ಮುದ್ರಣ ಮಾಧ್ಯಮದ ‘ತಾಕತ್ತು’ ಇನ್ನೂ ಜೀವಂತ…!

ಸಾಮಾಜಿಕ ಜಾಲತಾಣಗಳ ನಡುವೆ ಮುದ್ರಣ ಮಾಧ್ಯಮದ ‘ತಾಕತ್ತು’ ಇನ್ನೂ ಜೀವಂತ.

ಇಂದು ಮಾಹಿತಿ ಯುಗ. ಫೇಸ್ಬುಕ್, ವಾಟ್ಸಪ್, ಟ್ವಿಟ್ಟರ್, ಯೂಟ್ಯೂಬ್—ಸಾಮಾಜಿಕ ಜಾಲತಾಣಗಳ ಜಗತ್ತು ಕ್ಷಣಕ್ಷಣಕ್ಕೂ ಸುದ್ದಿಗಳನ್ನು ಹರಡುತ್ತಿದೆ. ಯಾರು ಬೇಕಾದರೂ ಒಂದು ಪೋಸ್ಟ್ ಹಾಕಬಹುದು, ಒಂದು ವಿಡಿಯೋ ಹಂಚಬಹುದು.
ಆದರೆ ಈ ಎಲ್ಲದಕ್ಕೂ ಮಧ್ಯೆ ಇನ್ನೂ ತನ್ನ ವಿಶಿಷ್ಟ ಸ್ಥಾನವನ್ನು ಕಾಪಾಡಿಕೊಂಡಿರುವುದು ಮುದ್ರಣ ಮಾಧ್ಯಮ.
ಯಾಕೆಂದರೆ, ಸಾಮಾಜಿಕ ಜಾಲತಾಣದಲ್ಲಿ ಬಂದ ಮಾಹಿತಿಯನ್ನು ಹಲವರು “ನಿಜವೇ?” ಎಂದು ಅನುಮಾನದಿಂದಲೇ ನೋಡುತ್ತಾರೆ. ಅಂತಹ‌ ವಾತಾವರಣ ಇದೆ .

ಕೆಲವರು ತಮ್ಮ ಸಾಧನೆಗಳನ್ನೇ ತಮ್ಮ ಫೇಸ್ಬುಕ್ ಅಥವಾ ವಾಟ್ಸಪ್ ಸ್ಟೇಟಸ್‌ನಲ್ಲಿ ಹಾಕಿಕೊಂಡರೂ ಅದರ ಪರಿಣಾಮ ಅಷ್ಟಾಗಿ ಕಾಣಿಸುವುದಿಲ್ಲ.
ಅದು ಕೇವಲ ಒಂದು ಪೋಸ್ಟ್ ಆಗಿಯೇ ಉಳಿದುಬಿಡುತ್ತದೆ.
ಆದರೆ ಅದೇ ವಿಷಯ ಪತ್ರಿಕೆಯಲ್ಲಿ ವರದಿಯಾಗಿ ಪ್ರಕಟವಾದರೆ ಅದರ ತೂಕವೇ ಬೇರೆ
.
ಒಂದು ಸಣ್ಣ ಸುದ್ದಿಯೂ ಜನರ ಗಮನ ಸೆಳೆಯುತ್ತದೆ.
ಸರ್ಕಾರದ ಅಧಿಕಾರಿಗಳಿಗೂ, ಜನಪ್ರತಿನಿಧಿಗಳಿಗೂ ಅದು ಗಂಭೀರ ವಿಷಯವಾಗಿ ಕಾಣುತ್ತದೆ.
ಇದನ್ನು ಸ್ಪಷ್ಟವಾಗಿ ತೋರಿಸುವ ಮತ್ತೊಂದು ಸಂಗತಿ ಇದೆ.

ಸಾಮಾಜಿಕ ಜಾಲತಾಣದಲ್ಲಿ ಬಂದ ವರದಿಯನ್ನು ಆಧಾರ ಮಾಡಿಕೊಂಡು ವಿಧಾನಸಭೆ ಅಥವಾ ಸಂಸತ್ತಿನಲ್ಲಿ ಪ್ರಶ್ನೆ ಕೇಳಿದ ಉದಾಹರಣೆಗಳೇ ಬಹಳ ಕಡಿಮೆ. ಆದರೆ ಪತ್ರಿಕೆಯಲ್ಲಿ ಬಂದ ಒಂದು ವರದಿ ಅಧಿವೇಶನದಲ್ಲೇ ಪ್ರಸ್ತಾಪವಾಗುವಷ್ಟು ಪ್ರಭಾವ ಬೀರುತ್ತದೆ. ಅಷ್ಟೇ ಅಲ್ಲ, ನಿದ್ರಾವಸ್ಥೆಯಲ್ಲಿರುವ ಅಧಿಕಾರಿಗಳನ್ನೂ ಎಚ್ಚರಿಸುವ ಶಕ್ತಿಯೂ ಅದಕ್ಕಿದೆ ಎಂದರೆ ಅದು ಮುದ್ರಣ ಮಾಧ್ಯಮದ ಎಫೆಕ್ಟ್ ಎನ್ನಬಹುದು.

ಒಂದು ಸಣ್ಣ ಉದಾಹರಣೆ – ದೊಡ್ಡ ಪರಿಣಾಮ.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯು ಒಬ್ಬ ಬಡಪಾಯಿಗೆ ಮನೆಗೆ ಸಂಬಂಧಿಸಿದ ಹಕ್ಕು ಪತ್ರ ನೀಡಿತ್ತು. ಸುಮಾರು ಐದು ವರ್ಷಗಳಿಂದ ಅವರು ಅದೇ ಮನೆಯಲ್ಲಿ ವಾಸಿಸುತ್ತಿದ್ದರು.
ಆದರೆ ಅನಿರೀಕ್ಷಿತವಾಗಿ ಅದೇ ಮಂಡಳಿಯಿಂದ “ಹಕ್ಕು ಪತ್ರವನ್ನು ವಾಪಸ್ಸು ಕೊಡಿ” ಎಂಬ ನೋಟೀಸ್ ಬಂದಿದೆ.
ಇದರಿಂದ ಆತಂಕಗೊಂಡ ಆ ಬಡ ಮಹಿಳೆ ನ್ಯಾಯಕ್ಕಾಗಿ ಓಡಾಡುತ್ತಿದ್ದಳು.
ಈ ವಿಷಯ ‘ಸಂಯುಕ್ತ ಕರ್ನಾಟಕ’ ಪತ್ರಿಕೆಯ ಮುಖಪುಟದಲ್ಲಿ ವರದಿಯಾಗಿ ಪ್ರಕಟವಾಯಿತು.
ಅಷ್ಟೆ. ಆ ವರದಿ ಹೊರಬಿದ್ದ ತಕ್ಷಣವೇ ಪರಿಸ್ಥಿತಿ ಬದಲಾಯಿತು.
ಅದೇ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಆ ಮಹಿಳೆಯನ್ನು ಕರೆದು,
“ನೀವು ಅಲ್ಲಿಯೇ ವಾಸಿಸಿ, ಯಾವುದೇ ಸಮಸ್ಯೆ ಇಲ್ಲ”
ಎಂದು ಸ್ಪಷ್ಟಪಡಿಸಿದರು. ಇದು
ಮುದ್ರಣ ಮಾಧ್ಯಮದ ಶಕ್ತಿ

ಸಾಮಾಜಿಕ ಜಾಲತಾಣಗಳು ಎಷ್ಟೇ ಬಂದರೂ,
ಮಾಹಿತಿಯ ಜಗತ್ತು ಎಷ್ಟೇ ಬದಲಾಗಿದರೂ,
ಮುದ್ರಣ ಮಾಧ್ಯಮದ ವಿಶ್ವಾಸಾರ್ಹತೆ ಮತ್ತು ಪ್ರಭಾವ ಇನ್ನೂ ಕಡಿಮೆಯಾಗಿಲ್ಲ. ಒಂದು ಸಣ್ಣ ಸುದ್ದಿ ಕೂಡ ಸಮಾಜದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗುತ್ತದೆ.
ಅಧಿಕಾರಿಗಳಿಗೂ ಹೊಣೆಗಾರಿಕೆಯನ್ನು ನೆನಪಿಸುತ್ತದೆ.
ಸಾಮಾನ್ಯ ನಾಗರಿಕರಿಗೂ ನ್ಯಾಯ ದೊರಕುವಂತೆ ಮಾಡುತ್ತದೆ.
ಅದರಲ್ಲೇ ಮುದ್ರಣ ಮಾಧ್ಯಮದ ನಿಜವಾದ ಅರ್ಥ ಅಡಗಿದೆ — ಸತ್ಯವನ್ನು ಹೇಳುವ ಶಕ್ತಿ…
ಸಮಾಜವನ್ನು ಎಚ್ಚರಿಸುವ ತಾಕತ್ತು…
ನ್ಯಾಯಕ್ಕಾಗಿ ಧ್ವನಿ ಎತ್ತುವ ಹೊಣೆಗಾರಿಕೆ.

Leave a Reply

Your email address will not be published. Required fields are marked *

error: Content is protected !!