ಬೆಳಗಾವಿ:
ಅಭಿವೃದ್ಧಿ ಹೆಸರಿನಲ್ಲಿ ಆರಂಭವಾದ ಕಾಮಗಾರಿಗಳೇ ಇಂದು ಬೆಳಗಾವಿಗರಿಗೆ ತಲೆನೋವಾಗಿ ಪರಿಣಮಿಸಿವೆ.
ಆಮೆಗತಿ, ವಿಳಂಬ ಮತ್ತು ಕಳಪೆ ಗುಣಮಟ್ಟದ ಕಾಮಗಾರಿಗಳ ವಿರುದ್ಧ ಎಲ್ಅಂಡ್ಟಿ ಕಂಪನಿಯ ನೀತಿಗೆ ಬೇಸತ್ತು, ನಗರದ ವಿವಿಧ ಬಡಾವಣೆಗಳ ನಾಗರಿಕರು ಶಾಸಕ ಅಭಯ್ ಪಾಟೀಲ್ ನೇತೃತ್ವದಲ್ಲಿ ಎಲ್ಅಂಡ್ಟಿ ಮುಖ್ಯ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ರಸ್ತೆಗಳು ತಿಂಗಳುಗಟ್ಟಲೆ ಅಗೆಯಲ್ಪಟ್ಟು ಮರುಸ್ಥಾಪನೆ ಕಾಣದ ಸ್ಥಿತಿ, ಗುಂಡಿಗಳ ರಸ್ತೆಯಲ್ಲಿ ಸಂಚಾರವೇ ಅಪಾಯ, ಕುಡಿಯುವ ನೀರಿಗೆ ದಿನಗಟ್ಟಲೆ ಪರದಾಟ ಈ ಎಲ್ಲಕ್ಕೂ ಎಲ್ಅಂಡ್ಟಿಯ ನಿರ್ಲಕ್ಷ್ಯವೇ ಕಾರಣ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.

ಶಾಸಕ ಅಭಯ್ ಪಾಟೀಲ್ ಮಾತನಾಡಿ, 2019 ರಿಂದ ಎಲ್ಅಂಡ್ಟಿ ಕೈಗೊಂಡ ಕಾಮಗಾರಿಗಳು ಸಮಸ್ಯೆ ಪರಿಹಾರಕ್ಕಿಂತ ಜನರಿಗೆ ಹೊಸ ಸಂಕಷ್ಟಗಳನ್ನು ಸೃಷ್ಟಿಸಿವೆ. ಕಾಮಗಾರಿ ಬಳಿಕ ರಸ್ತೆ ಮರುಸ್ಥಾಪನೆ ಇಲ್ಲ, ಗುಣಮಟ್ಟ ಶೂನ್ಯ. ಬೆಂಗಳೂರಿಗೆ ತೆರಳಿ ಕಂಪನಿ ವರಿಷ್ಠರೊಂದಿಗೆ ಮಾತುಕತೆ ನಡೆಸಿದರೂ ಸ್ಪಷ್ಟ ಪರಿಹಾರ ಸಿಕ್ಕಿಲ್ಲ ಎಂದು ಕಿಡಿಕಾರಿದರು.

ಮಾಜಿ ಉಪಮಹಾಪೌರ ಆನಂದ ಚವ್ಹಾಣ ಮಾತನಾಡಿ, ಕಾಮಗಾರಿ ಬಳಿಕ ನಿರ್ವಹಣೆಯೇ ಇಲ್ಲದ ಪರಿಣಾಮ ಹಲವು ಬಡಾವಣೆಗಳಲ್ಲಿ 10 ದಿನಕ್ಕೊಮ್ಮೆ ಮಾತ್ರ ನೀರು ಪೂರೈಕೆಯಾಗುತ್ತಿದೆ
ರಾಣಿ ಚೆನ್ನಮ್ಮ ನಗರ, ಟಿಳಕವಾಡಿ, ಪಾರ್ವತಿ ನಗರ, ಗುರುಬಸವ ನಗರ, ಕಾವೇರಿ ಕಾಲನಿಯಲ್ಲಿ ಕಾಮಗಾರಿಗಳು ಇನ್ನೂ ಮುಗಿಯದೆ ಇರುವುದು ಜನರ ಸಹನೆ ಮೀರಿಸಿದೆ.
ರಸ್ತೆ ಹದಗೆಟ್ಟು ಅಪಘಾತಗಳು ಹೆಚ್ಚಾಗಿದ್ದು, ಕಳೆದ ಎರಡು ವರ್ಷಗಳಿಂದ ನಾಗರಿಕರು ನಿರಂತರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಒಂದು ಕಾಮಗಾರಿ ಪೂರ್ಣಗೊಳಿಸದೇ ಮತ್ತೊಂದು ಕೆಲಸ ಕೈಗೆತ್ತಿಕೊಳ್ಳುವ ಎಲ್ಅಂಡ್ಟಿ ನೀತಿ ಪಾರ್ವತಿ ನಗರ ಹಾಗೂ ಶಾಸ್ತ್ರೀನಗರದ ಜನರನ್ನು ಪೇಚಿಗೆ ಸಿಲುಕಿಸಿದೆ, ಪ್ರತಿಭಟನೆಯಲ್ಲಿ ವಿವಿಧ ಬಡಾವಣೆಗಳ ನಾಗರಿಕರು ಪಾಲ್ಗೊಂಡಿದ್ದರು.

