ಹುಕ್ಕೇರಿಯಲ್ಲಿ ಕೇಸ್..ಬೆಳಗಾವಿ, ಖಾನಾಪುರ ದಲ್ಲಿ ನೋ ಕೇಸ್

ನಕಲಿ ದಾಖಲೆ ಸೃಷ್ಟಿ, ಹುಕ್ಕೇರಿ‌ಸಬ್ ರಿಜಿಸ್ಟ್ರಾರ್ ವಿರುದ್ಧ ಕೇಸ್,

ಬೆಳಗಾವಿ, ಖಾನಾಪುರ ತಾಲೂಕಿನಲ್ಲೂ ಸಮಾಬ ಪ್ರಕರಣ- ಆದರೆ ಸಬ್ ರಿಜಿಸ್ಟ್ರಾರ್ ವಿರುದ್ಧ ನೋ ಕೇಸ್..

ಅನುಮಸನಕ್ಕೆ ಕಾರಣವಾದ ಖಾಕಿ ನಡೆ.

ಬೆಳಗಾವಿ: ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟಿ ಕೋಟಿ ಮೌಲ್ಯದ ಜಮೀನು ಕಬಳಿಸಲು ಯತ್ನಿಸಿದ ಪ್ರಕರಣ ಹುಕ್ಕೇರಿಯಲ್ಲಿ ಬಹಿರಂಗವಾದ ಹಿನ್ನೆಲೆಯಲ್ಲಿ, ನೋಂದಣಿ ಕಚೇರಿಗಳ ಕಾರ್ಯಪದ್ಧತಿಯ ಮೇಲಿನ ಅನುಮಾನಗಳು ಮತ್ತೆ ತೀವ್ರಗೊಂಡಿವೆ. ಹುಕ್ಕೇರಿಯಲ್ಲಿ ಉಪನೊಂದಣಿ ಅಧಿಕಾರಿಯೂ ಸೇರಿದಂತೆ ಒಂಬತ್ತು ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದರೆ, ಬೆಳಗಾವಿ, ಖಾನಾಪುರ ತಾಲೂಕಿನಲ್ಲಿ ಕೇಳಿಬಂದಿರುವ ಸಮಾನ ಸ್ವರೂಪದ ಆರೋಪಗಳ ಬಗ್ಗೆ ಇನ್ನೂ ಸ್ಪಷ್ಟ ಕಾನೂನು ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕ ವಲಯದಲ್ಲಿ ಪ್ರಶ್ನೆಗೆ ಕಾರಣವಾಗಿದೆ.
ಹುಕ್ಕೇರಿಯಲ್ಲಿ ನಡೆದ ಪ್ರಕರಣದಲ್ಲಿ ನಕಲಿ ಕರಾರಪತ್ರ ಸೃಷ್ಟಿ, ನಕಲಿ ಫೋಟೋ ಹಾಗೂ ನಕಲಿ ಸಹಿಗಳ ಬಳಕೆ, ನಕಲಿ ಆಧಾರ್ ಮತ್ತು ಪಾನ್ ಕಾರ್ಡ್‌ಗಳ ಪತ್ತೆ ಸೇರಿದಂತೆ ಹಲವು ಗಂಭೀರ ಅಂಶಗಳು ತನಿಖೆಯಲ್ಲಿ ಹೊರಬಂದಿವೆ. ನೋಂದಣಿ ಪ್ರಕ್ರಿಯೆಯೇ ಉಪನೊಂದಣಿ ಕಚೇರಿಯಲ್ಲೇ ನಡೆದಿರುವುದರಿಂದ ಸಂಬಂಧಿತ ಅಧಿಕಾರಿಯ ಪಾತ್ರದ ಕುರಿತು ನೇರವಾಗಿ ಪ್ರಕರಣ ದಾಖಲಾಗಿರುವುದು ಗಮನಾರ್ಹ.

ಪೊಲೀಸರು ದಾಳಿ ನಡೆಸಿ ನಕಲಿ ಗುರುತಿನ ಚೀಟಿಗಳು ಹಾಗೂ ದಾಖಲೆ ತಯಾರಿಕೆಗೆ ಬಳಸಿದ ಉಪಕರಣಗಳನ್ನು ಜಪ್ತಿ ಮಾಡಿರುವುದಾಗಿ ತಿಳಿದುಬಂದಿದೆ. ಆರೋಪಿಗಳ ಬಂಧನ ಮತ್ತು ಜಾಮೀನು ಪ್ರಕ್ರಿಯೆ ಪೂರ್ಣಗೊಂಡಿದ್ದು, ಪ್ರಕರಣ ನ್ಯಾಯಾಂಗ ಹಂತದಲ್ಲಿದೆ.

ಆದರೆ ಬೆಳಗಾವಿ ಮತ್ತು ಖಾನಾಪುರ ತಾಲೂಕಿನ ಆರೋಪಗಳು ಇದೇ ಮಾದರಿಯವು. ಇಲ್ಲಿ ಕೂಡ ಎಲ್ಲವೂ ನಕಲಿ ದಾಖಲೆ ಸೃಷ್ಟಿ. ಹಾಗೂ ಮಧ್ಯವರ್ತಿಗಳ ಸಂಚು ಮೂಲಕ ಜಮೀನು ನೋಂದಣಿ ನಡೆದಿರುವ ಬಗ್ಗೆ ಪೀಡಿತರು ದೂರು ಸಲ್ಲಿಸಿರುವುದಾಗಿ ತಿಳಿದುಬಂದಿದೆ.
ಆದರೆ, ಸಂಬಂಧಿತ ಸಬ್ ರಿಜಿಸ್ಟ್ರಾರ್ ವಿರುದ್ಧ ಪ್ರಕರಣ ದಾಖಲಾಗಿದೆಯೇ? ತನಿಖೆ ಯಾವ ಹಂತದಲ್ಲಿದೆ? ಎಂಬುದರ ಬಗ್ಗೆ ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ.

ಡಿಜಿಟಲ್ ಪರಿಶೀಲನೆ ಪ್ರಶ್ನಾರ್ಥಕ?
ಜಮೀನು ನೋಂದಣಿ ಪ್ರಕ್ರಿಯೆಯಲ್ಲಿ ಫೋಟೋ, ಬಯೋಮೆಟ್ರಿಕ್ ಹಾಗೂ ಗುರುತಿನ ದಾಖಲೆಗಳ ಪರಿಶೀಲನೆ ಕಡ್ಡಾಯವಾಗಿದ್ದರೂ ನಕಲಿ ದಾಖಲೆಗಳ ಆಧಾರದಲ್ಲಿ ನೋಂದಣಿ ಸಾಧ್ಯವಾಗಿರುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸಿದೆ. ಇದು ಕೇವಲ ಖಾಸಗಿ ವ್ಯಕ್ತಿಗಳ ಸಂಚೇ?, ಅಥವಾ ಕಚೇರಿ ಮಟ್ಟದ ನಿರ್ಲಕ್ಷ್ಯವೂ ಇದರಲ್ಲಿ ಸೇರಿಕೊಂಡಿದೆಯೇ ಎಂಬುದನ್ನು ತನಿಖೆ ಸ್ಪಷ್ಟಪಡಿಸಬೇಕಾಗಿದೆ.

ಪೊಲೀಸ್ ಕ್ರಮದ ನಿರೀಕ್ಷೆ?
ಬೆಳಗಾವಿ ತಾಲೂಕಿನಲ್ಲಿ ದೂರು ಸಲ್ಲಿಕೆಯಾದರೂ FIR ದಾಖಲಾತಿ ಹಾಗೂ ಮುಂದಿನ ಕ್ರಮದ ಕುರಿತು ವಿಳಂಬವಾಗುತ್ತಿರುವುದಾಗಿ ಕೆಲವರು ಆರೋಪಿಸಿದ್ದಾರೆ.

“ನಕಲಿ ದಾಖಲೆ ಪ್ರಕರಣಗಳಲ್ಲಿ ಪ್ರಾಥಮಿಕ ಹಂತದಲ್ಲೇ ಕಠಿಣ ಕ್ರಮ ಕೈಗೊಳ್ಳದಿದ್ದರೆ ಸಾಕ್ಷ್ಯ ನಾಶವಾಗುವ ಸಾಧ್ಯತೆ ಇರುತ್ತದೆ,” ಎಂದು ವಕೀಲರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಹುಕ್ಕೇರಿಯಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗಿದ್ದರೆ, ಬೆಳಗಾವಿ, ಖಾನಾಪುರ ಸಮಾನ ಮಾನದಂಡ ಅನ್ವಯವಾಗಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಜಮೀನು ವ್ಯವಹಾರಗಳಲ್ಲಿ ಪಾರದರ್ಶಕತೆ ಕಾಪಾಡಲು ಹಾಗೂ ಸಾಮಾನ್ಯ ನಾಗರಿಕರ ಹಕ್ಕುಗಳನ್ನು ರಕ್ಷಿಸಲು, ಬೆಳಗಾವಿ, ಖಾನಾಪುರ ತಾಲೂಕಿನಲ್ಲಿ ಕೇಳಿಬಂದಿರುವ ಆರೋಪಗಳ ಕುರಿತು ವೇಗದ ಮತ್ತು ಸ್ವತಂತ್ರ ತನಿಖೆ ಅಗತ್ಯವಿದೆ ಎಂಬುದು ಸಾರ್ವಜನಿಕ ಅಭಿಪ್ರಾಯವಾಗಿದೆ

Leave a Reply

Your email address will not be published. Required fields are marked *

error: Content is protected !!