ಕತ್ತಿ ಸಾಲ ಬಹಿರಂಗಪಡಿಸಿದ ಜಾರಕಿಹೊಳಿ..!


ಬಿಡಿಸಿಸಿ ಬ್ಯಾಂಕ್ ದಂಡ ವಿವಾದ ರಾಜಕೀಯ ತಿರುವು.

2019ರ ಸಾಲ ಮಂಜೂರಾತಿ ಪ್ರಶ್ನೆಗೆ ಒಳಗೆ
ನಿರ್ದೇಶಕರಿಗೇ ಕೋಟಿ ಕೋಟಿ ಸಾಲ?.

ಕತ್ತಿ ಮಾಲೀಕತ್ವದ ಯುಕೆ ವೆಂಚರ್ಸ್‌ಗೆ ₹97 ಕೋಟಿ: ನಿಯಮ ಉಲ್ಲಂಘನೆ ಆರೋಪ

ಹಳೆಯ ನಿರ್ಧಾರಗಳ ಪರಿಣಾಮ’ – ಜಾರಕಿಹೊಳಿ ಸ್ಪಷ್ಟನೆ.

ಚಿನ್ನದ ಸಾಲ ವ್ಯವಹಾರದಲ್ಲೂ ಲೋಪ ಸೂಚನೆ
ರಾಜಕೀಯ ಕದನಕ್ಕೆ ಬ್ಯಾಂಕ್ ದಂಡ ಕಾರಣ.

ಜಾರಕಿಹೊಳಿ vs ಕತ್ತಿ: ಹೊಸ ಸುತ್ತಿನ ವಾಕ್ಸಮರ
ವಾಸ್ತವಾಂಶ ತಿಳಿದು ಪ್ರತಿಕ್ರಿಯಿಸಿ: ಸಾರ್ವಜನಿಕರಿಗೆ ಮನವಿ.


ಬೆಳಗಾವಿ:

ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗೆ ಭಾರತೀಯ ರಿಸರ್ವ್ ಬ್ಯಾಂಕ್ ವಿಧಿಸಿರುವ ₹2 ಲಕ್ಷದ ದಂಡದ ವಿಚಾರ ಇದೀಗ ರಾಜಕೀಯ ಸಿಡಿಲಿಗೆ ಕಾರಣವಾಗಿದೆ. ದಂಡದ ಹಿನ್ನೆಲೆ ಕುರಿತು ನೀಡಿದ ಸ್ಪಷ್ಟನೆ ವೇಳೆ ಬ್ಯಾಂಕ್ ಮಾರ್ಗದರ್ಶಕ ಬಾಲಚಂದ್ರ ಜಾರಕಿಹೊಳಿ ಮಾಡಿದ ಹೇಳಿಕೆ, “ಕತ್ತಿ ಅವಧಿಯ ಸಾಲ ಮಂಜೂರಾತಿಗಳು” ಎಂಬ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಜಾರಕಿಹೊಳಿ, 2019ರಲ್ಲಿ ಮಾಜಿ ಅಧ್ಯಕ್ಷ ರಮೇಶ್ ಕತ್ತಿ ಅವರ ಕಾಲಘಟ್ಟದಲ್ಲಿ ಬ್ಯಾಂಕ್‌ನ ನಿರ್ದೇಶಕರಾಗಿದ್ದವರಿಗೆಲೇ ಸಾಲ ಮಂಜೂರು ಮಾಡಿರುವುದು ಸಹಕಾರಿ ಬ್ಯಾಂಕಿಂಗ್ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು. ಆ ಸಂದರ್ಭದಲ್ಲಿ ನಿರ್ದೇಶಕರಾಗಿದ್ದ ಪಂಚನಗೌಡ ದ್ಯಾಮನಗೌಡರ್ ಅವರಿಗೆ ₹3 ಕೋಟಿ ಹಾಗೂ ಕೃಷ್ಣ ಅಂಗೋಲ್ಕರ್ ಅವರಿಗೆ ₹60 ಲಕ್ಷ ಸಾಲ ನೀಡಲಾಗಿದೆ ಎಂದು ಅವರು ಬಹಿರಂಗಪಡಿಸಿದರು.
ಇದೇ ವೇಳೆ, ಹುಕ್ಕೇರಿ ಶಾಸಕ ನಿಖಿಲ್ ಕತ್ತಿ ಅವರಿಗೆ ಸಂಬಂಧಿಸಿದ ಯುಕೆ ವೆಂಚರ್ಸ್ ಸಂಸ್ಥೆಗೆ ಬಾಕ್ಸೈಟ್ ರಸ್ತೆಯ ವಾಣಿಜ್ಯ ಮಳಿಗೆ ಯೋಜನೆಗಾಗಿ ₹97 ಕೋಟಿ ಸಾಲ ಮಂಜೂರು ಮಾಡಿರುವುದನ್ನೂ ಅವರು ಪ್ರಸ್ತಾಪಿಸಿದರು. “ವಾಣಿಜ್ಯ–ವಸತಿ ಆಸ್ತಿ ವರ್ಗೀಕರಣ ಸ್ಪಷ್ಟವಿಲ್ಲದೆ ಸಾಲ ನೀಡಿರುವುದು ನಿಯಮ ಉಲ್ಲಂಘನೆ” ಎಂದು ಹೇಳಿದರು. ಚಿನ್ನದ ಸಾಲಗಳ ವಿಷಯದಲ್ಲಿಯೂ ಆರ್‌ಬಿಐ ಪರಿಶೀಲನೆ ಲೋಪಗಳನ್ನು ಗುರುತಿಸಿದೆ ಎಂದು ಜಾರಕಿಹೊಳಿ ಹೇಳಿದರು.

ಈ ದಂಡ ಇಂದಿನ ಆಡಳಿತದ ಕಾರಣದಿಂದ ಅಲ್ಲ. ಹಳೆಯ ನಿರ್ಧಾರಗಳ ಪರಿಣಾಮ,” ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದರು. ಜನರು ವಾಸ್ತವಾಂಶ ತಿಳಿದುಕೊಂಡ ನಂತರವೇ ಪ್ರತಿಕ್ರಿಯಿಸಬೇಕು ಎಂದು ಮನವಿ ಮಾಡಿದರು.

ಇದರೊಂದಿಗೆ ಬೆಳಗಾವಿ ರಾಜಕೀಯದಲ್ಲಿ ಜಾರಕಿಹೊಳಿ–ಕತ್ತಿ ಶಿಬಿರಗಳ ನಡುವಿನ ಕದನ ಮತ್ತಷ್ಟು ತೀವ್ರಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಕತ್ತಿ ಪರ ವಲಯದಲ್ಲಿ ಈ ಆರೋಪಗಳನ್ನು ರಾಜಕೀಯ ಪ್ರೇರಿತ ಎಂದು ತಳ್ಳಿಹಾಕಲಾಗುತ್ತಿದ್ದರೆ, ಜಾರಕಿಹೊಳಿ ಶಿಬಿರವು “ನಿಯಮ ಉಲ್ಲಂಘನೆಗಳನ್ನೇ ಬೆಳಕಿಗೆ ತಂದಿದ್ದೇವೆ” ಎಂದು ವಾದಿಸುತ್ತಿದೆ.
ಬ್ಯಾಂಕ್ ವಿಚಾರ ಇದೀಗ ಆರ್ಥಿಕ ಚರ್ಚೆಯನ್ನು ಮೀರಿ ರಾಜಕೀಯ ಪೈಪೋಟಿಯ ಪ್ರಮುಖ ಅಸ್ತ್ರವಾಗುತ್ತಿರುವುದು ಗಮನಾರ್ಹ.

Leave a Reply

Your email address will not be published. Required fields are marked *

error: Content is protected !!