ಬೆಳಗಾವಿ:
ಬೆಳಗಾವಿಯ ಮಹತ್ವಾಕಾಂಕ್ಷಿ CITIIS 2.0 ಯೋಜನೆ ಅನುಷ್ಠಾನ ಮತ್ತೆ ಗಂಭೀರ ಗೊಂದಲಕ್ಕೆ ಸಿಲುಕಿದೆ. ಯೋಜನೆಯ ಕ್ರಿಯಾ ಯೋಜನೆ ಇನ್ನೂ ಅಂತಿಮಗೊಂಡಿಲ್ಲ, ಕೆಯುಐಡಿಎಫ್‌ಸಿ ಕಚೇರಿಗೂ ಸಲ್ಲಿಕೆಯಾಗಿಲ್ಲ ಎಂಬ ಸಂಗತಿ ಅಧಿಕೃತವಾಗಿ ಹೊರಬಿದ್ದ ಹಿನ್ನೆಲೆಯಲ್ಲಿ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ (KUIDFC) ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್‌ಗೆ ಕಠಿಣ ಎಚ್ಚರಿಕೆ ನೀಡಿದೆ.

ಈ ಕೂಡಲೇ ಕ್ರಿಯಾ ಯೋಜನೆಯನ್ನು ಅಂತಿಮಗೊಳಿಸಿ ಸಲ್ಲಿಸಬೇಕು. ಇಲ್ಲವಾದರೆ ಯೋಜನೆ ವಿಳಂಬಕ್ಕೆ ನಿಮ್ಮನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು” ಎಂದು ಕೆಯುಐಡಿಎಫ್‌ಸಿ ತನ್ನ ಪತ್ರದಲ್ಲಿ ಸ್ಪಷ್ಟಪಡಿಸಿದೆ.
ಗಮನಾರ್ಹ ಸಂಗತಿ ಏನೆಂದರೆ, ಇದೇ ವಿಷಯವಾಗಿ 2025ರ ಡಿಸೆಂಬರ್ 26ರಲ್ಲೇ ಮೊದಲ ಸೂಚನೆ ನೀಡಲಾಗಿತ್ತು. ಆದರೂ ಮೂರು ತಿಂಗಳು ಕಳೆದರೂ ಅಂತಿಮ ಯೋಜನೆ ಸಲ್ಲಿಕೆಯಾಗಿಲ್ಲ. ಇದರಿಂದ ಸ್ಮಾರ್ಟ್ ಸಿಟಿ ಆಡಳಿತದ ನಿಧಾನಗತಿ, ಸಮನ್ವಯದ ಕೊರತೆ ಮತ್ತು ನಿರ್ಲಕ್ಷ್ಯ ಮತ್ತೆ ಬಯಲಾಗಿದೆ.
ಪತ್ರದ ಪ್ರಕಾರ, ಯೋಜನೆಯ ಅಂಶಗಳನ್ನು ಮಹಾನಗರ ಪಾಲಿಕೆ, ಜನಪ್ರತಿನಿಧಿಗಳು ಮತ್ತು ಸಂಬಂಧಿತ ಇಲಾಖೆಗಳೊಂದಿಗೆ ಚರ್ಚಿಸಿ ಅಂತಿಮಗೊಳಿಸಿ ಮಾ.31ರೊಳಗೆ ಕೇಂದ್ರ ನಗರ ಮತ್ತು ವಸತಿ ಸಚಿವಾಲಯಕ್ಕೆ ಕಳುಹಿಸಬೇಕು. ಗಡುವು ಸಮೀಪಿಸಿದ್ದರೂ ಬಿಎಸ್‌ಸಿಎಲ್‌ನ ಮೌನ ಇದೀಗ ಹೊಸ ಪ್ರಶ್ನೆಗಳನ್ನು ಎಬ್ಬಿಸಿದೆ.

