ಪಂಚಮಸಾಲಿಗರಿಂದ ಕಾಂಗ್ರೆಸ್‌ಗೆ ಮಾಸ್ಟರ್ ಸ್ಟ್ರೋಕ್

ಬಾಗಲಕೋಟೆಯಲ್ಲಿ ಕಾಂಗ್ರೆಸ್ಗೆ ಭಾರೀ ಹೊಡೆತ

ಒಂದೇ ವೇದಿಕೆಯಲ್ಲಿ ಪ್ರಭಾವಿ ಪಂಚಮಸಾಲಿ ನಾಯಕರು; ಉಪಚುನಾವಣೆಗೆ ಹೊಸ ರಾಜಕೀಯ ಸಂದೇಶ.

ಯತ್ನಾಳ ಸಮ್ಮುಖದಲ್ಲಿ ಲಿಂಗಾಯತ ಏಕತೆ ಘೋಷಣೆ; ಕಾಂಗ್ರೆಸ್ ಲೆಕ್ಕಾಚಾರಕ್ಕೆ ಬಿಜೆಪಿ ಕೌಂಟರ್

ಒಳಪಂಗಡದ ಭಿನ್ನಮತ ಮರೆತು ಶಕ್ತಿ ಪ್ರದರ್ಶನ; ಮತಸಮೀಕರಣದ ಮೇಲೆ ಬಿಜೆಪಿ ಕಣ್ಣ್

ಬಾಗಲಕೋಟೆ ಸಭೆಯಲ್ಲಿ ಏಕತೆಯ ಅಸ್ತ್ರ ಪ್ರಯೋಗ; ಚುನಾವಣಾ ಕಣಕ್ಕೆ ಹೊಸ ತಿರುವು

ಪಂಚಮಸಾಲಿ ಸಮುದಾಯದ ಒಗ್ಗಟ್ಟಿನ ಪ್ರದರ್ಶನ; ಕಾಂಗ್ರೆಸ್‌ಗೆ ನೇರ ರಾಜಕೀಯ ಸವಾಲು.

ಬಾಗಲಕೋಟೆ.
ಉಪಚುನಾವಣೆಯ ರಾಜಕೀಯ ಸೆಣಸಾಟ ತೀವ್ರವಾಗುತ್ತಿರುವ ಹೊತ್ತಿನಲ್ಲಿ, ಬಾಗಲಕೋಟೆಯಲ್ಲಿ ಪಂಚಮಸಾಲಿ ಸಮುದಾಯದ ಪ್ರಭಾವಿ ನಾಯಕರನ್ನು ಒಂದೇ ವೇದಿಕೆಯಲ್ಲಿ ಕರೆತರುವ ಮೂಲಕ ಬಿಜೆಪಿ ಕಾಂಗ್ರೆಸ್‌ಗೆ ಸ್ಪಷ್ಟ ರಾಜಕೀಯ ಹೊಡೆತ ನೀಡಿದೆ.

ಕೇವಲ ಪ್ರಚಾರ ಸಭೆಯಷ್ಟೇ ಎಂದು ಭಾವಿಸಿದ್ದ ಕಾರ್ಯಕ್ರಮ, ಕೊನೆಯಲ್ಲಿ ಬಿಜೆಪಿಯ ಭರ್ಜರಿ ರಣತಂತ್ರದ ಶಕ್ತಿ ಪ್ರದರ್ಶನವಾಗಿ ಮಾರ್ಪಟ್ಟಿತು.
ವಿದ್ಯಾಗಿರಿಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನ ನೂತನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಮಾಜಿ ಸಚಿವರಾದ ಮುರುಗೇಶ ನಿರಾಣಿ, ಸಿ.ಸಿ. ಪಾಟೀಲ, ಕೆಎಲ್‌ಇ ಗೌರವ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಶಾಸಕರಾದ ಶರಣು ಸಲಗರ, ಸಿದ್ದು ಸವದಿ, ಎಂಎಲ್‌ಸಿ ಹಣಮಂತ ನಿರಾಣಿ ಸೇರಿದಂತೆ ಹಲವು ನಾಯಕರು ಹಾಜರಿದ್ದು, ‘ಒಳಪಂಗಡಗಳ ಜಗಳ ಬಿಟ್ಟು ಲಿಂಗಾಯತರು ಒಂದಾಗಬೇಕು’ ಎಂಬ ರಾಜಕೀಯ ಸಂದೇಶ ನೀಡಿದರು.
ಈ ಮೂಲಕ ಪಂಚಮಸಾಲಿ–ಲಿಂಗಾಯತ ಮತಸಮೀಕರಣವನ್ನು ಮತ್ತೊಮ್ಮೆ ಗಟ್ಟಿಗೊಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎನ್ನುವ ಅರ್ಥ ರಾಜಕೀಯ ವಲಯದಲ್ಲಿ ವ್ಯಕ್ತವಾಗಿದೆ.

ಸಭೆಯಲ್ಲಿ ಮಾತನಾಡಿದ ನಾಯಕರು, ನಿಜಲಿಂಗಪ್ಪ ಕಾಲದ ಲಿಂಗಾಯತ ರಾಜಕೀಯ ಬಲವನ್ನು ಉಲ್ಲೇಖಿಸಿ, ಒಳಪಂಗಡಗಳ ಭಿನ್ನಾಭಿಪ್ರಾಯವೇ ಸಮುದಾಯದ ಶಕ್ತಿಯನ್ನು ಕುಂದಿಸಿದೆ ಎಂದು ಅಭಿಪ್ರಾಯಪಟ್ಟರು.

ಯತ್ನಾಳ ತಮ್ಮ ಭಾಷಣದಲ್ಲಿ 2D ಮೀಸಲಾತಿ, ಹಿಂದೂತ್ವ ಮತ್ತು ಸಮುದಾಯದ ರಾಜಕೀಯ ಪ್ರತಿನಿಧಿತ್ವದ ವಿಚಾರಗಳನ್ನು ಮುಂದಿಟ್ಟು, ಪಂಚಮಸಾಲಿ ಸಮುದಾಯದ ರಾಜಕೀಯ ಏಕತೆಗೆ ಕರೆ ನೀಡಿದರು. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಕೂಡ ಇತ್ತೀಚಿನ ಘಟನೆಗಳ ಬಳಿಕ ಹಿಂದೂಗಳ ಒಗ್ಗಟ್ಟು ಹೆಚ್ಚಾಗಿದೆ ಎಂದು ಹೇಳುವ ಮೂಲಕ ಚುನಾವಣಾ ಕಣಕ್ಕೆ ಮತ್ತಷ್ಟು ಉಷ್ಣತೆ ತುಂಬಿದರು.

ಹಿಂದಿನ ವೈಮನಸ್ಸು ಮರೆತು ಪ್ರಭಾವಿ ನಾಯಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿರುವುದು, ಕೇವಲ ಕಾರ್ಯಕ್ರಮದ ವಿಶೇಷವಲ್ಲ; ಉಪಚುನಾವಣೆಯ ಹೊಸ್ತಿಲಲ್ಲಿ ಕಾಂಗ್ರೆಸ್ ಲೆಕ್ಕಾಚಾರ ಕೆಡಿಸಲು ಬಿಜೆಪಿ ಹಾಕಿದ ದೊಡ್ಡ ರಾಜಕೀಯ ಅರಂಭ ಎಂದೇ ವೀಕ್ಷಿಸಲಾಗುತ್ತಿದೆ.

Leave a Reply

Your email address will not be published. Required fields are marked *

error: Content is protected !!