ಇಲ್ಲಿ ಅಹಿಂದ ವರ್ಸಿಸ್ ಹಿಂದೂ ಕದನ…

ಬಾಗಲಕೋಟ ಉಪಚುನಾವಣೆ:

ರಾಜಕೀಯ ಕಣ ತೀವ್ರಗತಿ

ಎಪ್ರಿಲ್ 9 ಮತದಾನ; ಇಂದಿನಿಂದಲೇ ನೀತಿ ಸಂಹಿತೆ ಜಾರಿ –

ಚುನಾವಣೆ ತಂತ್ರ ಶುರು.

ಕಾಂಗ್ರೆಸ್ ಗೆ ಅನುಕಂಪ ‘ಕೈ’ ಹಿಡಿಯುತ್ತಾ ಅಥವಾ ‘ಕೈ’ ಕೊಡುತ್ತಾ?

ಆ ಗಲಾಟೆಯೇ ಕಾಂಗ್ರೆಸ್ ಗೆ ‘ಕೈ’ ಕೊಡುವ ಸಾಧ್ಯತೆ ಹೆಚ್ಚು.

ebelagavi SPL Report

ಬಾಗಲಕೋಟ.
ಬಾಗಲಕೋಟ ವಿಧಾನಸಭೆ ಕ್ಷೇತ್ರದ ಉಪಚುನಾವಣೆ ಇದೀಗ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಚುನಾವಣಾ ಆಯೋಗ ಎಪ್ರಿಲ್ 9 ರಂದು ಮತದಾನ ನಿಗದಿ ಮಾಡಿದ್ದು, ಇಂದಿನಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಈಗಾಗಲೇ ತಮ್ಮ ಚುನಾವಣಾ ತಂತ್ರಗಳನ್ನು ಚುರುಕುಗೊಳಿಸುತ್ತಿವೆ.

ಆರಂಭದಲ್ಲಿ ಅನುಕಂಪ ಅಲೆ ಕಾಂಗ್ರೆಸ್‌ಗೆ ಸಹಕಾರಿಯಾಗಬಹುದು ಎಂಬ ಲೆಕ್ಕಾಚಾರ ಕೇಳಿಬಂದಿದೆ.
ಆದರೆ ಈಗ ಈ ಚುನಾವಣೆ ‘ಅಹಿಂದ’ ವಿರುದ್ಧ ‘ಹಿಂದು’ ಸಮೀಕರಣದ ರಾಜಕೀಯ ಪೈಪೋಟಿಯಾಗಿ ರೂಪುಗೊಳ್ಳುವ ಸಾಧ್ಯತೆಗಳ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ಜೋರಾಗಿದೆ.

ದಿ. H Y meti.

ಇತ್ತೀಚೆಗೆ ಬಾಗಲಕೋಟೆಯಲ್ಲಿ ಪ್ರಾರ್ಥನಾ ಸ್ಥಳದ ಬಳಿ ಹಿಂದೂಗಳ ಮೆರವಣಿಗೆಯ ಮೇಲೆ ನಡೆದ ಕಲ್ಲು ತೂರಾಟದ ಘಟನೆ ರಾಜಕೀಯ ಚರ್ಚೆಗೆ ಕಾರಣವಾಗಿತ್ತು. ಅದರ ಪರಿಣಾಮ ಕಾಂಗ್ರೆಸ್ ಪಕ್ಷದ ಮೇಲೆ ಬೀಳಬಹುದೇ ಎಂಬ ಪ್ರಶ್ನೆ ಕೇಳಿಬರುತ್ತಿದೆ. ಈ ಘಟನೆ ಬಳಿಕ ಹಿಂದೂ ಮತದಾರರ ಮನೋಭಾವದಲ್ಲಿ ಬದಲಾವಣೆ ಉಂಟಾಗಬಹುದೇ ಎಂಬುದೂ ಗಮನ ಸೆಳೆಯುತ್ತಿದೆ.


ಇದರ ನಡುವೆ ಅನುಕಂಪ ಅಲೆ ಈ ಬಾರಿ ಅಷ್ಟಾಗಿ ಕೆಲಸ ಮಾಡುವುದಿಲ್ಲ ಎಂಬ ಅಭಿಪ್ರಾಯವೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ. ವಿಶೇಷವಾಗಿ ಲಿಂಗಾಯತ ಮತಗಳು ಕಾಂಗ್ರೆಸ್‌ನಿಂದ ದೂರ ಸರಿಯಬಹುದೆಂಬ ಭೀತಿ ಪಕ್ಷದೊಳಗೆ ಮೂಡಿರುವುದಾಗಿ ಮೂಲಗಳು ಹೇಳುತ್ತಿವೆ.
ಹೀಗಾಗಿ ಲಿಂಗಾಯತ ಮತಗಳನ್ನು ಒಗ್ಗೂಡಿಸಲು ಕಾಂಗ್ರೆಸ್ ನಾಯಕರು ಈಗಾಗಲೇ ತಂತ್ರ ರೂಪಿಸುವ ಕೆಲಸ ಆರಂಭಿಸಿರುವುದಾಗಿ ತಿಳಿದುಬರುತ್ತಿದೆ.

ಸಂಭವನೀಯ ಬಿಜೆಪಿ ಅಭ್ಯರ್ಥಿ ಚರಂತಿಮಠ

——–

ಯಾರಿಗೆ ಹೊಣೆ?
ಮೂಲಗಳ ಪ್ರಕಾರ, ಬಾಗಲಕೋಟ ಉಪಚುನಾವಣೆಯ ಹೊಣೆಯನ್ನು ಕಾಂಗ್ರೆಸ್ ನಾಯಕತ್ವ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರಿಗೆ ವಹಿಸುವ ಸಾಧ್ಯತೆಗಳಿವೆ. ಅಹಿಂದ ಮತದಾರರ ಮೇಲೆ ಅವರಿಗೆ ಇರುವ ಹಿಡಿತವೇ ಇದಕ್ಕೆ ಪ್ರಮುಖ ಕಾರಣ ಎಂದು ಕಾಂಗ್ರೆಸ್ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಇನ್ನೊಂದೆಡೆ ಬಿಜೆಪಿ ಕೂಡ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸುವ ಲಕ್ಷಣಗಳು ಕಾಣಿಸುತ್ತಿವೆ. ಮೂಲಗಳ ಪ್ರಕಾರ, ಬಾಗಲಕೋಟ ಉಪಚುನಾವಣೆಯ ಹೊಣೆಯನ್ನು ಬಿಜೆಪಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಅವರಿಗೆ ವಹಿಸುವ ಸಾಧ್ಯತೆ ಇದೆ ಎನ್ನುವ ಮಾಹಿತಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

ಒಟ್ಟಾರೆ ನೋಡಿದರೆ, ಬಾಗಲಕೋಟ ಉಪಚುನಾವಣೆ ಈಗ ಸಾಮಾಜಿಕ ಸಮೀಕರಣ, ಧಾರ್ಮಿಕ ಸಂವೇದನೆ ಮತ್ತು ರಾಜಕೀಯ ತಂತ್ರಗಳ ನಡುವಿನ ಸಂಕೀರ್ಣ ಪೈಪೋಟಿಯಾಗಿ ರೂಪುಗೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಪಕ್ಷಗಳು ತೆಗೆದುಕೊಳ್ಳುವ ಹೆಜ್ಜೆಗಳೇ ಈ ಚುನಾವಣಾ ಕಣದ ದಿಕ್ಕನ್ನು ನಿರ್ಧರಿಸಲಿದೆ.

Leave a Reply

Your email address will not be published. Required fields are marked *

error: Content is protected !!