ಮೋರೆ ಠರಾವ್ಗೆ ‘ಪ್ರೀತಿ’ ಪ್ರತ್ಯುತ್ತರ ಏನು?

ಏಕೆ ಈ ನಿರ್ಣಯ?.
2005ರ ಮಹಾರಾಷ್ಟ್ರ ಪರ ಗೊತ್ತುವಳಿಗೆ ಪ್ರತಿರೋಧದ ರಾಜಕೀಯ ಉತ್ತರ.
ಸುಪ್ರೀಂ ಕೋರ್ಟ್‌ಗೆ ಕರ್ನಾಟಕದ ಪರ ಸ್ಪಷ್ಟ ಸ್ಥಳೀಯ ಸಂದೇಶ.
“ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂಬ ಘೋಷಣೆಗೆ ಸಂಸ್ಥಾತ್ಮಕ ಬಲ.
ಕನ್ನಡಿಗರ ಭಾವನೆಗೆ ಪಾಲಿಕೆಯಿಂದ ಅಧಿಕೃತ ಮುದ್ರೆ

ಬೆಳಗಾವಿ ಪಾಲಿಕೆಯಲ್ಲಿ ಕನ್ನಡದ ಘೋಷಣೆ ಮೊಳಗಲಿ!
ಮಹಾಜನ ವರದಿಯೇ ಅಂತಿಮ’, ‘ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ’ ನಿರ್ಣಯಕ್ಕೆ ಒತ್ತಾಯ

ಬೆಳಗಾವಿ,
ಕರ್ನಾಟಕ–ಮಹಾರಾಷ್ಟ್ರ ಗಡಿವಿವಾದ ಮತ್ತೆ ತೀವ್ರ ಚರ್ಚೆಗೆ ಗ್ರಾಸವಾಗಿರುವ ಹೊತ್ತಿನಲ್ಲಿ, ಬೆಳಗಾವಿ ಮಹಾನಗರ ಪಾಲಿಕೆಯ ಸರ್ವಸಾಧಾರಣ ಸಭೆಯಲ್ಲೇ ಕರ್ನಾಟಕ ಪರ ಘನ ನಿರ್ಣಯ ಕೈಗೊಳ್ಳಬೇಕು ಎಂಬ ಒತ್ತಾಯ ಗಟ್ಟಿಯಾಗಿ ಕೇಳಿಬಂದಿದೆ. ನೂತನ ಮಹಾಪೌರರಾದ ಪ್ರೀತಿ ಕಾಮಕರ ಮತ್ತು ಉಪಮಹಾಪೌರ ಹನುಮಂತ ಕೊಂಗಾಲಿ ಅವರನ್ನು ಗುರುವಾರ ಮುಂಜಾನೆ ಭೇಟಿ ಮಾಡಿದ 20ಕ್ಕೂ ಅಧಿಕ ಕನ್ನಡ ಸಂಘಟನೆಗಳ ಮುಖಂಡರು, “ಕರ್ನಾಟಕ–ಮಹಾರಾಷ್ಟ್ರ ಗಡಿವಿವಾದ ಪರಿಹಾರಕ್ಕೆ ಮಹಾಜನ ವರದಿಯೇ ಅಂತಿಮ” ಹಾಗೂ “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂಬ ನಿರ್ಣಯಗಳನ್ನು ತಕ್ಷಣ ಅಂಗೀಕರಿಸಬೇಕೆಂದು ಆಗ್ರಹಿಸಿದರು.

ಮಹಾಪೌರರಾಗಿ ಪ್ರೀತಿ ಕಾಮಕರ ಮತ್ತು ಉಪಮಹಾಪೌರರಾಗಿ ಹನುಮಂತ ಕೊಂಗಾಲಿ ಇತ್ತೀಚೆಗೆ ಆಯ್ಕೆಯಾಗಿದ್ದಾರೆ.
ಈ ಒತ್ತಾಯದ ಹಿಂದೆ ಗಂಭೀರ ಕಾನೂನು ಮತ್ತು ರಾಜಕೀಯ ಹಿನ್ನಲೆ ಇದೆ ಎಂಬುದನ್ನು ಕನ್ನಡ ಸಂಘಟನೆಗಳು ಸ್ಪಷ್ಟಪಡಿಸಿವೆ. 2005ರ ಅಕ್ಟೋಬರ್ 27ರಂದು ಬೆಳಗಾವಿ ಪಾಲಿಕೆಯಲ್ಲಿ ಬಹುಮತದಿಂದ ಅಂಗೀಕರಿಸಲಾದ ಮಹಾರಾಷ್ಟ್ರ ಪರ ಗೊತ್ತುವಳಿ, ಮಹಾರಾಷ್ಟ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ದಾಖಲಿಸಿರುವ ತನ್ನ ದಾವೆಗೆ ಪೂರಕ ದಾಖಲೆಯಾಗಿ ಬಳಸಿಕೊಂಡಿರುವ ಆರೋಪದ ನಡುವೆ, ಅದಕ್ಕೆ ಸಮರ್ಪಕ ಪ್ರತಿಕ್ರಿಯೆಯಾಗಿ ಈಗಿನ ಪಾಲಿಕೆ ಕರ್ನಾಟಕ ಪರ ಸರ್ವಾನುಮತದ ಸಂದೇಶ ರವಾನಿಸಬೇಕು ಎಂದು ಮುಖಂಡರು ಹೇಳಿದರು.

ಗಡಿಭಾಗದ ಗ್ರಾಮಗಳನ್ನು ಭಾಷಾ ಆಧಾರವಾಗಿ ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ಹಳೆಯ ರಾಜಕೀಯ ನಿಲುವಿಗೆ ಉತ್ತರವಾಗಿ, ಇಂದಿನ ಪಾಲಿಕೆ ಸ್ಪಷ್ಟ ಕನ್ನಡಪರ ನಿಲುವು ಘೋಷಿಸಬೇಕಾದ ಕ್ಷಣ ಇದು ಎಂದು ಅವರು ಹೇಳಿದರು. ಗಡಿವಿವಾದದಲ್ಲಿ ಮಹಾಜನ ಆಯೋಗದ ವರದಿ ಬೆಳಗಾವಿಯನ್ನು ಕರ್ನಾಟಕದ ಭಾಗವೆಂದೇ ಪರಿಗಣಿಸಿರುವುದು ಹಳೆಯ ಹಾಗೂ ಪ್ರಮುಖ ಉಲ್ಲೇಖಗಳಲ್ಲಿ ಕಾಣಿಸುತ್ತದೆ.

“ಈಗ ಪಾಲಿಕೆಯಲ್ಲಿ ಕರ್ನಾಟಕ ಪರ ಸದಸ್ಯರೇ ಬಹುಮತದಲ್ಲಿದ್ದಾರೆ. ಒಟ್ಟು 58 ಸದಸ್ಯರಲ್ಲಿ 55 ಸದಸ್ಯರು ನಮ್ಮವರೇ ಇದ್ದಾರೆ. ಮಹಾಪೌರರೂ, ಉಪಮಹಾಪೌರರೂ ಅಪ್ಪಟ ಕನ್ನಡಿಗರು. ಇದೇ ಸೂಕ್ತ ಸಮಯ. ಬೆಳಗಾವಿಯ ಹಿತಾಸಕ್ತಿಯನ್ನು ಸುಪ್ರೀಂ ಕೋರ್ಟ್‌ನಲ್ಲೂ ಬಲಪಡಿಸಬೇಕಾದರೆ, ಪಾಲಿಕೆಯಿಂದ ಕರ್ನಾಟಕ ಪರ ಅಧಿಕೃತ ನಿರ್ಣಯ ಹೊರಬರಲೇಬೇಕು,” ಎಂದು ಸಂಘಟನೆಗಳ ಪ್ರತಿನಿಧಿಗಳು ಅಭಿಪ್ರಾಯಪಟ್ಟರು.
ಕನ್ನಡ ಸಂಘಟನೆಗಳ ಈ ಮನವಿಗೆ ಮಹಾಪೌರ ಪ್ರೀತಿ ಕಾಮಕರ ಹಾಗೂ ಉಪಮಹಾಪೌರ ಹನುಮಂತ ಕೊಂಗಾಲಿ ಸಕಾರಾತ್ಮಕ ಸ್ಪಂದನೆ ನೀಡಿದ್ದು, ವಿಷಯದ ಕುರಿತು ಶೀಘ್ರ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಮುಖಂಡರು ತಿಳಿಸಿದರು.

ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ನೇತೃತ್ವದಲ್ಲಿ ನಡೆದ ಈ ಭೇಟಿ ಮತ್ತು ಚರ್ಚೆಯಲ್ಲಿ ಕಿತ್ತೂರು ಕರ್ನಾಟಕ ಸೇನೆಯ ರಾಜ್ಯಾಧ್ಯಕ್ಷ ಮಹಾದೇವ ತಳವಾರ, ನಾಮನಿರ್ದೇಶಿತ ಸದಸ್ಯ ರಮೇಶ ಸೊಂಟಕ್ಕಿ, ಸರ್ವೋದಯ ಸಂಘದ ಅಧ್ಯಕ್ಷ ಶ್ರೀನಿವಾಸ ತಾಳೂಕರ್, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ವಾಜಿದ ಹಿರೇಕೋಡಿ, ಗಡಿನಾಡು ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷ ಬಲರಾಮ ಮಾಸೇನಟ್ಟಿ, ಕನ್ನಡ ಹೋರಾಟಗಾರ ಹುಚ್ಚರೆಡ್ಡಿ ಶಿವರೆಡ್ಡಿ, ಮೈನೋದ್ದಿನ ಮಕಾನದಾರ, ಮಹೇಶ ಶೀಗಿಹಳ್ಳಿ, ಪ್ರೇಮ್ ಚೌಗುಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!