ಇತಿಹಾಸದ ಅವಶೇಷಗಳಿಗೆ ಆಧ್ಯಾತ್ಮಿಕ ಪುನರ್ಜನ್ಮ
ಏಪ್ರಿಲ್ 12ರಿಂದ 14ರವರೆಗೆ ನಗರದ ವಿವಿಧ ದೇವಾಲಯಗಳಲ್ಲಿ ದರ್ಶನ, ಪೂಜೆ
ಕಾರ್ಯಕ್ರಮ ಎಲ್ಲೆಲ್ಲಿ? ಯಾವಾಗ?
ಏಪ್ರಿಲ್ 12 | ಸಂಜೆ 5:00 – 8:30
ಆರ್ಟ್ ಆಫ್ ಲಿವಿಂಗ್ ಹ್ಯಾಪಿನೆಸ್ ಸೆಂಟರ್, ಬೆಳಗಾವಿ
ಸೋಮನಾಥ ಪೂoje ಮತ್ತು ದರ್ಶನ
ಏಪ್ರಿಲ್ 13 | ಬೆಳಗ್ಗೆ 7:00 – 10:00
ಕಪಿಲೇಶ್ವರ ದೇವಸ್ಥಾನ, ಶಾಹಾಪುರ
ಸೋಮನಾಥ ಪೂoje ಮತ್ತು ದರ್ಶನ
ಏಪ್ರಿಲ್ 13 | ಸಂಜೆ 5:30 – 7:30
ಮಿಲಿಟರಿ ಶ್ರೀ ಮಹಾದೇವ ದೇವಸ್ಥಾನ
ಸೋಮನಾಥ ಪೂoje ಮತ್ತು ದರ್ಶನ.
ಏಪ್ರಿಲ್ 14 | ಬೆಳಗ್ಗೆ 9:30 – ಮಧ್ಯಾಹ್ನ 12:00
ಶಿವಾಲಯ, ರಾಮತೀರ್ಥ ನಗರ
ಸೋಮನಾಥ ದರ್ಶನ
ಬೆಳಗಾವಿ:
ಸಹಸ್ರ ವರ್ಷಗಳ ಇತಿಹಾಸದ ಗಾಯ, ಶತಮಾನಗಳ ಭಕ್ತಿ, ಸಂರಕ್ಷಣೆಯ ನಿಷ್ಠೆ ಮತ್ತು ಪುನಃ ಪ್ರತಿಷ್ಠಾಪನೆಯ ಸಂಕಲ್ಪ—ಈ ನಾಲ್ಕು ಭಾವಗಳ ಸಂಗಮವಾಗಿರುವ ಪವಿತ್ರ ಸೋಮನಾಥ ಜ್ಯೋತಿರ್ಲಿಂಗದ ಅವಶೇಷಗಳು ಇದೀಗ ಬೆಳಗಾವಿಯ ಭಕ್ತರಿಗೆ ದರ್ಶನ ನೀಡಲಿವೆ. ಏಪ್ರಿಲ್ 12ರಿಂದ 14ರವರೆಗೆ ನಗರದ ನಾಲ್ಕು ಪ್ರಮುಖ ಕೇಂದ್ರಗಳಲ್ಲಿ ಈ ಅಪರೂಪದ ದರ್ಶನ ಮತ್ತು ಪೂಜೆ ಕಾರ್ಯಕ್ರಮ ನಡೆಯಲಿದ್ದು, ಧಾರ್ಮಿಕ ವಲಯದಲ್ಲಿ ವಿಶೇಷ ಭಕ್ತಿಭಾವ ಮೂಡಿಸಿದೆ.
ಸನಾತನ ಧರ್ಮದ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಸೋಮನಾಥ, ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಪ್ರಥಮ ಸ್ಥಾನ ಹೊಂದಿದೆ. ಇತಿಹಾಸದಲ್ಲಿ ಅನೇಕ ಬಾರಿ ದಾಳಿಗೆ ಗುರಿಯಾದ ಈ ತೀರ್ಥಕ್ಷೇತ್ರವು, ವಿಶೇಷವಾಗಿ ಕ್ರಿ.ಶ. 1024ರಲ್ಲಿ ನಡೆದ ಘಜ್ನಿಯ ದಾಳಿಯಿಂದ ಭಾರೀ ಧ್ವಂಸಕ್ಕೊಳಗಾದ ಘಟನೆಯಿಂದ ಪ್ರಸಿದ್ಧವಾಗಿದೆ.

ಆದರೆ ದಾಳಿಯಿಂದ ದೇವಾಲಯ ಕುಸಿದರೂ, ಭಕ್ತಿಯ ಶಕ್ತಿ ಕುಸಿಯಲಿಲ್ಲ. ಪವಿತ್ರ ಜ್ಯೋತಿರ್ಲಿಂಗದ ಅವಶೇಷಗಳು ಅಗ್ನಿಹೋತ್ರಿ ಪರಂಪರೆಯ ಮೂಲಕ ಪೀಳಿಗೆಯಿಂದ ಪೀಳಿಗೆಗೂ ರಹಸ್ಯವಾಗಿ ಸಂರಕ್ಷಿಸಲ್ಪಟ್ಟು ಪೂಜಿಸಲ್ಪಟ್ಟವು ಎಂಬ ವಿಚಾರ ಈಗ ಮತ್ತೆ ಗಮನ ಸೆಳೆಯುತ್ತಿದೆ.
ಈ ಪವಿತ್ರ ಅವಶೇಷಗಳನ್ನು ಸಂರಕ್ಷಿಸಿಕೊಂಡು ಬಂದ ಪರಂಪರೆಯ ಪ್ರಮುಖ ವ್ಯಕ್ತಿಗಳಾದ ಶ್ರೀ ಸೀತಾರಾಮ ಶಾಸ್ತ್ರಿಗಳು, ಇತ್ತೀಚೆಗೆ ಈ ಅವಶೇಷಗಳನ್ನು ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರಿಗೆ ಹಸ್ತಾಂತರಿಸಿದ್ದಾರೆ. ಶಾಸ್ತ್ರಿಗಳು 21 ವರ್ಷಗಳ ಕಾಲ ಈ ಪವಿತ್ರ ತುಂಡುಗಳನ್ನು ಕಾಪಾಡಿಕೊಂಡಿದ್ದರೆ, ಅವರ ಮಾವನವರು 60 ವರ್ಷಗಳಿಗಿಂತ ಹೆಚ್ಚು ಕಾಲ ಆರಾಧನೆ ನಡೆಸಿದ್ದರು ಎನ್ನಲಾಗಿದೆ. ಮೂಲತಃ ಈ ಅವಶೇಷಗಳು ಅವರ ಗುರು ಪ್ರವೇಂದ್ರ ಸರಸ್ವತಿ ಅವರಿಂದ ಬಂದಿದ್ದವು ಎಂಬ ವಿವರ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಪವಿತ್ರ ಸಂರಕ್ಷಣಾ ಪಯಣವು 1924ರಲ್ಲಿ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿತು. ಆಗ ಅವಶೇಷಗಳನ್ನು ಕಾಂಚಿ ಕಾಮಕೋಟಿ ಪೀಠದ ಪೂಜ್ಯ ಶ್ರೀ ಜಯೇಂದ್ರ ಸರಸ್ವತಿ ಅವರಿಗೆ ಒಪ್ಪಿಸಲಾಗಿದ್ದು, ಸೂಕ್ತ ಸಮಯದಲ್ಲಿ ಸೋಮನಾಥದಲ್ಲಿ ಪುನಃ ಪ್ರತಿಷ್ಠಾಪನೆಗೊಳಿಸಬೇಕೆಂಬ ಆಧ್ಯಾತ್ಮಿಕ ಆಶಯ ವ್ಯಕ್ತವಾಗಿತ್ತು ಎನ್ನಲಾಗಿದೆ. ಇದೀಗ ಆ ಪರಂಪರೆಯನ್ನು ಮುಂದುವರಿಸುತ್ತಾ ಗುರುದೇವ ಶ್ರೀ ಶ್ರೀ ರವಿಶಂಕರ್ ಅವರು ಈ ಪವಿತ್ರ ಶಿವಲಿಂಗದ ಅವಶೇಷಗಳನ್ನು ದೇಶದಾದ್ಯಂತ ಭಕ್ತರಿಗೆ ದರ್ಶನಕ್ಕೆ ಕರೆದೊಯ್ಯುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.

