ಸ್ವಚ್ಚತಾ ಕರ್ತವ್ಯದಲ್ಲೇ ಜೀವ ಬಲಿ

ಸ್ವಚ್ಚತಾ ಕರ್ತವ್ಯದಲ್ಲೇ ಜೀವ ಬಲಿ
ಅನಗೋಳ ನಾಕಾ ಬಳಿ ಪಾಲಿಕೆ ಪೌರಕಾರ್ಮಿಕಿ ಅವ್ವಕ್ಕ ಕೋಲಕಾರ ದುರ್ಮರಣ

ಡಿಕ್ಕಿ ಹೊಡೆದು ವಾಹನ ಸಮೇತ ಪರಾರಿಯಾಗಿದ್ದ ಚಾಲಕ; ಬಳಿಕ ಪೊಲೀಸ್ ವಶಕ್ಕೆ.

ಬೆಳಗಾವಿ: ನಗರದ ಸ್ವಚ್ಚತೆಗೆ ಮುಂಜಾನೆಲೇ ರಸ್ತೆಗಿಳಿದಿದ್ದ ಪಾಲಿಕೆ ಪೌರಕಾರ್ಮಿಕಿ ಅವ್ವಕ್ಕ ಕೋಲಕಾರ ಅವರು, ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲೇ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ದಾರುಣ ಘಟನೆ ಅನಗೋಳ ನಾಕಾ ಬಳಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಮಾಹಿತಿಯ ಪ್ರಕಾರ, ಅವ್ವಕ್ಕ ಕೋಲಕಾರ ಅವರು ಎಂದಿನಂತೆ ಬೆಳಿಗ್ಗೆ ಸ್ವಚ್ಚತಾ ಕಾರ್ಯದಲ್ಲಿ ನಿರತರಾಗಿದ್ದಾಗ ವೇಗವಾಗಿ ಬಂದ ವಾಹನ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ತಕ್ಷಣವೇ ಚಾಲಕ ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು.

ಕರ್ತವ್ಯದಲ್ಲಿದ್ದ ಮಹಿಳಾ ಪೌರಕಾರ್ಮಿಕಿಯೊಬ್ಬರು ಹೀಗೆ ಪ್ರಾಣ ಕಳೆದುಕೊಂಡಿರುವುದು ಪಾಲಿಕೆ ವಲಯದಲ್ಲೂ, ಸಾರ್ವಜನಿಕ ವಲಯದಲ್ಲೂ ತೀವ್ರ ದುಃಖಕ್ಕೆ ಕಾರಣವಾಗಿದೆ.
ಘಟನೆ z ಮಾಜಿ ಮೇಯರ್ ಮಂಗೇಶ ಪವಾರ, ಮಾಜಿ ಉಪಮೇಯರ್ ವಾಣಿ ಜೋಶಿ, ನಗರಸೇವಕರಾದ ಅಭಿಜಿತ ಜವಳಕರ, ಆನಂದ ಚವ್ಹಾಣ, ಸಾರಂಗ ಮುಂತಾದವತು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ಇದೇ ವೇಳೆ ಪಾಲಿಕೆ ಉಪ ಆಯುಕ್ತ ಉದಯ ತಳವಾದ ಹಾಗೂ ಪರಿಸರ ಅಭಿಯಂತ ಹನಮಂತ ಕಲಾದಗಿ ಸಹ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದರು.
ಅಪಘಾತದ ಬಳಿಕ ಪರಾರಿಯಾಗಿದ್ದ ವಾಹನ ಹಾಗೂ ಚಾಲಕನನ್ನು ಪೊಲೀಸರು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಚಾಲಕನ ನಿರ್ಲಕ್ಷ್ಯದ ಅಂಶಗಳ ಕುರಿತು ತನಿಖೆ ಮುಂದುವರಿಸಿದ್ದಾರೆ.
ನಗರವನ್ನು ಸ್ವಚ್ಚವಾಗಿಡಲು ತಮ್ಮ ಜೀವವನ್ನೇ ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರ ಸುರಕ್ಷತೆ ಮತ್ತೆ ಪ್ರಶ್ನೆಗೆ ಗುರಿಯಾಗಿದೆ.
ಅವ್ವಕ್ಕ ಕೋಲಕಾರ ಅವರ ಸಾವಿನ ಸುದ್ದಿ ಪಾಲಿಕೆ ಸಿಬ್ಬಂದಿಯಲ್ಲಿ ಶೋಕದ ಛಾಯೆ ಮೂಡಿಸಿದ್ದು, ಕರ್ತವ್ಯದಲ್ಲೇ ಪ್ರಾಣ ಕಳೆದುಕೊಂಡ ಈ ಘಟನೆ ನಗರ ಮನಸ್ಸನ್ನು ನೋವಿಗೆ ದೂಡಿದೆ.

Leave a Reply

Your email address will not be published. Required fields are marked *

error: Content is protected !!