ಬೆಳಗಾವಿ ಮತದಾರರ ಮ್ಯಾಪಿಂಗ್ ಗೊಂದಲ
ಇದು ತಾಂತ್ರಿಕ ದೋಷವೋ ಅಥವಾ ಉದ್ದೇಶ ಪೂರ್ವಕವೋ?.
ಬಿಜೆಪಿ ಹಿಡಿತದಲ್ಲಿರುವ ದಕ್ಷಿಣ ಕ್ಷೇತ್ರ.
ಬೆಳಗಾವಿ:
ನಗರದಲ್ಲಿ ನಡೆಯುತ್ತಿರುವ ಮತದಾರರ ಮ್ಯಾಪಿಂಗ್ ಪ್ರಕ್ರಿಯೆ ಇದೀಗ ಗಂಭೀರ ಗೊಂದಲಕ್ಕೆ ಕಾರಣವಾಗಿದ್ದು, ಸುಮಾರು 60 ಸಾವಿರ ಮತದಾರರ ಹೆಸರುಗಳು ಪಟ್ಟಿಯಲ್ಲಿ ಕಾಣೆಯಾಗಿವೆ ಎಂಬ ಆರೋಪ ನಗರ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈ ಹಿನ್ನೆಲೆಯಲ್ಲಿ ದೆಹಲಿ ಹಾಗೂ ಬೆಂಗಳೂರು ಚುನಾವಣಾ ಆಯೋಗಕ್ಕೆ ದಾಖಲೆ ಸಮೇತ ದೂರು ಸಲ್ಲಿಸುವ ಎಚ್ಚರಿಕೆಯನ್ನು ಶಾಸಕ ಅಭಯ ಪಾಟೀಲ ನೀಡಿದ್ದಾರೆ.
ಮಹಾನಗರ ಪಾಲಿಕೆಯಲ್ಲಿ ನಡೆದ ಚರ್ಚೆಯಲ್ಲಿ ಹಲವು ಸದಸ್ಯರು ಮ್ಯಾಪಿಂಗ್ ಕಾರ್ಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಳೆದ ಮೂರು ತಿಂಗಳಲ್ಲಿ ಕೇವಲ 50 ಸಾವಿರ ಮತದಾರರ ಮ್ಯಾಪಿಂಗ್ ಮಾತ್ರ ನಡೆದಿರುವ ಮಾಹಿತಿ ಹೊರಬಿದ್ದಿದ್ದು, ಕೆಲಸದ ಪ್ರಗತಿಯ ಕುರಿತು ಅನುಮಾನಗಳು ಮೂಡಿವೆ. ಇನ್ನೂ ಸುಮಾರು 80 ಶೇಕಡಾ ಕಾರ್ಯ ಪೂರ್ಣಗೊಂಡಿಲ್ಲ ಎಂದು ಸದಸ್ಯರು ಆರೋಪಿಸಿದರು.

ನಗರದಲ್ಲಿ 58 ಜನ ನಗರಸೇವಕರು ಇದ್ದರೂ, ಎಲ್ಲ ಪಕ್ಷಗಳ ಪ್ರತಿನಿಧಿಗಳ ಜೊತೆ ಸಮೀಕ್ಷೆ ಸರಿಯಾಗಿ ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತವಾಯಿತು. “ಹೊರರಾಜ್ಯದವರ ಹೆಸರುಗಳು ಪಟ್ಟಿಯಲ್ಲಿ ಕಾಣಿಸುತ್ತಿವೆ, ಆದರೆ ಸ್ಥಳೀಯರ ಹೆಸರುಗಳೇ ಇಲ್ಲ” ಎಂದು ಕೆಲ ಸದಸ್ಯರು ಆರೋಪಿಸಿದರು.
ಮ್ಯಾಪಿಂಗ್ ಪ್ರಕ್ರಿಯೆಯನ್ನು ವಿಳಾಸದ ಆಧಾರದ ಮೇಲೆ ಅಲ್ಲ, EPIC ಸಂಖ್ಯೆಯ ಆಧಾರದ ಮೇಲೆ ಮಾಡಬೇಕು ಎಂದು ಸದಸ್ಯರು ಒತ್ತಾಯಿಸಿದರು. 2002ರಲ್ಲಿ ಪಟ್ಟಿಯಲ್ಲಿ ಇದ್ದ ಕೆಲವರ ಹೆಸರುಗಳು 2025ರ ಪಟ್ಟಿಯಲ್ಲಿ ಕಾಣಿಸದಿರುವುದೂ ಗೊಂದಲಕ್ಕೆ ಕಾರಣವಾಗಿದೆ.
ಮೇಯರ್ ಮಂಗೇಶ ಪವಾರ ಮ್ಯಾಪಿಂಗ್ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿಗೆ ಸರಿಯಾದ ಮಾಹಿತಿ ನೀಡಲಾಗಿಲ್ಲ ಎಂದು ಹೇಳಿದರು. ಉಪಮೇಯರ್ ವಾಣಿ ವಿಲಾಸ ಜೋಶಿ, “ಕೆಲ ಸಿಬ್ಬಂದಿಗಳ ಬಳಿ ಮೊಬೈಲ್ ಕೂಡ ಇಲ್ಲ” ಎಂದು ಗಮನ ಸೆಳೆದರು.
ಶಾಸಕ ಅಭಯ ಪಾಟೀಲ, “ಇದು ನಾಟಕವಾಗುತ್ತಿದೆ. BLOಗಳಿಗೆ ತರಬೇತಿ ನೀಡಿ ಅಥವಾ ಬದಲಾವಣೆ ಮಾಡಿ” ಎಂದು ಆಯುಕ್ತರಿಗೆ ಸೂಚಿಸಿದರು.
ಮ್ಯಾಪಿಂಗ್ ಪ್ರಕ್ರಿಯೆಯ ಗೊಂದಲ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡುವುದು ಖಚಿತ ಎಂದು ಸದಸ್ಯರು ತಿಳಿಸಿದ್ದಾರೆ.

