Headlines

ಕೇಸರಿ ಅಲೆಗಳಲ್ಲಿ ತೇಲಿದ ಕುಂದಾನಗರಿ


ಬಸವ ಜಯಂತಿ ಮೆರವಣಿಗೆಗೆ ಜನಸಾಗರ; ವಚನಗಳ ನಾದ, ಚಂಡೆ–ಮದ್ದಳೆ ಗರ್ಜನೆ, ರೂಪಕ ವಾಹನಗಳ ರಂಗು

ಬೆಳಗಾವಿ:
ವಿಶ್ವಗುರು ಬಸವಣ್ಣನವರ ಜಯಂತಿ ಉತ್ಸವದ ಅಂಗವಾಗಿ ಭಾನುವಾರ ಬೆಳಗಾವಿ ನಗರವೇ ಬಸವಮಯವಾಗಿ ಕಂಗೊಳಿಸಿತು.

ರಾಣಿ ಕಿತ್ತೂರು ಚೆನ್ನಮ್ಮ ವೃತ್ತದಿಂದ ಆರಂಭವಾದ ಭವ್ಯ ಮೆರವಣಿಗೆಗೆ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು, ಸಮಾಜದ ಮುಖಂಡರು ಹಾಗೂ ಸಾವಿರಾರು ಬಸವಭಕ್ತರು ಸಾಕ್ಷಿಯಾದರು.

ಕೇಸರಿ ಧ್ವಜಗಳ ಅಲೆ, ‘ಜೈ ಬಸವ’ ಘೋಷಣೆ, ವಚನಗಳ ಪಠಣ, ಚಂಡೆ–ಮದ್ದಳೆಯ ಮೊಳಗು—ಇವೆಲ್ಲವೂ ಸೇರಿ ಕುಂದಾನಗರಿಯ ಹೃದಯದಲ್ಲಿ ಬಸವ ತತ್ವದ ಮಹೋತ್ಸವವನ್ನೇ ಸೃಷ್ಟಿಸಿತು.

ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಾಸ್ವಾಮೀಜಿ, ಕಾರಂಜಿ ಮಠದ ಶ್ರೀ ಗುರುಸಿದ್ದೇಶ್ವರ ಮಹಾಸ್ವಾಮೀಜಿ, ಹಂದಿಗುಂದದ ಶ್ರೀ ಶಿವಾನಂದ ಸ್ವಾಮೀಜಿ, ನಿಪ್ಪಾಣಿಯ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ, ಕಿತ್ತೂರು ಕಲ್ಮಠದ ಶ್ರೀ ಮಡಿವಾಳ ರಾಜಯೋಗೀಂದ್ರ ಮಹಾಸ್ವಾಮೀಜಿ, ಹುಕ್ಕೇರಿಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಸೇರಿದಂತೆ ಹಲವು ಮಠಾಧೀಶರ ಸಾನ್ನಿಧ್ಯದಲ್ಲಿ ಮೆರವಣಿಗೆಗೆ ಚಾಲನೆ ನೀಡಲಾಯಿತು

.ಸಚಿವೆ ಲಕ್ಷ್ಮಿ ಹೆಬ್ಬಾಳಕರ್, ಕೆಎಲ್‌ಇ ಗೌರವ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಶಾಸಕ ಗಣೇಶ ಹುಕ್ಕೇರಿ, ಶಾಸಕ ಆಸಿಫ್ ಸೇಠ್, ಶಾಸಕ ಬಾಬಾಸಾಹೇಬ ಪಾಟೀಲ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಹಾಪೌರ ಪ್ರೀತಿ ಕಾಮಕರ, ಉಪಮಹಾಪೌರ ಹನುಮಂತ ಕೊಂಗಾಲಿ, ಮಾಜಿ ಸಂಸದೆ ಮಂಗಲಾ ಅಂಗಡಿ, ಮಾಜಿ ಸಚಿವ ಎ.ಬಿ. ಪಾಟೀಲ್, ಮಾಜಿ ಶಾಸಕ ಅನಿಲ ಬೆನಕೆ, ಮಹಾಂತೇಶ ಕವಟಗಿಮಠ, ಬಸವ ಜಯಂತಿ ಉತ್ಸವ ಸಮಿತಿಯ ಮುಖ್ಯ ಸಂಚಾಲಕ ಬಸವರಾಜ ರೊಟ್ಟಿ, ವೀರಶೈವ ಮಹಾಸಭಾ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಮೆರವಣಿಗೆಯ ಮುಂಚೂಣಿಯಲ್ಲಿ ವಚನ ಕಟ್ಟುಗಳ ಪಲ್ಲಕ್ಕಿ ಭಕ್ತಿಭಾವವನ್ನು ಹೆಚ್ಚಿಸಿತು. ಉಡುಪಿಯಿಂದ ಆಗಮಿಸಿದ್ದ ಚಂಡೆ–ಮದ್ದಳೆ ತಂಡ, 16 ಅಡಿ ಎತ್ತರದ ಭವ್ಯ ಬಸವಣ್ಣನವರ ಮೂರ್ತಿ, ಬಸವಣ್ಣನವರ ಮೂರ್ತಿಯನ್ನು ಹೊತ್ತ ಡಿಜಿಟಲ್ ಆನೆ, ಝಾಂಜ್ ಪಥಕಗಳು, ಶಿವಶರಣೆಯರ ಆಕರ್ಷಕ ನೃತ್ಯ, ಕೋಲಾಟ ತಂಡ, ದಾವಣಗೆರೆಯ ಭಜನಾ ಮಂಡಳಿ, ಎಸ್‌ಜಿಬಿಐಟಿ ಕಾಲೇಜಿನ ರೂಪಕ ವಾಹನಗಳು ಹಾಗೂ ವಿವಿಧ ಟ್ಯಾಬ್ಲೋಗಳು ಮೆರವಣಿಗೆಯ ಕಣ್ಮನ ಸೆಳೆಯುವ ಆಕರ್ಷಣೆಗಳಾಗಿದ್ದವು.
ರಾಣಿ ಕಿತ್ತೂರು ಚೆನ್ನಮ್ಮ ವೃತ್ತದಿಂದ ಹೊರಟ ಮೆರವಣಿಗೆ ಕಾಕತಿ ವೇಸ್, ಶನಿವಾರ ಖೂಟ್, ಗಣಪತಿ ಗಲ್ಲಿ, ಮಾರುತಿ ಗಲ್ಲಿ, ಕಿರ್ಲೋಸ್ಕರ್ ರಸ್ತೆ ಮಾರ್ಗವಾಗಿ ಸಾಗಿತು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ನಾಗರಿಕರು ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಎಲ್ಲೆಡೆ ಬಸವಣ್ಣನವರ ಜಯಘೋಷ, ಬಸವಾದಿ ಶರಣರ ಸ್ಮರಣೆ, ವಚನಗಳ ನಾದ ಕೇಳಿಬಂತು.

ಮೆರವಣಿಗೆ ಲಿಂಗರಾಜ್ ಕಾಲೇಜು ಆವರಣದಲ್ಲಿ ಮುಕ್ತಾಯಗೊಂಡ ಬಳಿಕ ಅಲ್ಲಿ ಆಕರ್ಷಕ ಸಿಡಿಮದ್ದು ಪ್ರದರ್ಶನ ನಡೆಯಿತು. ಸಾವಿರಾರು ಬಸವಾನುಯಾಯಿಗಳು ಈ ದೃಶ್ಯವನ್ನು ಸಂಭ್ರಮದಿಂದ ವೀಕ್ಷಿಸಿದರು. ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆಯನ್ನೂ ಮಾಡಲಾಗಿತ್ತು.
ಮಾಜಿ ಸೈನಿಕರ ಸಂಘಟನೆಗಳ ಮಹಾ ಒಕ್ಕೂಟದ ಗೌರವಾಧ್ಯಕ್ಷ ರಮೇಶ್ ಚೌಗುಲಾ ಮತ್ತು ಅಧ್ಯಕ್ಷ ಜಗದೀಶ್ ಪೂಜಾರಿ ಅವರ ನೇತೃತ್ವದಲ್ಲಿ ನೂರಾರು ಸದಸ್ಯರು ಮೆರವಣಿಗೆ ಉದ್ದಕ್ಕೂ ಶಿಸ್ತು, ಸಂಚಾರ ಮತ್ತು ಭದ್ರತಾ ವ್ಯವಸ್ಥೆ ನೋಡಿಕೊಂಡರು. ಯಾವುದೇ ಅಹಿತಕರ ಘಟನೆ ನಡೆಯದಂತೆ ವ್ಯವಸ್ಥೆ ಕೈಗೊಂಡಿದ್ದು ವಿಶೇಷವಾಗಿತ್ತು.

ಒಟ್ಟಿನಲ್ಲಿ, ಬೆಳಗಾವಿಯ ಬಸವ ಜಯಂತಿ ಮೆರವಣಿಗೆ ಈ ಬಾರಿ ಕೇವಲ ಧಾರ್ಮಿಕ ಆಚರಣೆಯಾಗಿ ಉಳಿಯದೆ, ಸಮಾನತೆ, ಕಾಯಕ, ದಾಸೋಹ ಮತ್ತು ಮಾನವೀಯತೆಯ ಬಸವ ತತ್ವವನ್ನು ಜನಮನದಲ್ಲಿ ಪುನಃ ಮೊಳಗಿಸಿದ ಭವ್ಯ ಜನೋತ್ಸವವಾಗಿ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!