ಕ್ರೀಡಾಂಗಣ ಅಭಿವೃದ್ಧಿಗೆ ಎಸಿಸಿ ಸದಸ್ಯ ಅಶೀಷ್ ಶೆಲಾರ್‌ಗೆ ಶಾಸಕ ಅಭಯ ಪಾಟೀಲ ಪತ್ರ

ಅಂತಾರಾಷ್ಟ್ರೀಯ ಪಂದ್ಯಗಳಿಗೆ ಬೆಳಗಾವಿ ಸಿದ್ಧ; ₹20 ಕೋಟಿ ಮೂಲಸೌಕರ್ಯ ಬಾಕಿ.

ಕ್ರೀಡಾಂಗಣ ಅಭಿವೃದ್ಧಿಗೆ ಎಸಿಸಿ ಸದಸ್ಯ ಅಶೀಷ್ ಶೆಲಾರ್‌ಗೆ ಶಾಸಕ ಅಭಯ ಪಾಟೀಲ ಪತ್ರ
ಬೆಳಗಾವಿ:
ಹತ್ತು ವರ್ಷಕ್ಕೂ ಹೆಚ್ಚು ಕಾಲದಿಂದ ಕಾರ್ಯನಿರ್ವಹಿಸುತ್ತಿರುವ ಬೆಳಗಾವಿಯ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಕ್ರೀಡಾಂಗಣವನ್ನು ಸಂಪೂರ್ಣ ಸಜ್ಜುಗೊಳಿಸಲು ಅಗತ್ಯವಿರುವ ಮೂಲಸೌಕರ್ಯ ಅಭಿವೃದ್ಧಿಗೆ ಸುಮಾರು ₹15–20 ಕೋಟಿ ಅನುದಾನ ಅಗತ್ಯವಿದೆ ಎಂದು ಬೆಳಗಾವಿ ಶಾಸಕ ಅಭಯ ಪಾಟೀಲ ಅವರು ಮಹಾರಾಷ್ಟ್ರ ಸರ್ಕಾರದ ಸಚಿವ ಹಾಗೂ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸದಸ್ಯ ಅಶೀಷ್ ಶೆಲಾರ್ ಅವರಿಗೆ ಪತ್ರ ಬರೆದಿದ್ದಾರೆ.

ಪತ್ರದಲ್ಲಿ, ಬೆಳಗಾವಿ ಕ್ರೀಡಾಂಗಣದಲ್ಲಿ ಈಗಾಗಲೇ ರಂಜಿ ಟ್ರೋಫಿ, ದುಲೀಪ್ ಟ್ರೋಫಿ ಹಾಗೂ ವಿದೇಶಿ ತಂಡಗಳೊಂದಿಗೆ ಭಾರತ ‘ಎ’ ತಂಡದ ಪಂದ್ಯಗಳು ಯಶಸ್ವಿಯಾಗಿ ನಡೆದಿರುವುದನ್ನು ಅಭಯ ಪಾಟೀಲ ಉಲ್ಲೇಖಿಸಿದ್ದಾರೆ. ಆದರೆ ಕೆಲವು ಮಹತ್ವದ ಮೂಲಸೌಕರ್ಯ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಅಗತ್ಯ ಅನುದಾನ ದೊರೆತರೆ, ಬೆಳಗಾವಿ ಕ್ರೀಡಾಂಗಣವು ಟಿ–20 ಹಾಗೂ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವ ಮಟ್ಟಕ್ಕೆ ತಲುಪಲಿದೆ ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.

ಕ್ರೀಡೆ ಮಾತ್ರವಲ್ಲ; ಆರ್ಥಿಕ ಚಟುವಟಿಕೆಗೂ ಉತ್ತೇಜನ
ಕ್ರೀಡಾಂಗಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸುವುದರಿಂದ ಕ್ರೀಡಾ ಚಟುವಟಿಕೆಗಳ ಜೊತೆಗೆ ಬೆಳಗಾವಿ ಪ್ರದೇಶದಲ್ಲಿ ವ್ಯಾಪಾರ, ಪ್ರವಾಸೋದ್ಯಮ ಮತ್ತು ಸೇವಾ ಕ್ಷೇತ್ರಗಳಿಗೂ ಉತ್ತೇಜನ ದೊರೆಯಲಿದೆ ಎಂದು ಅಭಯ ಪಾಟೀಲ ಹೇಳಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳಿಗೆ ಈ ವಿಷಯವನ್ನು ತಿಳಿಸಿ ಅಗತ್ಯ ಮಾರ್ಗದರ್ಶನ ನೀಡುವಂತೆ ಅಶೀಷ್ ಶೆಲಾರ್ ಅವರಿಗೆ ಮನವಿ ಮಾಡಲಾಗಿದೆ.
ದೇಶದ ವಿವಿಧ ಎರಡನೇ ಹಂತದ ನಗರಗಳನ್ನು ಅಂತಾರಾಷ್ಟ್ರೀಯ ಕ್ರೀಡಾಂಗಣಗಳಾಗಿ ಅಭಿವೃದ್ಧಿಪಡಿಸುವ ಪ್ರಯತ್ನಗಳ ನಡುವೆಯೇ, ಬೆಳಗಾವಿಯ ಈ ಮನವಿ ಮಹತ್ವ ಪಡೆದುಕೊಂಡಿದೆ

Leave a Reply

Your email address will not be published. Required fields are marked *

error: Content is protected !!