ಎಂಇಎಸ್ ಸದ್ದು ಹೆಚ್ಚಾದಷ್ಟೂ ಪಾಲಿಕೆಯಲ್ಲಿ ಗಟ್ಟಿಯಾಗುತ್ತಿದೆ ಕನ್ನಡಪರ ಪ್ರತಿಧ್ವನಿ.
ರಮೇಶ ಸೊಂಟಕ್ಕಿ-ಡಾ. ದಿನೇಶ ನಾಶಿಪುಡಿ ಸ್ಪಷ್ಟ ಘೋಷಣೆ.
ನಾವ್ ರೆಡಿ… ಈಗ ಹಿಂಜರಿಯೋದಿಲ್ಲ”

ಕನ್ನಡ ನಾಡು-ನುಡಿ ವಿಷಯದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬ ನಿರ್ಣಯವನ್ನು ಪಾಲಿಕೆಯಲ್ಲಿ ಮಂಡಿಸಲು ನಾವು ಸಿದ್ಧ. ಮಹಾಜನ ವರದಿಯೇ ಅಂತಿಮ ಎಂಬ ನಿಲುವು ವಿಧಾನಮಂಡಲದಲ್ಲಿ ಈಗಾಗಲೇ ದಾಖಲಾಗಿದೆ. ಅದೇ ಧ್ವನಿಯನ್ನು ಪಾಲಿಕೆಯೊಳಗೂ ಸ್ಪಷ್ಟವಾಗಿ ದಾಖಲಿಸುವ ಸಮಯ ಬಂದಿದೆ.
— ರಮೇಶ ಸೊಂಟಕ್ಕಿ
— ಡಾ. ದಿನೇಶ ನಾಶಿಪುಡಿ
ನಾಮನಿರ್ದೇಶಿತ ಸದಸ್ಯರು, ಬೆಳಗಾವಿ ಮಹಾನಗರ ಪಾಲಿಕೆ

ಬೆಳಗಾವಿ:
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಮತ್ತೆ ಗಡಿ ಭಾವನೆಯ ರಾಜಕಾರಣವನ್ನು ಕೆದಕುವ ಯತ್ನಗಳು ಕಾಣಿಸಿಕೊಳ್ಳುತ್ತಿರುವ ಹೊತ್ತಲ್ಲೇ, ಅದಕ್ಕೆ ತಿರುಗೇಟು ಕೊಡಲು ಕನ್ನಡಪರ ಶಕ್ತಿ ತೆರೆದ ವೇದಿಕೆಯಲ್ಲೇ ಸಜ್ಜಾಗಿದೆ. ಈ ಬಾರಿ ಅದು ಕೇವಲ ಪ್ರತಿಕ್ರಿಯೆಯಾಗಿ ಅಲ್ಲ, ಸ್ಪಷ್ಟ ರಾಜಕೀಯ ಘೋಷಣೆಯಾಗಿ ಹೊರಬಂದಿದೆ.
ಪಾಲಿಕೆಯೊಳಗೆ “ಮಹಾರಾಷ್ಟ್ರ ಪರ ಠರಾವ್” ಎಂಬ ಹಳೆಯ ರಾಜಕೀಯ ನಾಟಕಕ್ಕೆ ಮತ್ತೆ ಜೀವ ತುಂಬಲು ಕೆಲವರು ಮುಂದಾಗುತ್ತಿದ್ದರೆ, ಇನ್ನೊಂದೆಡೆ ಅದಕ್ಕೆ ನೇರವಾಗಿ ಸವಾಲು ಹಾಕಲು ಸರ್ಕಾರದ ನಾಮನಿರ್ದೇಶಿತ ಸದಸ್ಯರಾದ ರಮೇಶ ಸೊಂಟಕ್ಕಿ ಮತ್ತು ಡಾ. ದಿನೇಶ ನಾಶಿಪುಡಿ ಅವರು “ನಾವುಲೇ ಕನ್ನಡ ಪರ ಠರಾವ್ ಮಂಡಿಸುತ್ತೇವೆ” ಎಂದು ಘೋಷಿಸಿರುವುದು ಹೊಸ ಚರ್ಚೆಗೆ ಕಾರಣವಾಗಿದೆ.
ಇದು ಸಾಮಾನ್ಯ ಹೇಳಿಕೆ ಅಲ್ಲ.

ಇದು ಪಾಲಿಕೆಯೊಳಗೆ ಇಷ್ಟು ದಿನ ನೆಲೆಗೊಂಡಿದ್ದ ಮುಜುಗರದ ರಾಜಕಾರಣಕ್ಕೆ ಹಾಕಿದ ಸಾರ್ವಜನಿಕ ಸವಾಲು.
ಇದು “ಯಾರು ಮುಂದಾಗುತ್ತಾರೆ?” ಎಂಬ ಪ್ರಶ್ನೆಗೆ ಬಂದ ನೇರ ಉತ್ತರ.
ಇದು “ಈ ಹೊತ್ತಲ್ಲೂ ಮೌನವೇನಾ?” ಎಂದು ಕೇಳುತ್ತಿದ್ದ ಕನ್ನಡಿಗರಿಗೆ ಕಂಡ ಮೊದಲ ಸ್ಪಷ್ಟ ರಾಜಕೀಯ ಭರವಸೆ.
ಜನರ ಮನಸ್ಸು ಬದಲಾಗಿದೆ, ರಾಜಕೀಯವೂ ಬದಲಾಗಲೇಬೇಕು
ಒಮ್ಮೆ ಗಡಿ ಪ್ರಶ್ನೆ ಹೆಸರಿನಲ್ಲಿ ಜನರನ್ನು ಸೆಳೆದು ರಾಜಕೀಯ ಬೆಳೆಸುವುದು ಸುಲಭವಾಗಿತ್ತು.

ಆದರೆ ಇಂದಿನ ಬೆಳಗಾವಿ ಬದಲಾಗಿದೆ. ಈಗ ಜನರು ಘೋಷಣೆ ಕೇಳುವುದಿಲ್ಲ; ಫಲಿತಾಂಶ ಕೇಳುತ್ತಾರೆ.
ನಗರಕ್ಕೆ ಏನು ಸಿಕ್ಕಿತು?
ರಸ್ತೆ ಏಕೆ ಹಾಳಾಗಿದೆ?
ಕುಡಿಯುವ ನೀರು ಏಕೆ ಬರೋದಿಲ್ಲ?
ಕಸ ಸಮಸ್ಯೆ ಯಾವಾಗ ಮುಗಿಯುತ್ತದೆ?
ಆಡಳಿತ ಏಕೆ ನಿಧಾನ?
ಇವೇ ಈಗ ಜನರ ಪ್ರಶ್ನೆಗಳು.
ಹೀಗಾಗಿ ಹಳೆಯ ಕಾಲದಂತೆ “ಗಡಿ” ಹೆಸರಿನಲ್ಲಿ ಭಾವನೆ ಕೆದಕಿ ಮತ ಕೇಳುವ ರಾಜಕಾರಣದ ಹೊಳಪು ಮಂಕಾಗಿದೆ. ಈ ಬದಲಾವಣೆ ಚುನಾವಣಾ ಫಲಿತಾಂಶಗಳಲ್ಲೂ ಕಂಡಿದೆ. ಭಾಷಾ ಕಿಡಿ ಹಚ್ಚಿ ಬೆಳಗಾವಿಯ ರಾಜಕೀಯ ಹಿಡಿತ ಉಳಿಸಿಕೊಳ್ಳಬೇಕೆಂದವರನ್ನು ಮತದಾರರು ಹಿಂದಕ್ಕೆ ತಳ್ಳಿದ್ದಾರೆ.
ಇನ್ನೂ ಮೌನವೇ? ಅದೇ ದೊಡ್ಡ ಪ್ರಶ್ನೆ
ವಾಸ್ತವತೆ ಇಷ್ಟೇ ಸ್ಪಷ್ಟವಾಗಿದ್ದರೂ, ಕನ್ನಡ ನಾಡು-ನುಡಿ ವಿಷಯ ಬಂದಾಗ ಪಾಲಿಕೆಯೊಳಗೆ ಇನ್ನೂ ಕೆಲವು ವಲಯಗಳಲ್ಲಿ ಅಸ್ಪಷ್ಟತೆ ಕೇಳಿಬರುತ್ತಿರುವುದು ಅಸಮಾಧಾನ ಹುಟ್ಟಿಸಿದೆ.
“ಸಾಧಕ-ಬಾಧಕ ನೋಡೋಣ…”
“ಕಾನೂನು ಪರಿಸ್ಥಿತಿ ಅರ್ಥ ಮಾಡಿಕೊಂಡು ಮಾತಾಡೋಣ…”
“ಯಾರಾದರೂ ತರಲಿ, ಆಮೇಲೆ ನೋಡೋಣ…”
ಇಂತಹ ಮಾತುಗಳು ಈಗ ನಗರದಲ್ಲಿ ಪ್ರತಿಕೂಲ ಪ್ರತಿಕ್ರಿಯೆ ಹುಟ್ಟಿಸುತ್ತಿವೆ.
ಯಾಕೆಂದರೆ ಬೆಳಗಾವಿ ಕರ್ನಾಟಕದ್ದು ಎನ್ನುವ ವಿಷಯದಲ್ಲಿ ಇನ್ನೂ ಹಿಂಜರಿಯುವುದು ಕನ್ನಡಿಗರ ದೃಷ್ಟಿಯಲ್ಲಿ ಧೈರ್ಯಾಭಾವದ ಸಂಕೇತವಾಗಿಯೇ ಕಾಣುತ್ತಿದೆ.

