜನೆ ಬೆಳಗಾವಿಗೆ ಮಂಜೂರಾಗಿದ್ದರೂ, ವಿವಿಧ ಆಡಳಿತಾತ್ಮಕ ಹಾಗೂ ರಾಜಕೀಯ ಕಾರಣಗಳಿಂದ ಯೋಜನೆ ಸ್ಥಗಿತಗೊಂಡಿತ್ತು. ನಂತರ ಹಣವೂ ಕೇಂದ್ರಕ್ಕೆ ಮರಳಿತ್ತು.

2018ರಲ್ಲಿ ಶಾಸಕನಾಗಿ ಆಯ್ಕೆಯಾದ ಬಳಿಕ ದೆಹಲಿಯಲ್ಲಿ ಹಲವು ಹಂತಗಳಲ್ಲಿ ಪ್ರಯತ್ನ ನಡೆಸಿ ಯೋಜನೆಯನ್ನು ಮತ್ತೆ ಬೆಳಗಾವಿಗೆ ತರಲು ಪ್ರಯತ್ನಿಸಲಾಯಿತು ಎಂದು ಅಭಯ ಪಾಟೀಲ ವಿವರಿಸಿದರು.

ಈ ಪ್ರಕ್ರಿಯೆಯಲ್ಲಿ ಕೇಂದ್ರದ ಮಾಜಿ ಸಚಿವ ಅನಂತಕುಮಾರ ಅವರ ಸಹಕಾರ ಮಹತ್ವದ್ದಾಗಿತ್ತು ಎಂದು ಅವರು ಹೇಳಿದರು.

ಈ ಯೋಜನೆಯಿಂದ ವಾರ್ಡ್ ನಂ.43ರ ನಿವಾಸಿಗಳಿಗೆ ದಿನದ 24 ಗಂಟೆಗಳ ಕಾಲ ಶುದ್ಧ ಕುಡಿಯುವ ನೀರು ದೊರೆಯುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಹಲವು ವರ್ಷಗಳಿಂದ ಎದುರಾಗುತ್ತಿದ್ದ ನೀರಿನ ಸಮಸ್ಯೆಗೆ ಇದರಿಂದ ಶಾಶ್ವತ ಪರಿಹಾರ ಸಿಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

Oplus_16908288

ಮಹಾಪೌರ ಮಂಗೇಶ್ ಪವಾರ ಮಾತನಾಡಿ, ಶಾಸಕ ಅಭಯ ಪಾಟೀಲ ಅವರ ನಿರಂತರ ಪ್ರಯತ್ನದಿಂದ ಈ ಯೋಜನೆ ಸಾಧ್ಯವಾಗಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಯೋಜನೆ ಮರುಜಾರಿಗೆ ತಂದಿರುವುದು ಗಮನಾರ್ಹ ಎಂದರು.
ಉಪಮಹಾಪೌರ ವಾಣಿ ವಿಲಾಸ ಜೋಶಿ ಮಾತನಾಡಿ, “ಈ ಭಾಗದಲ್ಲಿ ನೀರಿನ ಸಮಸ್ಯೆ ಬಹಳ ವರ್ಷಗಳಿಂದ ನಾಗರಿಕರನ್ನು ಕಾಡುತ್ತಿತ್ತು. ಇದೀಗ 24×7 ನೀರು ಪೂರೈಕೆ ವ್ಯವಸ್ಥೆ ಜಾರಿಯಾಗಿರುವುದು ಜನರಿಗೆ ದೊಡ್ಡ ನಿರಾಳತೆ ತಂದಿದೆ,” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅರುಣ ಗೌಳಿ, ನಾಯಿಕ, ಕುಲಕರ್ಣಿ, ದೇಶಪಾಂಡೆ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.

ಮತದ ತೀರ್ಮಾನದಿಂದ 10 ವರ್ಷದ ವಿಳಂಬ?
ಯೋಜನೆಗೆ ಸಂಬಂಧಿಸಿದಂತೆ ಮಾತನಾಡಿದ ಶಾಸಕ ಅಭಯ ಪಾಟೀಲ, 2012ರಲ್ಲೇ ಕಾಮಗಾರಿ ಆರಂಭವಾಗಬೇಕಾಗಿದ್ದರೂ ರಾಜಕೀಯ ಬೆಳವಣಿಗೆಗಳಿಂದ ಅದು ಮುಂದೂಡಲ್ಪಟ್ಟಿತು ಎಂದು ಹೇಳಿದರು.
2013ರ ಚುನಾವಣೆಯ ನಂತರ ಯೋಜನೆಗೆ ಅಗತ್ಯವಾದ ಪ್ರಗತಿ ಕಾಣದೆ ಯೋಜನೆಯ ಹಣವೇ ಕೇಂದ್ರಕ್ಕೆ ವಾಪಸ್ ಹೋಗಿತ್ತು. ಪರಿಣಾಮವಾಗಿ ಈ ಯೋಜನೆ ಜಾರಿಗೆ ಬರಲು ಸುಮಾರು ಹತ್ತು ವರ್ಷಗಳ ಕಾಲ ಕಾಯಬೇಕಾಯಿತು ಎಂದು ಅವರು ಹೇಳಿದರು.

■ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಎಚ್ಚರಿಕೆ
ದಕ್ಷಿಣ ಕ್ಷೇತ್ರದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಬಗ್ಗೆ ಜನರು ಎಚ್ಚರಿಕೆಯಿಂದಿರಬೇಕು ಎಂದು ಶಾಸಕ ಅಭಯ ಪಾಟೀಲ ಮನವಿ ಮಾಡಿದರು.
2002 ಮತ್ತು 2023ರ ದಾಖಲೆಗಳ ಹೊಂದಾಣಿಕೆ ಇಲ್ಲದಿದ್ದರೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ 15 ದಿನಗಳೊಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಪರಿಶೀಲನೆ ಮಾಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

Leave a Reply

Your email address will not be published. Required fields are marked *

error: Content is protected !!