ಮಹಾ ಪರ ಭಂಡರಿಗೆ ಬೆಳಗಾವಿಯ ಕನ್ನಡಿಗರು ಕೊಡುವ ಉತ್ತರ ಯಾವಾಗಲೂ ಕಠಿಣವೇ…!

ಎಂಇಎಸ್ ಮತ್ತೆ ಮಹಾ ಪರ ಠರಾವ್ ಹೆಸರಿನಲ್ಲಿ ಉದ್ರೇಕದ ರಾಜಕಾರಣ

ವಿಜಯ ಮೋರೆ ಪ್ರಕರಣ ಇನ್ನೂ ಬೆಳಗಾವಿಯ ರಾಜಕೀಯ ನೆನಪಿನಲ್ಲಿ ಜೀವಂತ.

ಹಿಂದೆ ಸವಾಲು ಹಾಕಿದವರಿಗೆ ಇತಿಹಾಸವೇ ಉತ್ತರ ಕೊಟ್ಟಿದೆ.

ಈಗ ಮತ್ತೆ ಅದೇ ಆಟ ಆಡಿದರೆ ಕನ್ನಡಿಗರ ಮನಸ್ಸೇ ಅಂತಿಮ ತೀರ್ಪು ನೀಡಲಿದೆ.

ಬೆಳಗಾವಿ:
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮತ್ತೆ ಎಂಇಎಸ್ ನಗರಸೇವಕರಿಂದ ಕೇಳಿಬಂದಿರುವ ಮಹಾ ಪರ ಠರಾವ್ ಸವಾಲು ಸಾಮಾನ್ಯ ರಾಜಕೀಯ ಹೇಳಿಕೆ ಅಲ್ಲ.

ಅದು ಕನ್ನಡಿಗರ ಸಹನೆಯನ್ನು ಕೆಣಕುವ, ಬೆಳಗಾವಿಯ ಶಾಂತ ವಾತಾವರಣವನ್ನು ರಾಜಕೀಯ ಉದ್ವಿಗ್ನತೆಗೆ ತಳ್ಳುವ ಮತ್ತು ಹಳೆಯ ಗಾಯವನ್ನು ಮತ್ತೆ ಕೆದಕುವ ಭಂಡತನದ ರಾಜಕಾರಣ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಈಗ ಎಂಎನ್ ಎಸ್‌ನ ನಗರಸೇವಕ ರವಿ ಸಾಳುಂಕೆ, ವೈಶಾಲಿ ಭಾತಖಾಂಡೆ ಮತ್ತು ಶಿವಾಜಿ‌ ಮಂಡೋಲಕರ ಅವರು ಈ ಬಾರಿ ಹಿಂದೆ ಮೋರೆ ಮಾಡಿದ ತಪ್ಪನ್ನು‌ಮತ್ತೇ ಮಾಡಲು ಹೊರಟಿದ್ದಾರೆ.

“ನಗರಸೇವಕ ಸ್ಥಾನ ಹೋದರೂ ಪರವಾಗಿಲ್ಲ”, “ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸುವ ನಿರ್ಣಯ ತರುತ್ತೇವೆ” ಎಂಬ ಧ್ವನಿ ಜನಪ್ರತಿನಿಧಿಗಳ ಜವಾಬ್ದಾರಿಯ ಭಾಷೆಯಲ್ಲ; ಅದು ಎಂಇಎಸ್‌ನ ಹಳೆಯ ಹುಚ್ಚಾಟದ ಮತ್ತೊಂದು ಅವತಾರ.

ಆದರೆ ಎಂಇಎಸ್ ಮರೆತುಬಿಡುತ್ತಿರುವ ಸತ್ಯ ಒಂದೇ—ಈ ನೆಲ ಇಂತಹ ಸವಾಲುಗಳನ್ನು ಮೊಟ್ಟಮೊದಲ ಬಾರಿಗೆ ಕೇಳುತ್ತಿಲ್ಲ. ಹಿಂದೆ ವಿಜಯ ಮೋರೆ ಕಾಲದಲ್ಲಿಯೂ ಇದೇ ಧಾಟಿಯ ರಾಜಕೀಯ ನಡೆಯಿತು. ಪಾಲಿಕೆಯಲ್ಲಿ ಮಹಾ ಪರ ಠರಾವ್ ತೆಗೆದುಕೊಳ್ಳಲಾಯಿತು. “ತಾಕತ್ತು ಇದ್ದರೆ ಪಾಲಿಕೆ ಸೂಪರ್‌ಸೀಡ್ ಮಾಡಲಿ” ಎಂಬ ಸವಾಲಿನ ಧ್ವನಿಯೂ ಕೇಳಿಬಂತು. ಆದರೆ ಅಂತಿಮವಾಗಿ ಏನಾಯಿತು? ಆಡಳಿತ ತನ್ನ ಕಠಿಣ ಉತ್ತರ ಕೊಟ್ಟಿತು. ರಾಜಕೀಯ ದರ್ಪ ಎಷ್ಟು ಬೇಗ ಕುಸಿಯಬಹುದು ಎಂಬುದನ್ನು ಬೆಳಗಾವಿಯೇ ನೋಡಿತು. ಮುಖಕ್ಕೆ ಕಪ್ಪು ಮಸಿ ಬಳಿದ ಘಟನೆಗಳಿಂದ ಹಿಡಿದು ಬಂದ್ ರಾಜಕಾರಣದವರೆಗೆ ಎಂಇಎಸ್ ಸಾಕಷ್ಟು ನಾಟಕ ಮಾಡಿತು. ಆದರೆ ಕೊನೆಯಲ್ಲಿ ಕನ್ನಡಿಗರ ಆಕ್ರೋಶ, ಕಾನೂನು ಕ್ರಮ ಮತ್ತು ಚುನಾವಣಾ ರಾಜಕೀಯ—ಮೂರುಗೂ ಸೇರಿ ಇಂಥ ಸವಾಲುಗಳಿಗೆ ತಕ್ಕ ಪಾಠ ಕಲಿಸಿದ್ದವು.

ಇಂದು ಮತ್ತೆ ಅದೇ ದಾರಿಯಲ್ಲಿ ಎಂಇಎಸ್ ನಗರಸೇವಕರು ನಡೆಯುತ್ತಿರುವುದು, ಇತಿಹಾಸದಿಂದ ಪಾಠ ಕಲಿಯದ ರಾಜಕೀಯದ ಲಕ್ಷಣ. ಮಹಾನಗರಪಾಲಿಕೆ ಅಭಿವೃದ್ಧಿಯ ವೇದಿಕೆ. ಕುಡಿಯುವ ನೀರು, ರಸ್ತೆ, ಒಳಚರಂಡಿ, ತೆರಿಗೆ, ನಗರ ಯೋಜನೆ, ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾದ ಸ್ಥಳ. ಆದರೆ ಎಂಇಎಸ್‌ಗೆ ಇನ್ನೂ ಜನಜೀವನದ ಪ್ರಶ್ನೆಗಳಿಗಿಂತ ಗಡಿ ಪ್ರಶ್ನೆಯ ಹೆಸರಿನ ಪ್ರಚೋದನೆ ಮುಖ್ಯವಾಗಿರುವುದು ದುರಂತಕರ.
ಈಗ ಕಣ್ಣು ಎಲ್ಲವೂ ಮೇಯರ್ ಮತ್ತು ಉಪಮೇಯರ್ ಕಡೆಗೆ ತಿರುಗಿದೆ. ಈ ಸವಾಲಿಗೆ ಅವರು ನೀಡುವ ಉತ್ತರ ಕೇವಲ ಆಡಳಿತಾತ್ಮಕ ಕ್ರಮವಾಗಿರುವುದಿಲ್ಲ; ಅದು ಕನ್ನಡಿಗರ ಗೌರವದ ಬಗ್ಗೆ ಅವರ ನಿಲುವಿನ ಘೋಷಣೆಯಾಗಲಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಈ ವಿಷಯದಲ್ಲಿ ಮರಾಠಿ ಓಲೈಕೆಯ ರಾಜಕಾರಣ ಬಿಟ್ಟು, ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿಲುವನ್ನು ಸ್ಪಷ್ಟವಾಗಿ ಪ್ರತಿಪಾದಿಸಬೇಕು

Leave a Reply

Your email address will not be published. Required fields are marked *

error: Content is protected !!