ಇದು ebelagavi ಡಿಜಿಟಲ್ ವರದಿ ತಾಕತ್ತು. ಕಳೆದ ದಿನವೇ ಡಿಜಿಟಲ್ ಕ್ಷೇತ್ರದಲ್ಲಿ ತನ್ನದೇ ಆದ ಹೆಸರು ಮಾಡಿದ ebelagavi ಸ್ಮಾರ್ಟ ಸಿಟಿ ಸಿಟೀಜ್ ೨.೦ ಸಂಬಂಧ ವಿಶೇಷ ವರದಿ ಪ್ರಕಟಿಸಿತ್ತು. ಅದರಲ್ಲಿ ಸಭೆಗೂ ಮುನ್ನವೇ ಪ್ರೊಸಿಡಿಂಗ್ಸ್ ಸಿದ್ಧ ಎನ್ನುವುದನ್ನು ಉಲ್ಲೇಖಿಸಿತ್ತು.

ಅಷ್ಟೇ ತಡ ಇಂದು ನಡೆಯಬೇಕಿದ್ದ ಸಭೆ ರದ್ದಾಗಿದೆ. ಅಷ್ಟೇ ಅಲ್ಲ ಖುದ್ದು ಡಿಸಿಯವರೇ ಪಾರದರ್ಶಕ ವಾಗಿ ಎಲ್ಲರಿಗೂ ತಿಳಿಸಿ ಸಭೆ ನಡೆಸಲು ಸೂಚನೆ ನೀಡಿದ್ದಾರೆ. ಅಂದರೆ ಡಿಜಿಟಲ್ ಮಾಧ್ಯಮ ಕೂಡ ವಾಸ್ತವತೆ ಆಧಾರದಲ್ಲಿ ಸುದ್ದಿ ಬರೆದರೆ ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸುತ್ತದೆ ಎನ್ನುವುದಕ್ಕೆ ಇದೊಂದು ಉತ್ತಮ ಉದಾಹರಣೆ
ಇ-ಬೆಳಗಾವಿ ವಿಶೇಷ
ಸಿಟೀಜ್ 2.0 ಕುರಿತು ಸ್ಮಾರ್ಟ್ ಸಿಟಿ ಆಡಳಿತದ ನಡೆಗೆ ಗಂಭೀರ ಪ್ರಶ್ನೆ.
ಬೆಳಗಾವಿ: ಸಿಟೀಜ್ 2.0 ಯೋಜನೆಗೆ ಸಂಬಂಧಿಸಿದಂತೆ ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್ ಅಧಿಕಾರಿಗಳು ಅನುಸರಿಸಿದ ಕಾರ್ಯವೈಖರಿ ಇದೀಗ ಹೊಸ ಸಂಚಲನಕ್ಕೆ ಕಾರಣವಾಗಿದೆ.
ಜನಪ್ರತಿನಿಧಿಗಳ ಗಮನಕ್ಕೂ ತರದೆ ಸ್ಟೇಕ್‌ಹೋಲ್ಡರ್ಸ್ ಸಭೆ ಕರೆಯಲು ಮುಂದಾಗಿದ್ದು ಮಾತ್ರವಲ್ಲ, ಸಭೆ ನಡೆಯುವುದಕ್ಕೂ ಮುನ್ನವೇ ಅದರ ಪ್ರೊಸೀಡಿಂಗ್ಸ್ ಸಿದ್ಧವಾಗಿದ್ದ ವಿಚಾರ ಬಹಿರಂಗವಾದ ಬೆನ್ನಲ್ಲೇ ಸಭೆಯನ್ನು ಕೊನೆ ಕ್ಷಣದಲ್ಲಿ ರದ್ದುಪಡಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಮಹತ್ವದ ಯೋಜನೆ ಕುರಿತ ಸಭೆ ಸ್ಮಾರ್ಟ್ ಸಿಟಿ ಕಚೇರಿಯ ಬೋರ್ಡ್ ರೂಂನಲ್ಲಿ ನಡೆಯಬೇಕಾಗಿತ್ತು. ಆದರೆ ಸಭೆಯ ಬಗ್ಗೆ ಪ್ರಮುಖ ಸಂಘ-ಸಂಸ್ಥೆಗಳಿಗೆ ಸಮರ್ಪಕ ಮಾಹಿತಿ ನೀಡಲಾಗಿರಲಿಲ್ಲ. ಮಾಧ್ಯಮಗಳಿಗೂ ಸುಳಿವಿರಲಿಲ್ಲ. ಮುಖ್ಯವಾಗಿ, ಸಂಸದರು, ಶಾಸಕರು ಸೇರಿದಂತೆ ಜನರಿಂದ ಆಯ್ಕೆಯಾದ ಪ್ರತಿನಿಧಿಗಳನ್ನೇ ಕತ್ತಲಲ್ಲಿಟ್ಟು ಸಮಾಲೋಚನೆ ನಡೆಸಲು ಯತ್ನಿಸಿರುವುದು ರಾಜಕೀಯ ಹಾಗೂ ಆಡಳಿತ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಸ್ಥಳೀಯ ಶಾಸಕರು ಅಧಿವೇಶನದಲ್ಲಿ ನಿರತರಾಗಿರುವಾಗ, ಸಂಸದ ಜಗದೀಶ ಶೆಟ್ಟರ್ ಅವರು ಸಂಸತ್ ಕಲಾಪದಲ್ಲಿ ಬ್ಯುಸಿಯಾಗಿರುವುದು ಗೊತ್ತಿದ್ದರೂ ಸಭೆ ನಿಗದಿ ಪಡಿಸಿರುವುದು ಇನ್ನಷ್ಟು ಸಂಶಯ ಹುಟ್ಟಿಸಿದೆ. “ಜನಪ್ರತಿನಿಧಿಗಳು ಇಲ್ಲದಾಗಲೇ ಸಭೆ ಕರೆಯಬೇಕಾದ ತುರ್ತು ಏನು?” ಎಂಬ ಪ್ರಶ್ನೆ ಈಗ ಗಟ್ಟಿಯಾಗಿ ಕೇಳಿಬರುತ್ತಿದೆ.
ಈ ಬೆಳವಣಿಗೆಯ ಮಧ್ಯೆ ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸಿ, ಎಲ್ಲ ಸ್ಟೇಕ್‌ಹೋಲ್ಡರ್ಸ್‌ಗೆ ಮುಂಚಿತ ಮಾಹಿತಿ ನೀಡಿ ಪಾರದರ್ಶಕವಾಗಿ ಸಭೆ ಆಯೋಜಿಸಬೇಕೆಂದು ಸೂಚಿಸಿರುವುದಾಗಿ ತಿಳಿದುಬಂದಿದೆ. ಒಟ್ಟಾರೆ, ಸಿಟೀಜ್ 2.0 ವಿಷಯದಲ್ಲಿ ಸ್ಮಾರ್ಟ್ ಸಿಟಿ ಆಡಳಿತದ ಈ ನಡೆ ಕೇವಲ ಯಡವಟ್ಟೇನಾ, ಅಥವಾ ಪೂರ್ವನಿಗದಿತ ತೀರ್ಮಾನಕ್ಕೆ ಸಭೆಯ ಮುಖವಾಡ ಹಾಕುವ ಯತ್ನವೇನಾ ಎಂಬ ಪ್ರಶ್ನೆ ನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ.

