Headlines

ಬ್ಲ್ಯಾಕ್‌ಮೇಲರ್ ಯೂಟ್ಯೂಬರ್ಸ್‌ಗಳ ಕತ್ತಲೆ ಜಾಲ”

ಬೆಳಗಾವಿ:
ಮೊಬೈಲ್ ಫೋನ್ ಕೈಯಲ್ಲಿ ಹಿಡಿದ ಪ್ರತಿಯೊಬ್ಬರೂ ಪತ್ರಕರ್ತನಾಗಬಹುದು ಎಂಬ ಭ್ರಮೆಯ ನಡುವೆ, ಸಮಾಜವನ್ನು ಆತಂಕಕ್ಕೆ ತಳ್ಳುವ ಹೊಸ ವರ್ಗವೊಂದು ಮೌನವಾಗಿ ಎಲ್ಲೆಡೆ ಬೆಳೆಯುತ್ತಿದೆ . ಯೂಟ್ಯೂಬ್ ಚಾನೆಲ್ ಹೆಸರಿನಲ್ಲಿ ಖಾಸಗಿ ಕ್ಷಣಗಳನ್ನು ಅಸ್ತ್ರವಾಗಿಸಿಕೊಂಡು, ಬೆದರಿಕೆ–ಬ್ಲ್ಯಾಕ್‌ಮೇಲ್–ವಸೂಲಿಗೆ ಇಳಿದಿರುವವರು ಈ ವರ್ಗ. ಇವರು ವಿಷಯ ಸೃಷ್ಟಿಕರ್ತರಲ್ಲ; ಕಾನೂನಿನ ಕಣ್ಣಲ್ಲಿ ಅಪರಾಧಿಗಳು.!

ಅದು ಈಗ ಬೆಳಗಾವಿಯಲ್ಲಿ ಸಾಕ್ಷಿಯಾಗಿದೆ. ಬೆಳಗಾವಿಯ ಮೂವರು ಯೂಟೂಬರ್ಸ್ ಮಾಡಿದ ಅವಾಂತರ ಇಡೀ ರಾಜ್ಯವನ್ನೇ ಬೆಚ್ಚಿ‌ಬೀಳಿಸಿದೆ. ಈಗ ಅಂತಹ ಬ್ಲ್ಯಾಕ್ ಮೇಲರ್ಸ್ ಗಳನ್ನು ಮಟ್ಟಹಾಕಲು ಇಡೀ ಪತ್ರಿಕೋದ್ಯಮ ಎದ್ದು ನಿಲ್ಲಬೇಕಾದ ಅನಿವಾರ್ಯತೆ ಇದೆ.

ನಗರ–ಗ್ರಾಮಾಂತರಗಳಲ್ಲಿಯೂ ಇವರ ಚಲನವಲನ ಹೆಚ್ಚಾಗಿದೆ. ‘ಸಂದರ್ಶನ’, ‘ಎಕ್ಸ್‌ಪೋಸರ್’, ‘ಸತ್ಯ ಬಯಲು’ ಎಂಬ ಆಕರ್ಷಕ ಪದಗಳ ಹಿಂದೆ ಮರೆಮಾಚಿಕೊಂಡು, ವ್ಯಕ್ತಿಗಳ ಖಾಸಗಿ ಬದುಕಿನೊಳಗೆ ನುಗ್ಗುವುದು ಇವರ ಮೊದಲ ಹೆಜ್ಜೆ. ನಂತರದ ಹಂತ ಹಣದ ಬೇಡಿಕೆ. ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಅವಮಾನ ಮಾಡುವ ಬೆದರಿಕೆ.

*ಕಾರ್ಯವಿಧಾನ:* ಯೋಜಿತ, ಹಂತಬದ್ಧ ಅಪರಾಧ
ಪೊಲೀಸ್ ಮೂಲಗಳ ಪ್ರಕಾರ, ಈ ಬ್ಲ್ಯಾಕ್‌ಮೇಲ್ ಪ್ರಕರಣಗಳು ಅಚಾನಕ್ ಆಗುವುದಿಲ್ಲ. ಪೂರ್ವಯೋಜಿತವಾಗಿಯೇ ನಡೆಯುತ್ತವೆ. ಮೊದಲು ಬಲಿಯ ಆಯ್ಕೆ, ಬಳಿಕ ವಿಶ್ವಾಸ ಗಳಿಕೆ, ನಂತರ ರಹಸ್ಯ ದಾಖಲೆ. ಆ ಬಳಿಕ ಆರಂಭವಾಗುತ್ತದೆ ಮಾನಸಿಕ ಹಿಂಸೆ.
ಈ ಅಪರಾಧದ ಅತ್ಯಂತ ಅಪಾಯಕಾರಿ ಅಂಶವೆಂದರೆ—ಬಲಿಯಾದವರ ಮೌನ. ಕುಟುಂಬದ ಮಾನ–ಗೌರವ ಹಾಳಾಗುವ ಭಯದಿಂದ ಅನೇಕರು ಪೊಲೀಸರ ಬಳಿ ಹೋಗಲು ಹಿಂದೇಟು ಹಾಕುತ್ತಾರೆ. ಇದೇ ಅಪರಾಧಿಗಳಿಗೆ ಬಲ.

*ಕಾನೂನು ಸ್ಪಷ್ಟ,* *ಆದರೆ ಅನುಷ್ಠಾನ?*
ಭಾರತೀಯ ನ್ಯಾಯ ಸಂಹಿತೆ (BNS), ಐಟಿ ಕಾಯ್ದೆ ಸೇರಿದಂತೆ ಹಲವು ಕಾನೂನುಗಳು ಇಂತಹ ಬ್ಲ್ಯಾಕ್‌ಮೇಲ್‌ಗೆ ಕಠಿಣ ಶಿಕ್ಷೆಯನ್ನು ಒದಗಿಸುತ್ತವೆ. ಆದರೂ ‘ನಾವು ಯೂಟ್ಯೂಬರ್ಸ್’ ಎಂಬ ಮುಸುಕಿನ ಹಿಂದೆ ಕೆಲವರು ತಪ್ಪಿಸಿಕೊಳ್ಳುತ್ತಿರುವುದು ಗಂಭೀರ ಚಿಂತನೆಗೆ ಕಾರಣ.
ಪತ್ರಿಕೋದ್ಯಮ ಎನ್ನುವುದು ಜವಾಬ್ದಾರಿ. ಕ್ಯಾಮರಾ ಎನ್ನುವುದು ಅಧಿಕಾರ. ಆದರೆ ಜವಾಬ್ದಾರಿಯಿಲ್ಲದ ಅಧಿಕಾರ ಅಪಾಯಕಾರಿಯಾಗುತ್ತದೆ ಎಂಬುದಕ್ಕೆ ಈ ಪ್ರಕರಣಗಳು ಸಾಕ್ಷಿ.

*ಮಾನವೀಯ ಆಯಾಮ:* ಅವಮಾನಕ್ಕಿಂತ ಭಯ ದೊಡ್ಡದು
ಈ ಬ್ಲ್ಯಾಕ್‌ಮೇಲ್‌ಗೆ ಬಲಿಯಾದವರಲ್ಲಿ ವಿದ್ಯಾರ್ಥಿಗಳು, ವ್ಯಾಪಾರಿಗಳು, ಉದ್ಯೋಗಸ್ಥರು ಸೇರಿದ್ದಾರೆ. ಕೆಲವರು ಸಾಲ ಮಾಡಿ ಹಣ ನೀಡಿದ್ದಾರೆ. ಕೆಲವರು ಮನೆಯಲ್ಲಿ ಹೇಳಿಕೊಳ್ಳಲಾಗದೇ ಒಳಗೊಳಗೇ ಕುಸಿದಿದ್ದಾರೆ. ಇದು ಕೇವಲ ಅಪರಾಧ ಕಥೆಯಲ್ಲ; ಇದು ಸಮಾಜದೊಳಗಿನ ಮೌನ ಪೀಡೆಯ ಚಿತ್ರ.
ಪತ್ರಕರ್ತನ ಹೆಸರಿನಲ್ಲಿ ನಡೆಯುವ ವಸೂಲಿಗೆ ತೆರೆ ಬೇಕು
ನಿಜವಾದ ಪತ್ರಿಕೋದ್ಯಮಕ್ಕೆ ಇಂತಹ ನಕಲಿ ಯೂಟ್ಯೂಬರ್ಸ್‌ಗಳಿಂದ ಆಗುತ್ತಿರುವ ಹಾನಿ ಅಳತೆಗೇ ಬಾರದಷ್ಟು. ಸಾರ್ವಜನಿಕ ವಿಶ್ವಾಸ ಕಳೆದುಹೋದರೆ, ಸತ್ಯಕ್ಕೂ ಮೌಲ್ಯ ಉಳಿಯದು. ಆದ್ದರಿಂದ ಇಂತಹ ಪ್ರಕರಣಗಳಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವ ಜೊತೆಗೆ, ಯೂಟ್ಯೂಬ್ ಸೇರಿದಂತೆ ಡಿಜಿಟಲ್ ವೇದಿಕೆಗಳು ಹೊಣೆ ಹೊತ್ತುಕೊಳ್ಳಬೇಕಾದ ಕಾಲ ಬಂದಿದೆ

ಸಂಯುಕ್ತ ಕರ್ನಾಟಕ ದಲ್ಲಿ‌ ಪ್ರಕಟಗೊಂಡ ವರದಿ

Leave a Reply

Your email address will not be published. Required fields are marked *

error: Content is protected !!