ಬೆಳಗಾವಿ
ನಗರ ಸೈಬರ್ ಅಪರಾಧ ಪೊಲೀಸರು ಭಾರೀ ಸೈಬರ್ ವಂಚನೆ ಜಾಲವನ್ನು ಭೇದಿಸಿದ್ದು, ಅಮಾಯಕ ಜನರ ಹೆಸರಲ್ಲಿ ತೆರೆದಿದ್ದ 72 ಬ್ಯಾಂಕ್ ಖಾತೆಗಳನ್ನು ‘ಮ್ಯೂಲ್ ಅಕೌಂಟ್’ಗಳಾಗಿ ಬಳಸಿ ₹1.27 ಕೋಟಿ ವಂಚನೆ ನಡೆಸಿರುವುದು ಪತ್ತೆಯಾಗಿದೆ.
‘ವರ್ಕ್ ಫ್ರಾಂ ಹೋಮ್’ ಉದ್ಯೋಗ, ಸರ್ಕಾರದ ಸಾಲ ಸೌಲಭ್ಯ ಕೊಡಿಸುತ್ತೇವೆ ಎಂದು ನಂಬಿಸಿ ಖಾತೆಗಳನ್ನು ತೆರೆಸಲಾಗುತ್ತಿತ್ತು. ಬಳಿಕ ಆ ಖಾತೆಗಳ ಮೂಲಕ ಮೋಸದ ಹಣ ವರ್ಗಾವಣೆ ಮಾಡಲಾಗುತ್ತಿತ್ತು. 22 ಫೆಬ್ರವರಿ 2026ರಂದು ದಾಖಲಾಗಿದ್ದ ಪ್ರಕರಣದ ತನಿಖೆಯಲ್ಲಿ ಈ ಜಾಲ ಬೆಳಕಿಗೆ ಬಂದಿದೆ.

ಪೊಲೀಸರು 22 ಮಾರ್ಚ್ ರಂದು ಮುಂಬೈನಲ್ಲಿ ಪ್ರಮುಖ ಆರೋಪಿ ಹೈದರಅಲಿ ಗುಲಾಮಅಲಿ ಉಜೈನವಾಲಾ ಅವರನ್ನು ವಶಕ್ಕೆ ಪಡೆದರೆ, 26 ಮಾರ್ಚ್ ರಂದು ಗೋವಾದಲ್ಲಿ ಮೆಘಾ ಮಾರಡೊಳಕರರನ್ನು ಬಂಧಿಸಿದ್ದಾರೆ. ಇಬ್ಬರೂ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ.

ತನಿಖೆಯಲ್ಲಿ 72 ಖಾತೆಗಳ ಪೈಕಿ 47 ಖಾತೆಗಳ ವಿರುದ್ಧವೇ 1930 ಹಾಗೂ ಎನ್ಸಿಸಿಆರ್ಪಿ ಪೋರ್ಟಲ್ನಲ್ಲಿ 144 ಪ್ರಕರಣಗಳು ದಾಖಲಾಗಿರುವುದು ಗೊತ್ತಾಗಿದೆ. ಇದೇ ಖಾತೆಗಳಲ್ಲಿ ₹1,27,04,678 ಮೊತ್ತದ ಹಣ ಜಮಾ ಆಗಿರುವುದು ಪತ್ತೆಯಾಗಿದೆ.
ಉದ್ಯೋಗ ಮತ್ತು ಸಾಲದ ಆಮಿಷದ ಮೂಲಕ ಸಾಮಾನ್ಯರ ಬ್ಯಾಂಕ್ ಖಾತೆಗಳನ್ನು ಅಪರಾಧ ಜಾಲದ ಸಾಧನವಾಗಿಸಿದ ಈ ಪ್ರಕರಣ, ಸೈಬರ್ ವಂಚಕರ ಹೊಸ ತಂತ್ರದ ಭಯಾನಕ ಮುಖವನ್ನು ಬಯಲಿಗೆಳೆದಿದೆ.

