ಬೆಳಗಾವಿ ಮಹಾನಗರ ಪಾಲಿಕೆ ರಾಜಕೀಯದಲ್ಲಿ ಹೊಸ ತಿರುವು

Oplus_19005440

ಮೇಯರ್ ಕುರ್ಚಿಗೆ ಪ್ರೀತಿ ಕಾಮಕರ–ದೀಪಾಲಿ ಟೋಪಗಿ ನಡುವೆ ಕದನ

ಉಪಮೇಯರ್ ಪಟ್ಟಕ್ಕೆ ಸಂತೋಷ ಪೇಡ್ನೇಕರಗೆ ಶಾಕ್? ಲಿಂಗಾಯತ ಲಾಬಿಯಿಂದ ಹನುಮಂತ ಕೊಂಗಾಲಿಗೆ ಚಾನ್ಸ್!


ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪಮೇಯರ್ ಚುನಾವಣೆಗೆ ಮುನ್ನ ಬಿಜೆಪಿ ವಲಯದಲ್ಲಿ ಕೊನೆ ಕ್ಷಣದ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ.

ಮೇಯರ್ ಹುದ್ದೆಗೆ ಪ್ರೀತಿ ಕಾಮಕರ ಮತ್ತು ದೀಪಾಲಿ ಟೋಪಗಿ ಹೆಸರುಗಳು ಮುಂಚೂಣಿಗೆ ಬಂದಿದ್ದು, ಕೋರ್ ಕಮಿಟಿ ಸಭೆಯಲ್ಲಿ ಈ ಎರಡೂ ಹೆಸರಿನ ಬಗ್ಗೆ ಗಂಭೀರ ಚರ್ಚೆ ನಡೆದಿರುವ ಮಾಹಿತಿ ಲಭ್ಯವಾಗಿದೆ.
ಇನ್ನೊಂದೆಡೆ, ಉಪಮೇಯರ್ ಹುದ್ದೆಯ ರೇಸಿನಲ್ಲಿ ಮೊದಲಿನಿಂದಲೂ ಪ್ರಮುಖ ಆಕಾಂಕ್ಷಿಯಾಗಿ ಕಾಣಿಸಿಕೊಂಡಿದ್ದ ಸಂತೋಷ ಪೇಡ್ನೇಕರ ಅವರ ಬದಲಿಗೆ ಇದೀಗ ಹೊಸ ಲೆಕ್ಕಾಚಾರ ಶುರುವಾಗಿದೆ.

ಪಕ್ಷದೊಳಗಿನ ಲಿಂಗಾಯತ ಲಾಬಿ ಚುರುಕುಗೊಂಡಿದ್ದು, ಹನುಮಂತ ಕೊಂಗಾಲಿ ಅವರಿಗೆ ಅವಕಾಶ ಕಲ್ಪಿಸುವ ದಿಶೆಯಲ್ಲಿ ಸಮಾಲೋಚನೆ ನಡೆದಿದೆ ಎನ್ನಲಾಗಿದೆ.
ಈ ಮಹತ್ವದ ಚರ್ಚೆಗಳು ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ನಡೆದಿದ್ದು, ಕೊನೆಯ ಕ್ಷಣದಲ್ಲಿ ಸಮೀಕರಣಗಳು ಬದಲಾಗುವ ಸಾಧ್ಯತೆಯೂ ದಟ್ಟವಾಗಿದೆ. ಮೇಯರ್ ಮತ್ತು ಉಪಮೇಯರ್ ಆಯ್ಕೆ ಕೇವಲ ಹುದ್ದೆಯ ಆಯ್ಕೆಯಾಗಿ ಉಳಿಯದೆ, ಸಮುದಾಯ, ವಲಯ ಹಾಗೂ ಒಳಪಕ್ಷೀಯ ಸಮತೋಲನದ ರಾಜಕೀಯ ಲೆಕ್ಕಾಚಾರಗಳ ಕೇಂದ್ರಬಿಂದುವಾಗುತ್ತಿದೆ.
ಪಕ್ಷದ ಅಂತಿಮ ತೀರ್ಮಾನ ಇನ್ನಷ್ಟೇ ಹೊರಬೀಳಬೇಕಿದ್ದರೂ, ಈಗಾಗಲೇ ಪ್ರೀತಿ ಕಾಮಕರ–ದೀಪಾಲಿ ಟೋಪಗಿ ನಡುವಿನ ಪೈಪೋಟಿ ಮತ್ತು ಹನುಮಂತ ಕೊಂಗಾಲಿ ಹೆಸರಿನ ಅಚ್ಚರಿ ಎಂಟ್ರಿ ಬಿಜೆಪಿ ಪಾಳಯದಲ್ಲಿ ಹೊಸ ಸಂಚಲನ ಮೂಡಿಸಿದೆ.
ಒಟ್ಟಿನಲ್ಲಿ, ಬೆಳಗಾವಿ ಪಾಲಿಕೆ ಚುನಾವಣೆಗೆ ಮುನ್ನ ರಾಜಕೀಯ ಪಟದಲ್ಲಿ ಕ್ಷಣಕ್ಷಣಕ್ಕೂ ಹೊಸ ಸಮೀಕರಣಗಳು ಬರೆಯಲ್ಪಡುತ್ತಿವೆ.

Leave a Reply

Your email address will not be published. Required fields are marked *

error: Content is protected !!