
ಮೇಯರ್–ಉಪಮೇಯರ್ ಎರಡೂ ಹುದ್ದೆಗಳಿಗೂ ಈ ಬಾರಿ ಕನ್ನಡಿಗರೇ ಆಯ್ಕೆ
ಬೆಳಗಾವಿ,
ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಆಗಿ ಪ್ರೀತಿ ವಿನಾಯಕ ಕಾಮಕರ ಆಯ್ಕೆಯಾಗಿರುವುದು ಸ್ಥಳೀಯ ರಾಜಕೀಯದಲ್ಲಿ ವಿಶೇಷ ಗಮನ ಸೆಳೆದಿದೆ. ಅದರಲ್ಲೂ ಈ ಬಾರಿ ಮೇಯರ್ ಮತ್ತು ಉಪಮೇಯರ್ ಎರಡೂ ಹುದ್ದೆಗಳಿಗೂ ಕನ್ನಡಿಗರೇ ಆಯ್ಕೆಯಾಗಿರುವುದು ವಿಶೇಷವಾಗಿ ಚರ್ಚೆಗೆ ಗ್ರಾಸವಾಗಿದೆ.

ಗಡಿನಾಡಿನ ರಾಜಕೀಯ ಸನ್ನಿವೇಶದಲ್ಲಿ ಈ ಬೆಳವಣಿಗೆಗೆ ಸಾಮಾಜಿಕ ಮತ್ತು ಭಾಷಾತ್ಮಕ ಅರ್ಥವೂ ಇದೆ
ಮೇಯರ್ ಹುದ್ದೆಗೆ ದೇವಾಂಗ ಸಮಾಜದ ಪ್ರೀತಿ ಕಾಮಕರ ಆಯ್ಕೆಯಾಗಿರುವುದು, ದಕ್ಷಿಣ ಶಾಸಕ ಅಭಯ ಪಾಟೀಲ ಕೊಟ್ಟ ಮಾತು ಉಳಿಸಿಕೊಂಡರು ಎನ್ನುವ ಅಭಿಪ್ರಾಯಕ್ಕೆ ಬಲ ನೀಡಿದೆ.

ಕೆಲವು ತಿಂಗಳುಗಳ ಹಿಂದೆ ದೇವಾಂಗ ಸಮಾಜದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ಮುಂದಿನ ಅವಧಿಯಲ್ಲಿ ನೇಕಾರ ಸಮುದಾಯಕ್ಕೆ ಮೇಯರ್ ಸ್ಥಾನಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ್ದರು. ಈಗ ಆ ಮಾತು ನೈಜ ರಾಜಕೀಯ ನಿರ್ಧಾರವಾಗಿ ರೂಪುಗೊಂಡಿದೆ.
ಪಕ್ಷದ ಒಳಚರ್ಚೆಗಳಲ್ಲಿ ಹಲವು ಹೆಸರುಗಳು ಕೇಳಿಬಂದಿದ್ದರೂ, ಅಂತಿಮವಾಗಿ ಸಾಮಾಜಿಕ ಪ್ರಾತಿನಿಧ್ಯ, ಸ್ಥಳೀಯ ಸಮತೋಲನ ಮತ್ತು ರಾಜಕೀಯ ಬದ್ಧತೆ ಈ ಆಯ್ಕೆಯಲ್ಲಿ ಪ್ರತಿಫಲಿಸಿದಂತಾಗಿದೆ.

ದೇವಾಂಗ ಸಮಾಜದ ಮಹಿಳೆಗೆ ಮೇಯರ್ ಪಟ್ಟ ಒಲಿದಿರುವುದು ಸಮುದಾಯದ ಮಟ್ಟದಲ್ಲೂ ಸಂತಸ ಮೂಡಿಸಿದೆ.
ಇದಲ್ಲದೆ, ಉಪಮೇಯರ್ರ್ ಹನುಮಂತ ಕೊಂಗಾಲಿ ಅವರ ಹುದ್ದೆಯೂ ಕನ್ನಡಿಗರ ಪಾಲಾಗಿರುವುದು ಈ ಬಾರಿಯ ಆಯ್ಕೆಗೆ ಮತ್ತಷ್ಟು ರಾಜಕೀಯ ಮಹತ್ವ ತಂದಿದೆ. ಗಡಿಭಾಗದ ನಗರ ರಾಜಕೀಯದಲ್ಲಿ ಭಾಷಾ ಸಂವೇದನೆ ಸದಾ ಪ್ರಾಮುಖ್ಯ ಪಡೆದಿರುವ ಬೆಳವಣಿಗೆಯಲ್ಲಿ, ಎರಡೂ ಪ್ರಮುಖ ಹುದ್ದೆಗಳಿಗೂ ಕನ್ನಡಿಗರೇ ಆಯ್ಕೆಯಾಗಿರುವುದು ಬಿಜೆಪಿ ಪಾಳಯಕ್ಕೆ ಪ್ರತ್ಯೇಕ ಸಂದೇಶ ನೀಡಿದಂತಾಗಿದೆ.

ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ವಿವಿಧ ಸಮುದಾಯಗಳಿಗೆ ಸಮಾನ ಅವಕಾಶ ಕಲ್ಪಿಸುವ ನಿಲುವನ್ನು ಅಭಯ ಪಾಟೀಲ ಅನುಸರಿಸಿಕೊಂಡು ಬಂದಿದ್ದಾರೆ ಎನ್ನುವುದು ಸುಳ್ಳಲ್ಲ.. ಮೇಯರ್ ಆಯ್ಕೆಯಲ್ಲೂ ಅದೇ ಧೋರಣೆ ಮುಂದುವರಿದಿದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ, ಈ ಬಾರಿ ಮೇಯರ್, ಉಪಮೇಯರ್ ಆಯ್ಕೆ ಕೇವಲ ಹುದ್ದೆ ಹಂಚಿಕೆಯ ವಿಷಯವಾಗಿರದೆ, ಕೊಟ್ಟ ಮಾತು, ಸಮುದಾಯದ ಗೌರವ, ಕನ್ನಡಿಗರ ಪ್ರತಿನಿಧ್ಯ ಮತ್ತು ಸ್ಥಳೀಯ ನಾಯಕತ್ವದ ಪ್ರಭಾವ ಒಂದೇ ಸಂದರ್ಭದಲ್ಲಿ ಪ್ರತಿಫಲಿಸಿದ ಘಟನೆಯಾಗಿ ಗಮನಸೆಳೆದಿದೆ.


