₹10ಕ್ಕೆ ಹೊತ್ತಿ ಉರಿದ ದರ್ಪದ ಬೆಂಕಿ..!

ಬೆಳಗಾವಿಯಲ್ಲಿ ಅಮಾನವೀಯ ಘಟನೆ. ಕಾರ್ಮಿಕನಿಗೆ ಹಿಂದಿ, ಮರಾಠಿಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ,

ಹೊಟ್ಟೆಗೆ ಒದಿತ,ಗುಂಪಿನಿಂದ ಮಾರಣಾಂತಿಕ ಹಲ್ಲೆ.‌ ಪೊಲೀಸರಿಗೆ ಕೇಳಿಸಿತಾ ಕಾರ್ಮಿಕನ‌ ಆರ್ತನಾದ.

ಬಡ ಕಾರ್ಮಿಕನ ಮೇಲೆ ‘ಗೌರವದ’ ಗುದ್ದಾಟ – ಹಲ್ಲೆಕೋರರಿಗೆ ಕಠಿಣ ಶಿಕ್ಷೆಯ ಬೇಡಿಕೆ.

ಬೆಳಗಾವಿ: ದಿನಗೂಲಿ ದುಡಿಯುವ ಕಾರ್ಮಿಕನ ಬದುಕಿನಲ್ಲಿ ₹10 ಚಿಲ್ಲರೆ ಆಗಿರಬಹುದು. ಆದರೆ ಅವಮಾನ ಚಿಲ್ಲರೆ ಅಲ್ಲ.

ನಗರದ ಪೆಟ್ರೋಲ್ ಪಂಪ್‌ನಲ್ಲಿ ನಡೆದ ಘಟನೆ, ಬಡ ಕಾರ್ಮಿಕನ ಸ್ವಾಭಿಮಾನವನ್ನು ಕದಡಿ ಹಾಕಿದೆಯೇ ಎಂಬ ಪ್ರಶ್ನೆ ಈಗ ಸಾರ್ವಜನಿಕ ವಲಯದಲ್ಲಿ ಗಂಭೀರವಾಗಿ ಕೇಳಿಬರುತ್ತಿದೆ.
ಘಟನೆ ಹೇಗೆ ಆರಂಭವಾಯಿತು?
ಕಾರಿಗೆ ಹವಾ ಹಾಕಿಸಿಕೊಂಡ ಮಹಿಳೆಯೊಬ್ಬರು ಹತ್ತು ರೂಪಾಯಿ ನೋಟನ್ನು ಕಾರ್ಮಿಕನತ್ತ ಎಸೆದಿದ್ದಾರೆ ಎನ್ನಲಾಗಿದೆ. “ಹಣ ಕೊಡುವುದಕ್ಕೂ ಒಂದು ಗೌರವ ಇರಬೇಕು” ಎಂದು ಕಾರ್ಮಿಕ ಆಕ್ಷೇಪ ವ್ಯಕ್ತಪಡಿಸಿ, ನೋಟನ್ನು ವಾಪಸ್ಸು ನೀಡಿ ಸೌಜನ್ಯದಿಂದ ವರ್ತಿಸುವಂತೆ ಮನವಿ ಮಾಡಿದನೆಂದು ತಿಳಿದುಬಂದಿದೆ.

ಇದೇ ಕ್ಷಣದಲ್ಲೇ ಘಟನೆ ತಿರುವು ಪಡೆದಿದೆ. ಮಹಿಳೆ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಲಾಗಿದೆ ಎಂದು ಆರೋಪಿಸಿ ಪತಿಯನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾರೆ. ಸ್ಥಳಕ್ಕೆ ಬಂದ ಪತಿ, ಕಾರ್ಮಿಕನೊಂದಿಗೆ ಕಟುವಾಗಿ ವಾಗ್ವಾದ ನಡೆಸಿ ಆಶ್ಲೀಲ ಪದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೇಳಿಸದ ಕಾರ್ಮಿಕನ ಧ್ವನಿ
“ನಾನು ಹಣವನ್ನು ಮುಖಕ್ಕೆ ಎಸೆದಿಲ್ಲ” ಎಂದು ಕಾರ್ಮಿಕ ಸ್ಪಷ್ಟನೆ ನೀಡಿದರೂ, ಆತನ ಮಾತು ಯಾರಿಗೂ ಕೇಳಿಸಲಿಲ್ಲ ಎನ್ನಲಾಗಿದೆ. ಅಲ್ಲಿದ್ದ ಕೆಲವರು ಹಿಂದಿ ಮತ್ತು ಮರಾಠಿ ಭಾಷೆಯಲ್ಲಿ ಗದ್ದಲ ಮಾಡುತ್ತ, ಆತನ ಹೊಟ್ಟೆಗೆ ಬಲವಾಗಿ ಒದ್ದು ಹಲ್ಲೆ ನಡೆಸಿದ ದೃಶ್ಯಗಳು ಮೊಬೈಲ್ ವಿಡಿಯೊದಲ್ಲಿ ಸೆರೆಯಾಗಿವೆ.
ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲ್ಲೆಯ ತೀವ್ರತೆ ಕುರಿತು ಆತಂಕ ವ್ಯಕ್ತವಾಗಿದೆ. ಕಾರ್ಮಿಕನ ಮೇಲೆ ನಡೆದ ದಾಳಿಯನ್ನು ‘ಮಾರಣಾಂತಿಕ ಹಲ್ಲೆ’ ಎಂದು ಸ್ಥಳೀಯರು ವರ್ಣಿಸುತ್ತಿದ್ದಾರೆ.

ಮಾನವೀಯತೆ ಎಲ್ಲಿದೆ?
ಈ ಪ್ರಕರಣ ಕೇವಲ ಹಣದ ವಿವಾದವಲ್ಲ.
ಇದು ವರ್ಗದ ದರ್ಪ ಮತ್ತು ಬಡತನದ ಅಸಹಾಯಕತೆಯ ಘರ್ಷಣೆ.
ಒಬ್ಬ ಕಾರ್ಮಿಕ ತನ್ನ ಸ್ವಾಭಿಮಾನ ಕಾಪಾಡಿಕೊಳ್ಳಲು ಮಾತಾಡಿದರೆ, ಅದು ಹಲ್ಲೆಗೆ ಕಾರಣವಾಗಬೇಕೇ?
ಹತ್ತು ರೂಪಾಯಿ ನೋಟು ಎಸೆಯುವ ಕ್ರಮವೇ ಅವಮಾನವಲ್ಲವೇ?
ಬಡ ಕಾರ್ಮಿಕನಿಗೂ ಗೌರವದಿಂದ ಬದುಕುವ ಹಕ್ಕು ಸಂವಿಧಾನ ನೀಡಿದೆ. ಅದನ್ನು ತುಳಿಯುವ ಹಕ್ಕು ಯಾರಿಗೂ ಇಲ್ಲ.
ಕಾನೂನು ಏನು ಹೇಳುತ್ತದೆ?
ಸಾರ್ವಜನಿಕವಾಗಿ ನಿಂದನೆ, ದೈಹಿಕ ಹಲ್ಲೆ, ಗುಂಪಾಗಿ ದಾಳಿ – ಇವೆಲ್ಲವೂ ಗಂಭೀರ ಅಪರಾಧಗಳಾಗಿವೆ. ವಿಡಿಯೊ ಸಾಕ್ಷ್ಯ ಇರುವ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಜೋರಾಗಿದೆ.
ಹಲ್ಲೆ ನಡೆಸಿದವರ ವಿರುದ್ಧ ಗಂಭೀರ ಕಲಂಗಳಡಿ ಪ್ರಕರಣ ದಾಖಲಿಸಿ, ಬಡ ಕಾರ್ಮಿಕನಿಗೆ ನ್ಯಾಯ ಒದಗಿಸಬೇಕೆಂಬುದು ಕಾರ್ಮಿಕ ಸಂಘಟನೆಗಳ ಹಾಗೂ ನಾಗರಿಕರ ಬೇಡಿಕೆ.

Leave a Reply

Your email address will not be published. Required fields are marked *

error: Content is protected !!