
ಬೆಳಗಾವಿ:
ಸಮಾಜದ ಬದಲಾವಣೆಗೆ ಮಹಿಳೆಯರ ಪಾತ್ರವೇ ಅಡಿಪಾಯವಾಗಿದ್ದು, ನಿಜವಾದ ಸಾಮಾಜಿಕ ಪರಿವರ್ತನೆ ನಮ್ಮ ಮನೆಯಿಂದಲೇ ಆರಂಭವಾಗಬೇಕು ಎಂದು ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತ ಕಾರ್ತಿಕ್ ಎಂ. ಅಭಿಪ್ರಾಯಪಟ್ಟರು.
ನಗರದ ಕುಮಾರ ಗಂಧರ್ವ ಕಲಾ ಮಂದಿರದಲ್ಲಿ ಬೆಳಗಾವಿ ಮಹಾನಗರ ಪಾಲಿಕೆಯ ವತಿಯಿಂದ ಆಯೋಜಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರಿಲ್ಲದ ಜೀವನವನ್ನು ಊಹಿಸುವುದೇ ಅಸಾಧ್ಯ. ಇಂದಿನ ದಿನಗಳಲ್ಲಿ ಶಿಕ್ಷಣ, ಆಡಳಿತ, ವಿಜ್ಞಾನ, ರಾಜಕೀಯ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದು ಸಮಾಜದ ಪ್ರಗತಿಗೆ ಪ್ರಮುಖ ಶಕ್ತಿಯಾಗಿದ್ದಾರೆ ಎಂದು ಹೇಳಿದರು.

ಇಂದು ದೇಶದ ಅತ್ಯುನ್ನತ ಸ್ಥಾನವಾದ ರಾಷ್ಟ್ರಪತಿ ಸ್ಥಾನವನ್ನು ಅಲಂಕರಿಸಿರುವ ದ್ರೌಪದಿ ಮುರ್ಮು ಅವರೇ ಮಹಿಳಾ ಸಾಮರ್ಥ್ಯದ ಉತ್ತಮ ಉದಾಹರಣೆ ಎಂದು ಅವರು ಉಲ್ಲೇಖಿಸಿದರು. ಹಿಂದೆ ಆರೋಗ್ಯ, ಕುಟುಂಬ ಮತ್ತು ಸಾಮಾಜಿಕ ನಿರ್ಬಂಧಗಳಂತಹ ಅನೇಕ ಅಡೆತಡೆಗಳು ಮಹಿಳೆಯರನ್ನು ಹಿಂದೆ ತಳ್ಳುತ್ತಿದ್ದವು. ಆದರೆ ಈಗ ಕಾಲ ಬದಲಾಗಿದ್ದು, ಮಹಿಳೆಯರಿಗೆ ಅವಕಾಶಗಳನ್ನು ಸೃಷ್ಟಿಸಿ ಅವರನ್ನು ಉತ್ತೇಜಿಸುವ ಜವಾಬ್ದಾರಿ ಸಮಾಜದ ಪ್ರತಿಯೊಬ್ಬರ ಮೇಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಮಹಾಪೌರ ಮಂಗೇಶ್ ಪವಾರ್, ಉಪಮಹಾಪೌರ ವಾಣಿ ಜೋಷಿ, ಆಡಳಿತ ಪಕ್ಷದ ನಾಯಕ ಹಣುಮಂತ ಕೊಂಗಾಲಿ, ಮಾಜಿ ಮಹಾಪೌರ ಸವೀತಾ ಕಾಂಬಳೆ, ಉಪ ಆಯುಕ್ತ ಉದಯಕುಮಾರ್ ತಳವಾರ, ಸಿದ್ದು ಹುಲ್ಲೋಳ್ಳಿ, ಅಭಿಯಂತರ ಲಕ್ಷ್ಮೀ ನಿಪ್ಪಾಣಿಕರ, ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಜಗದೀಶ್ ಹಿರೇಮನಿ ಮಾತನಾಡಿ, ಮಹಿಳೆಯರನ್ನು ಎಲ್ಲಾ ಕ್ಷೇತ್ರಗಳಲ್ಲಿ ಕನಿಷ್ಠ ಶೇ.50 ರಷ್ಟು ಮುಂಚೂಣಿಗೆ ತರಲು ಅವರಲ್ಲಿ ಅಗತ್ಯ ಸಾಮರ್ಥ್ಯವನ್ನು ಬೆಳೆಸುವ ಕೆಲಸವಾಗಬೇಕು ಎಂದರು. ಮಹಿಳೆಯರು ಸಂಕಲ್ಪ ಮಾಡಿದರೆ ಅಸಾಧ್ಯವೆನಿಸಿದ ಕಾರ್ಯವನ್ನೂ ಸಾಧ್ಯಗೊಳಿಸಬಹುದು.

ಸ್ವಚ್ಛ ಭಾರತ ಅಭಿಯಾನದಲ್ಲಿಯೂ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಮಹಾನಗರ ಪಾಲಿಕೆಯೊಂದಿಗೆ ಕೈಜೋಡಿಸಿದರೆ “ಸ್ವಚ್ಛ ಬೆಳಗಾವಿ” ಕನಸನ್ನು ನನಸು ಮಾಡಬಹುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹಿಳೆಯರನ್ನು ಸನ್ಮಾನಿಸಲಾಯಿತು. ಇದೇ ವೇಳೆ ಕೆ.ಎ.ಎಸ್. ಪರೀಕ್ಷೆಯಲ್ಲಿ ಉತ್ತೀರ್ಣರಾದ ಸುಮೀತ್ ಮೋಟೆಕರ ಅವರಿಗೆ ವಿಶೇಷವಾಗಿ ಅಭಿನಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಸಿಬ್ಬಂದಿ, ಮಹಿಳಾ ಸಂಘಟನೆಗಳ ಪ್ರತಿನಿಧಿಗಳು ಹಾಗೂ ನಾಗರಿಕರು ಉಪಸ್ಥಿತರಿದ್ದರು.


